ಶಿವರಾಜ್ ಕುಮಾರ್ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿರುವುದು ಬೇಸರ ತರಿಸಿದೆ: ಬಿಜೆಪಿ ಅಭ್ಯರ್ಥಿ ಸೋಮಣ್ಣ
ಮೈಸೂರು,ಮೇ.4: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿನ ಹತಾಶೆಯಿಂದ ಸಿನೆಮಾ ಸ್ಟಾರ್ ಗಳನ್ನು ಕರೆದುಕೊಂಡು ಬಂದು ಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿರುವುದು ಬೇಸರ ತರಿಸಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಹತಾಶರಾಗಿ ಸ್ಟಾರ್ ಗಳನ್ನು ಕರೆಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರಕ್ಕೆ ಒಂದೇ ದಿನ ಪ್ರಚಾರಕ್ಕೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಈಗ ಮತ್ತೆ ಮತ್ತೆ ಬರುತ್ತಿದ್ದಾರೆ. ರಾಜಕುಮಾರ್ ಕುಟುಂಬಕ್ಕೂ ನನಗೂ 40 ವರ್ಷದ ಅವಿನಾಭಾವ ಸಂಬಂಧವಿದೆ. ಪುನೀತ್ ರಾಜಕುಮಾರ್ ಹೆಸರಿನಲ್ಲಿ ನಮ್ಮ ಕ್ಷೇತ್ರದಲ್ಲಿ ಬೃಹತ್ ಆಸ್ಪತ್ರೆ ಕಟ್ಟಿಸಿದ್ದೇನೆ. ನನಗೆ ವಿಜಯ್, ರಮ್ಯಾ ಬಗ್ಗೆ ಗೊತ್ತಿಲ್ಲ ಆದರೆ ಶಿವರಾಜ್ ಕುಮಾರ್ ಯಾಕೆ ಹೀಗೆ ಮಾಡಿದರು ಗೊತ್ತಿಲ್ಲ ಅಷ್ಟೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊರಗಿನವರಿಂದ ವರುಣಾ ಕ್ಷೇತ್ರ ಅಭಿವೃದ್ದಿ ಆಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ವಿ ಸೋಮಣ್ಣ, ತಮ್ಮ ಮನೆಯ ಕೋಳಿ ಕೂಗಿದರೆ ಮಾತ್ರ ಬೆಳಕು ಎಂಬಂತೆ ಹೇಳಿದ್ದಾರೆ. ಸಿದ್ದರಾಮಯ್ಯ ಮನಸ್ಸು ಮಾಡಿದರೆ ವರುಣಾ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಈ ಕ್ಷೇತ್ರದಲ್ಲಿ ಒಂದು ಕಾಲೇಜು ಇಲ್ಲ, ಆಸ್ಪತ್ರೆ ಇಲ್ಲ, ಸರಿಯಾದ ರಸ್ತೆಗಳಿಲ್ಲ. ಎಲ್ಲದ್ದಕ್ಕೂ ನಾನೇ ಎಂಬುವುದನ್ನು ಸಿದ್ದರಾಮಯ್ಯ ಮೊದಲು ಬಿಡಲಿ. ವರುಣಾ ಕ್ಷೇತ್ರದ ಜನರು ಗೆಲ್ಲಿಸಿದರೆ ನಾನು ವರುಣಾದಲ್ಲೇ ಇರುತ್ತೇನೆ. ವರುಣಾ ಕ್ಷೇತ್ರದಲ್ಲೇ ಶಾಶ್ವತವಾಗಿ ಮನೆ ಮಾಡುತ್ತೇನೆ ಎಂದು ತಿಳಿಸಿದರು.