''ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಎದುರಿಸುವುದು ‘ಬಿ ರಿಪೋರ್ಟ್’ ತೆಗದುಕೊಂಡಷ್ಟು ಸುಲಭವಲ್ಲ''

ಈಶ್ವರಪ್ಪಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು

Update: 2023-05-04 14:47 GMT

ಕಲಬುರಗಿ, ಮೇ 4: ‘ಬಜರಂಗ ದಳ ನಿಷೇಧ ಮಾಡುತ್ತೇವೆ’ ಎಂಬ ಘೋಷಣೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪ್ರಣಾಳಿಕೆ ಪ್ರತಿಗೆ ಬೆಂಕಿ ಹಚ್ಚಿ ‘ದೇಶದ್ರೋಹಿ ಕಾಂಗ್ರೆಸ್ ಪಕ್ಷ’ ಎಂದು ಕಿಡಿಕಾರಿದ್ದಾರೆ.

ಇದರಿಂದ ಕೆರಳಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ‘ರಾಜಕೀಯ ಅಪ್ರಬುದ್ಧತೆ, ಅವಿವೇಕಿತನದಿಂದ ಪಕ್ಷದಿಂದಲೇ ಹೊರದಬ್ಬಲ್ಪಟ್ಟಿರುವ ಈಶ್ವರಪ್ಪ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸುಟ್ಟಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಬೆಂಕಿ ಇಟ್ಟು ‘ಬಿ ರಿಪೋರ್ಟ್’ ತೆಗದುಕೊಂಡಷ್ಟೇ ಸುಲಭವಲ್ಲ ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಎದುರಿಸುವುದು. ಜನರ ತೀರ್ಪು ಸಿದ್ಧವಾಗಿದೆ, ಎದುರಿಸಲು ಸಿದ್ಧತೆ ಮಾಡಿಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.

ಗುರುವಾರ ಕಲಬುರಗಿ ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಈಶ್ವರಪ್ಪ, ‘ಕಾಂಗ್ರೆಸ್ ಪ್ರಣಾಳಿಕೆ ಪ್ರತಿ ಸುಟ್ಟು ಹಾಕುವ ಮೂಲಕ ಕಾಂಗ್ರೆಸ್ ಧರ್ಮವಿರೋಧಿ ಧೋರಣೆ ಅನುಸರಿಸುತ್ತಿದೆ. ಬಜರಂಗ ದಳ ನಿಷೇಧ ಘೋಷಣೆಯಿಂದ ನಮಗೆ ನೋವಾಗಿದೆ. ಕಾಂಗ್ರೆಸ್ ಮನಸ್ಥಿತಿಯನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

‘ಎಲ್ಲ ಮುಸ್ಲಿಂಮರು ಒಂದೇ ರೀತಿಯಲ್ಲ. ಕೆಲ ಮುಸ್ಲಿಂರು ಕಾಂಗ್ರೆಸ್‍ನ ವಿರುದ್ಧವಾಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ, ಮುಸ್ಲಿಂ ಲಿಗ್‍ನ ಪ್ರಣಾಳಿಕೆ, ಮುಹಮದ್ ಆಲಿ ಜಿನ್ನಾನ ಪ್ರಣಾಳಿಕೆಯಾಗಿದೆ. ಮುಸ್ಲಿಮರ ತುಷ್ಟಿಕರಣ ಮಾಡಲು ಕಾಂಗ್ರೆಸ್ ಹೊರಟಿದೆ. ಆದರೆ, ಕಾಂಗ್ರೆಸ್ ಪ್ರಯತ್ನ ವಿಫಲವಾಗುತ್ತದೆ’ ಎಂದು ಈಶ್ವರಪ್ಪ ಹೇಳಿದ್ದರು.

ಎಲ್ಲ ರಾಷ್ಟ್ರ ಭಕ್ತರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಹಿಷ್ಕರಿಸಬೇಕು. ಹನುಮನ ಬಾಲಕ್ಕೆ ಬೆಂಕಿ ಕೊಟ್ಟ ರಾವಣ ನಾಶವಾಗಿದ್ದಾನೆ. ಹನುಮನ ತಂಟೆಗೆ ಬಂದಿರುವ ಕಾಂಗ್ರೆಸ್ ವಿರೋಧ ಪಕ್ಷ ಸ್ಥಾನವನ್ನು ಕಳೆದುಕೊಳ್ಳುತ್ತದೆ. ಧರ್ಮ ರಕ್ಷಣೆ ಮಾಡುವ ಸಂಘಟನೆ ನಿಷೇಧ ಮಾಡುವ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಬೇಕು ಎಂದು ಈಶ್ವರಪ್ಪ ಕರೆ ನೀಡಿದ್ದರು.

Similar News