ಅಪ್ಪು ಹೆಸರನ್ನು ರಾಜಕಾರಣಕ್ಕೆ ಬಳಸಬೇಡಿ: ಪ್ರತಾಪ್ ಸಿಂಹಗೆ ನೆಟ್ಟಿಗರ ತರಾಟೆ

Update: 2023-05-04 13:29 GMT

ಮೈಸೂರು: ಸಂಸದ ಪ್ರತಾಪ ಸಿಂಹ ಅವರು ಪುನೀತ್‌ ರಾಜ್‌ ಕುಮಾರ್ ಹೆಸರು ಉಲ್ಲೇಖಿಸಿ ಮಾಡಿರುವ ಟ್ವೀಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹುಟ್ಟು ಹಾಕಿದೆ. ದಿವಂಗತ ಪುನೀತ್‌ ರಾಜ್‌ ಕುಮಾರ್‌ ಅವರ ಹೆಸರನ್ನು ರಾಜಕೀಯಕ್ಕೆ ಬಳಸಬಾರದೆಂದು ಪುನೀತ್‌ ಅಭಿಮಾನಿಗಳು ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ವರುಣಾದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಮತಪ್ರಚಾರಕ್ಕೆ ಇಳಿದಿರುವ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ರನ್ನು ಪರೋಕ್ಷವಾಗಿ ಕಾಲೆಳೆಯಲು ಪ್ರತಾಪ ಸಿಂಹ ಟ್ವೀಟ್‌ ಮಾಡಿದ್ದು, ಸಿದ್ದರಾಮಯ್ಯ ಅವರ ಎದುರಾಳಿ ಸೋಮಣ್ಣ ಪರ ರಾಘವೇಂದ್ರ ರಾಜಕುಮಾರ್‌ ಅವರು ಈ ಹಿಂದೆ ಮಾಡಿರುವ ಭಾಷಣದ ತುಣುಕನ್ನು ಹಂಚಿಕೊಂಡಿದ್ದಾರೆ. 

“ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವರ ಭಾವ ಭಕುತಿಗೆ...” ಎಂದು ಪ್ರತಾಪ ಸಿಂಹ ಟ್ವೀಟ್‌ ಮಾಡಿದ್ದಾರೆ. 

ಇದು ರಾಜ್‌ ಕುಟುಂಬದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನಿಮ್ಮ ರಾಜಕೀಯಕ್ಕಾಗಿ ಅಣ್ಣ-ತಮ್ಮಂದಿರ ನಡುವೆ ತಂದು ಹಾಕಬೇಡಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಅಣ್ಣ ತಮ್ಮಂದಿರ ಮಧ್ಯೆ ತಂದಿಡೋ ಶಕುನಿ ಆಗ್ಬಿಟ್ರಲ್ಲಾ! ಅಣ್ಣಾವ್ರ ಮಕ್ಕಳು ಒಗ್ಗಾಟ್ಟಾಗಿ ಇರ್ತಾರೆ. ಅವರ ಅಭಿಮಾನಿಗಳಿಗೆ ಸಿಗಬೇಡಿ ಅಪ್ಪಿತಪ್ಪಿ ಎಂದು ಸುದರ್ಶನ ಅನಿಕೇತನ ಎಂಬವರು ಟ್ವೀಟ್ ಮಾಡಿದ್ದಾರೆ. 

ಸಿದ್ದರಾಮಯ್ಯ ಅವರು ಮೈಸೂರಿಗೆ ಮಾಡಿರುವ ಅಭಿವೃದ್ಧಿಗಳ ಬಗ್ಗೆ ಹೊಗಳಿದ್ದ ಪ್ರತಾಪ ಸಿಂಹ ಅವರ ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡಿರುವ ಮತ್ತೊಬ್ಬ ನೆಟ್ಟಿಗರು, “ನೀವು ಸಿದ್ದರಾಮಯ್ಯರನ್ನು ಹೊಗಳಿದ್ದಿರಿ, ಈಗ ಅವರ ವಿರುದ್ಧ ಪ್ರಚಾರ ಮಾಡುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

Similar News