ಮೋದಿ ಭಾರತವನ್ನು ಪಾತಾಳದತ್ತ ಎಳೆದೊಯ್ಯುತ್ತಿದ್ದಾರೆ: ಸಿದ್ದರಾಮಯ್ಯ
''ರಾಜ್ಯವನ್ನು ಹೇಗೆ ನಂ.1 ಮಾಡಬೇಕೆಂದು ನಮಗೆ ಗೊತ್ತಿದೆ''
ಬೆಂಗಳೂರು, ಮೇ 4: ‘ಮೋದಿಯವರು ತಾವು ಈ ದೇಶದ ಪ್ರಧಾನಿ ಎಂಬುದನ್ನು ಮರೆತು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿಯಂತೆ ಮಾತನಾಡುತ್ತಿದ್ದಾರೆ. ಪ್ರತಿಬಾರಿ ಚುನಾವಣೆ ಬಂದಾಗಲೂ ಹೇಳಿದ್ದನ್ನೆ ಹೇಳುತ್ತಿದ್ದಾರೆ. ಬಿಜೆಪಿಯವರ ಸ್ಥಿತಿ ಹೇಗಿದೆಯೆಂದರೆ ಹೇಳಿಕೊಳ್ಳಲು ಒಂದೇ ಒಂದು ಕಾರ್ಯಕ್ರಮವಿಲ್ಲ. ಸಾಧನೆಯೂ ಇಲ್ಲ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಗುರುವಾರ ಪ್ರಕಟಣೆ ನೀಡಿರುವ ಅವರು, ‘ಮೋದಿ ಸಹಿತ ಬಿಜೆಪಿ ನಾಯಕರು ‘ಕರ್ನಾಟಕವನ್ನು ನಂಬರ್ ಒನ್ ಮಾಡುತ್ತೇವೆ’ ಎನ್ನುತ್ತಾರೆ. ಮೋದಿಯವರು ಹೋದ ಎಲ್ಲ ರಾಜ್ಯಗಳಲ್ಲೂ ಹೀಗೆ ಹೇಳುತ್ತಾರೆ. ಇಷ್ಟಕ್ಕೂ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿಯೆ ಕರ್ನಾಟಕವು ಅನೇಕ ವಿಚಾರಗಳಲ್ಲಿ ನಂಬರ್ ಒನ್ ಆಗಿತ್ತು. ಕೈಗಾರಿಕೆ, ಸೇವಾ ವಲಯಗಳಲ್ಲಿ ನಾವು ಮುಂದೆಯೇ ಇದ್ದೆವು. ಈ ಪ್ರತಿಷ್ಠೆಯನ್ನು ಹಾಳು ಮಾಡಿದ್ದೆ ಬಿಜೆಪಿ ಸರಕಾರ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೆ ಸ್ಥಾನದಲ್ಲಿದೆ. ಎಪ್ರಿಲ್ ತಿಂಗಳ ಜಿಎಸ್‍ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ 33.19ಸಾವಿರ ಕೋಟಿ ರೂ. ಸಂಗ್ರಹಿಸಿದ್ದರೆ, ಕರ್ನಾಟಕ 14.59ಸಾವಿರ ಕೋಟಿ ರೂ.ಸಂಗ್ರಹಿಸಿದೆ. ತಮಿಳುನಾಡು 11.55, ಗುಜರಾತ್ 11.72 ಸಾವಿರ ಕೋಟಿ ರೂ.ಸಂಗ್ರಹಿಸಿವೆ. ರಾಜ್ಯದಿಂದ ಈ ವರ್ಷ 2.4-2.5 ಲಕ್ಷ ಕೋಟಿ ರೂ.ಗಳಷ್ಟು ಆದಾಯ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯಿದೆ. ಈ ಎರಡರಿಂದಲೆ ಮೋದಿ ಸರಕಾರ ನಮ್ಮ ರಾಜ್ಯದಿಂದ 4.2 ಲಕ್ಷ ಕೋಟಿ ರೂ.ವರೆಗೆ ತೆರಿಗೆ ಸಂಗ್ರಹಿಸುತ್ತದೆ. ಐಟಿ ರಫ್ತಿನಲ್ಲಿ ರಾಜ್ಯದ ಪಾಲು ಶೇ.50ಕ್ಕೂ ಹೆಚ್ಚಿಗೆ ಇದೆ. ಆದರೆ ಮೋದಿ ಸರಕಾರ ನಮಗೆ ನೀಡುವ ತೆರಿಗೆ ಪಾಲು 37 ಸಾವಿರ ಕೋಟಿ ರೂ.ಮಾತ್ರ. ತೆರಿಗೆ ಹಂಚಿಕೆಯ ದರದಲ್ಲಿ ಇಡೀ ದೇಶದಲ್ಲಿಯೆ ಅತ್ಯಂತ ಕಡಿಮೆ ಪಾಲು ಪಡೆಯುವ ರಾಜ್ಯ ಕರ್ನಾಟಕ. ನಮಗೆ ಶೇ.42ರಷ್ಟು ಪಾಲು ಕೊಟ್ಟರೆ ವರ್ಷಕ್ಕೆ 2ಲಕ್ಷ ಕೋಟಿ ರೂ.ಗೂಹೆಚ್ಚು ಪಾಲನ್ನು ಕೊಡಬೇಕು. ಕೊಡಬೇಕಾದ್ದನ್ನು ಕೊಡದೆ ಕರ್ನಾಟಕವನ್ನು ದಮನಿಸುತ್ತಿರುವುದೆ ಬಿಜೆಪಿ ಸರಕಾರ. ಈ ಕುರಿತು ಮೋದಿಯವರು ಉಸಿರು ಬಿಡುತ್ತಿಲ್ಲ’ ಎಂದು ಅವರು ದೂರಿದ್ದಾರೆ.
ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 2014ರಲ್ಲಿ 55ನೆ ಸ್ಥಾನದಲ್ಲಿದ್ದ ದೇಶ 2022-23 ರಲ್ಲಿ 107ನೆ ಸ್ಥಾನಕ್ಕೆ ಕುಸಿದಿದೆ. ಲಿಂಗ ತಾರತಮ್ಯದಲ್ಲಿ 146 ದೇಶಗಳಲ್ಲಿ 114ನೆ ಸ್ಥಾನದಲ್ಲಿದ್ದ ದೇಶ ಈಗ 135ನೆ ಸ್ಥಾನಕ್ಕೆ ಕುಸಿದಿದೆ. ಪತ್ರಿಕಾ ಸ್ವಾತಂತ್ರ್ಯದಲ್ಲಿ 2014ರಲ್ಲಿ 140ನೆ ಸ್ಥಾನದಲ್ಲಿದ್ದ ಭಾರತ 161ನೆ ಸ್ಥಾನಕ್ಕೆ ಕುಸಿದಿದೆ. ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ 2016ರಲ್ಲಿ 66ರಲ್ಲಿ 2022ರಲ್ಲಿ 77ನೇ ಸ್ಥಾನಕ್ಕೆ ಕುಸಿದಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2014ರಲ್ಲಿ 130ನೆ ಸ್ಥಾನದಲ್ಲಿದ್ದ ಭಾರತ 2022ರಲ್ಲಿ 132ನೆ ಸ್ಥಾನಕ್ಕೆ ಕುಸಿದಿದೆ. 2011-12ರ ಸ್ಥಿರ ಬೆಲೆಗಳಲ್ಲಿ ತಲಾದಾಯವು 2014-15ರಲ್ಲಿ 72,805 ರೂ.ಗಳಿದ್ದರೆ 2022-23ರಲ್ಲಿ 98 ಸಾವಿರ ರೂ.ಗಳಾಗಿದೆ. 9 ವರ್ಷಗಳಲ್ಲಿ ಹೆಚ್ಚಾದ ತಲಾದಾಯ ಕೇವಲ 15 ಸಾವಿರ ರೂ.ಗಳು ಮಾತ್ರ. ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಸುಮಾರು 10ಲಕ್ಷ ಕೋಟಿ ರೂ.ಗಳಿದ್ದರೆ, ರಫ್ತು ಮಾಡುವ ಪ್ರಮಾಣ 3ಲಕ್ಷ ಕೋಟಿ ರೂ.ಗಳಷ್ಟೂಇಲ್ಲ. ಹಾಗಿದ್ದರೆ ಮೇಕ್ ಇನ್ ಇಂಡಿಯಾ ಘೋಷಣೆ ಎಲ್ಲಿ? ಎಂದು ಪ್ರಶ್ನೆ ಮಾಡಿದ್ದಾರೆ.
2014ರಲ್ಲಿ ಪ್ರತಿಯೊಬ್ಬರ ತಲೆಯ ಮೇಲೆ 57ಸಾವಿರ ರೂ.ಸಾಲವಿದ್ದರೆ, 2023ರಲ್ಲಿ 1.90 ಲಕ್ಷ ರೂ.ಗಳಷ್ಟಾಗಿದೆ. ಅಡುಗೆ ಗ್ಯಾಸ್, ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ, ಅಕ್ಕಿ, ಬೇಳೆ ಸೇರಿದಂತೆ ಎಲ್ಲ ಬೆಲೆಗಳು ದುಪ್ಪಟ್ಟಾಗಿವೆ. ಎಲ್ಲ ರೀತಿಯಲ್ಲೂ ಜನರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಸಣ್ಣ ಕೈಗಾರಿಕೆಗಳನ್ನು ಮುಚ್ಚುತ್ತಿರುವುದರಿಂದ ನಿರುದ್ಯೋಗ ತಾರಕಕ್ಕೇರುತ್ತಿದೆ. ಸೇವಾ ವಲಯದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ದಾಂಗುಡಿಯಿಡುತ್ತಿರುವದರಿಂದ ಕೋಟ್ಯಾಂತರ ಹುದ್ದೆಗಳು ಕಣ್ಮರೆಯಾಗುತ್ತವೆ. ಈಗಾಗಲೆ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸನ್ನು ಹೇಗೆ ನಿಭಾಯಿಸಬೇಕು ಎಂದು ಕಾನೂನು ಮಾಡಿವೆ. ನಮ್ಮಲ್ಲಿ ಮೋದಿ ಸರಕಾರ ಕಣ್ಣು ಮುಚ್ಚಿ ಕೂತಿದೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮೋದಿಯವರು ಅದಾನಿ, ಅಂಬಾನಿ ಮುಂತಾದ ಕೆಲವೇ ಕಾರ್ಪೊರೇಟ್ ಕಂಪೆನಿಗಳನ್ನು ಉದ್ಧಾರ ಮಾಡುತ್ತಿದ್ದಾರೆ, ದೇಶದ 140 ಕೋಟಿ ಜನರನ್ನು ದಿನೇ ದಿನೇ ಬಿಕ್ಕಟ್ಟಿಗೆ ನೂಕುತ್ತಿದ್ದಾರೆ. ಈಗ ಕರ್ನಾಟಕದ ಮೇಲೆ ಬಿಜೆಪಿಯವರೆಲ್ಲ ಮುಗಿಬಿದ್ದಿರುವ ಕಾರಣ ಏನು ಗೊತ್ತೆ? ಅಂಬಾನಿಯ ಕಣ್ಣು ನಮ್ಮ ನಂದಿನ ಹಾಲಿನ ಮೇಲೆ ಇದೆ. ಅದಾನಿಯ ಕಣ್ಣು ನಮ್ಮ ರೈತರ ಕೃಷಿ ಉತ್ಪನ್ನಗಳ ಮೇಲೆ, ನಮ್ಮ ವಿದ್ಯುತ್ತಿನ ಮೇಲೆ ಇದೆ ಎಂದು ಎಚ್ಚರಿಸಿದ್ದಾರೆ.
ಪವಿತ್ರ ಹನುಮನ ನೆಲವಾದ ಬಳ್ಳಾರಿಯ ಬೆಟ್ಟಗಳ ಒಡಲು ಬಗೆದು ಅದಿರು ವಿದೇಶಗಳಿಗೆ ಮಾರಿದ ದುಡ್ಡಲ್ಲಿ ಬಿಜೆಪಿಯು ದೇಶದಲ್ಲಿ ಪಾರ್ಟಿ ಕಟ್ಟಿತು. ಈಗ 40 ಪರ್ಸೆಂಟ್ ಕೊಳ್ಳೆ ಹೊಡೆದು ಕೊಬ್ಬಿ ಕೂತಿದೆ. ಕರ್ನಾಟಕವನ್ನು ಎಲ್ಲ ರೀತಿಯಲ್ಲೂ ಸುಲಿಗೆ ಮಾಡಿ ಎಟಿಎಂ ಮಾಡಿಕೊಂಡಿರುವುದು ಬಿಜೆಪಿ ಪಕ್ಷ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
‘ಮೋದಿಯವರೇ ನೀವು ಮೊದಲು ಕುಸಿದು ಹೋಗಿರುವ ಭಾರತದ ಚೈತನ್ಯವನ್ನು ಮೇಲೆತ್ತಿ. ಕರ್ನಾಟಕಕ್ಕೆ ದ್ರೋಹ ಮಾಡದೆ ಕೊಡಬೇಕಾದ ಅನುದಾನಗಳನ್ನು ಕೊಡಿ. ರಾಜ್ಯವನ್ನು ಹೇಗೆ ಮುನ್ನಡೆಸಬೇಕು, ನಂ.1 ಮಾಡಬೇಕೆಂದು ನಮಗೆ ಗೊತ್ತಿದೆ. ಯಾವುದೆ ನಾಡಿನ ಅಭಿವೃದ್ಧಿ ನಿರ್ಧಾರವಾಗುವುದು ಅಲ್ಲಿನ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಹೇಗಿದೆ ಎಂಬುದರ ಮೇಲೆ ಎಂಬುದು ತಿಳಿದಿರಲಿ. ಮುಂದಿನ 3 ದಿನ ರಾಜ್ಯದಲ್ಲಿರುತ್ತೀರಿ. ದಯಮಾಡಿ ನಿಮ್ಮ ಅಳು ನಿಲ್ಲಿಸಿ ಕರ್ನಾಟಕಕ್ಕೆ ಏನು ಕೊಟ್ಟಿದ್ದೀರಿ ಎಂಬುದನ್ನು ಮಾತನಾಡಿ. ನಿಮ್ಮ ದ್ರೋಹದ ಟ್ರಬಲ್ ಎಂಜಿನ್ ಸರಕಾರದಿಂದ ಕರ್ನಾಟಕದ ಜನರು ಅಳುವಂತಾಗಿದೆ. ರಾಜ್ಯವು ಉಳಿಯಬೇಕಾದರೆ, ತನ್ನ ವೈಭವವನ್ನು ಉಳಿಸಿಕೊಳ್ಳಬೇಕಾದರೆ ಜನರು ಬಿಜೆಪಿಯನ್ನು ಸೋಲಿಸಿ ಮನೆಗೆ ಕಳಿಸುವುದೊಂದೆ ದಾರಿ ಎಂಬ ಮಾತನ್ನು ಸಾವಧಾನದಿಂದ ಯೋಚಿಸಿ ತೀರ್ಮಾನಿಸಬೇಕೆಂದು ನಾಡಿನ ಜನರನ್ನು ಕೇಳಿಕೊಳ್ಳುತ್ತೇನೆ’
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ