ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಆತ್ಮಹತ್ಯೆ
ಕಲಬುರಗಿ: ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯ ಕಟ್ಟಡದ ಮೇಲೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಗುರುವಾರ ಬೆಳಗಿನ ಜಾವ ವರದಿಯಾಗಿದೆ.
ಚಿತ್ತಾಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಲ್ಲಿಕಾರ್ಜುನ ಮೃತಪಟ್ಟವರು ಎಂದು ತಿಳಿದು ಬಂದಿದ್ದು, ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಕಟ್ಟಡದ ಮೇಲೆ ಬಂದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹದ ಪತ್ತೆಯಾಗಿದ್ದು ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಪಟ್ಟಂತೆ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಇಶಾ ಪಂತ್, 'ಚುನಾವಣಾ ಕರ್ತವ್ಯದ ನಿಮಿತ್ತ ಮಲ್ಲಿಕಾರ್ಜುನ ಅವರು ಫೈಯಿಂಗ್ ಸ್ಕ್ಯಾಡ್ ತಂಡದಲ್ಲಿದ್ದರು. ರಾತ್ರಿ 2.30ರ ಸಮಯದಲ್ಲಿ ಮೇಲೆ ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ' ಎಂದು ಮಾಹಿತಿ ನೀಡಿದರು.
ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಂಬಂಧಿಕರು ಧಾವಿಸಿದ್ದಾರೆ.