ಕೇಶವಾನಂದ ಭಾರತಿ ಪ್ರಕರಣದ ತೀರ್ಪಿಗೆ ಸುವರ್ಣ ಮಹೋತ್ಸವ

Update: 2023-05-04 18:36 GMT

ಮು.ನ್ಯಾ. ಸಿಕ್ರಿ ಅವರ ನಿವೃತ್ತಿಯ ದಿನದಂದೇ ಪ್ರಕಟಗೊಂಡ ಕೇಶವಾನಂದ ಭಾರತಿ ಪ್ರಕರಣದ ತೀರ್ಪು, 24ನೇ ತಿದ್ದುಪಡಿಯಲ್ಲಿ ಅಳವಡಿಸಿದ್ದ ವಿಧಿ 368(3) ಹಾಗೂ ವಿಧಿ 13ರ ಖಂಡ 1ನ್ನು ಎತ್ತಿಹಿಡಿಯಿತು. ತೀರ್ಪು ಕುರಿತು ಪಾಲ್ಖೀವಾಲಾ ‘‘ಸಂವಿಧಾನವನ್ನು ಅಳವಡಿಸಿಕೊಂಡ ದಿನವಾದ ನವೆಂಬರ್ 26,1949ರಂತೆ ಇದು ಚರಿತ್ರಾರ್ಹ, ಸಂಭ್ರಮಿಸಬೇಕಾದ ದಿನ’’ ಎಂದರು. ಈ ದಾಖಲೆ ಎಷ್ಟು ಮಹತ್ವದ್ದು ಎಂದರೆ, ಹಲವು ದೇಶಗಳ ಸಾಂವಿಧಾನಿಕ ಚಿಂತನೆಯಲ್ಲಿ ಅದು ಅಳವಡಿಕೆಯಾಗಿದೆ.


ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಂದ ‘ಮುಂದಿನ ದಾರಿ ಸುರುಳಿ ಸುತ್ತಿಕೊಂಡಂತೆ ಇರುವಾಗ ಸಂವಿಧಾನದ ವ್ಯಾಖ್ಯಾನಕಾರರು ಹಾಗೂ ಅನುಷ್ಠಾನಗೊಳಿಸುವವರಿಗೆ ದಾರಿ ತೋರಿಸುವ ಅಶ್ವಿನಿ ನಕ್ಷತ್ರ ಈ ಮೂಲಭೂತ ಸಂರಚನೆ ದಾಖಲೆ’ ಎಂದು ಶ್ಲಾಘಿಸಿಕೊಂಡ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿಗೆ ಇದು ಸುವರ್ಣ ಮಹೋತ್ಸವ ವರ್ಷ.

ಆಗಿನ ಸುಪ್ರೀಂ ಕೋರ್ಟ್ ಮು.ನ್ಯಾ. ಎಸ್.ಎಂ. ಸಿಕ್ರಿ ನೇತೃತ್ವದ 13 ನ್ಯಾಯಮೂರ್ತಿಗಳ ಪೀಠದ ಮುಂದೆ ಇದ್ದ ಪ್ರಶ್ನೆ ಇದು: ಸಂಸತ್ತಿಗೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಅನಿರ್ಬಂಧಿತ ಅಧಿಕಾರವಿದೆಯೇ? ಅಕ್ಟೋಬರ್ 31, 1972ರಂದು ವಿಚಾರಣೆ ಆರಂಭಗೊಂಡು, ಎಪ್ರಿಲ್ 24, 1973ರಂದು 700 ಪುಟಗಳ ತೀರ್ಪು ಹೊರಬಂದಿತು. ಪೀಠ 7-6 ಬಹುಮತದಲ್ಲಿ ‘‘ಸಂವಿಧಾನದ ಮೂಲಭೂತ ಸಂರಚನೆಯನ್ನು ಪ್ರಶ್ನಿಸಲಾಗದು ಮತ್ತು ಬದಲಿಸಲಾಗದು’’ ಎಂಬ ಚಾರಿತ್ರಿಕ ತೀರ್ಪು ನೀಡಿತು. ಪೀಠದಲ್ಲಿ ಮು.ನ್ಯಾ. ಎಸ್.ಎಂ. ಸಿಕ್ರಿ, ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಎ.ಕೆ. ಮುಖರ್ಜಿ, ಜೆ.ಎಂ. ಶೇಲಟ್, ಎ.ಎನ್. ಗ್ರೋವರ್, ಪಿ. ಜಗನ್ಮೋಹನ ರೆಡ್ಡಿ, ಡಿ.ಜಿ. ಪಾಳೇಕರ್, ವೈ.ವಿ. ಚಂದ್ರಚೂಡ್, ಎಚ್.ಆರ್. ಖನ್ನಾ, ಎ.ಎನ್.ರೇ, ಕೆ.ಕೆ. ಮ್ಯಾಥ್ಯೂ, ಎಂ.ಎಚ್. ಬೇಗ್ ಮತ್ತು ಎಸ್.ಎನ್. ದ್ವಿವೇದಿ ಇದ್ದರು. ನಾನಾಭಾಯ್ ಅರ್ದೇಶಿರ್ ಪಾಲ್ಖೀವಾಲಾ, ಫಾಲಿ ಎಸ್. ನಾರಿಮನ್, ಸೋಲಿ ಸೊರಾಬ್ಜಿ ಮತ್ತಿತರರು ಅರ್ಜಿದಾರರ ಪರವಾಗಿ ಹಾಗೂ ಹೊರ್ಮುಲಸ್‌ಜಿ ಎಂ. ಸೀರ್ವಾಯ್, ನಿರೇನ್ ಡೇ, ಅಂಧ್ಯಾರ್ಜುನ ಇನ್ನಿತರರು ರಾಜ್ಯ/ಕೇಂದ್ರ ಸರಕಾರದ ಪರವಾಗಿ ವಾದ ಮಂಡಿಸಿದ್ದರು.

ಎಡನೀರು ಮಠದ ಕೇಶವಾನಂದ ಭಾರತಿ ಮತ್ತಿತರರು / ಕೇರಳ ರಾಜ್ಯ ಮತ್ತು ಇನ್ನಿತರರು(ದಾವೆ ಸಂಖ್ಯೆ 135,1970) ಪ್ರಕರಣವನ್ನು ಮೂಲಭೂತ ಹಕ್ಕುಗಳ ಪ್ರಕರಣ ಎಂದೂ ಕರೆಯುತ್ತಾರೆ. ಮಠದ ಆಸ್ತಿಗಳ ನಿರ್ವಹಣೆ ಮೇಲೆ ನಿರ್ಬಂಧ ಹೇರಿದ್ದ ಭೂಸುಧಾರಣೆ ಕಾಯ್ದೆಗಳನ್ನು ಕೇಶವಾನಂದ ಭಾರತಿ ನ್ಯಾಯಾಲಯದಲ್ಲಿ ಫೆಬ್ರವರಿ 1970ರಲ್ಲಿ ಪ್ರಶ್ನಿಸಿದರು.

ಪ್ರಜಾಪ್ರಭುತ್ವ, ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರದ ವರ್ಗೀಕರಣ, ಮೂಲಭೂತ ಹಕ್ಕುಗಳು, ಧರ್ಮನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ ಮತ್ತು ಜಾತ್ಯತೀತತೆ ಸೇರಿದಂತೆ ಸಂವಿಧಾನದ ಮೂಲ ಸಂರಚನೆಯನ್ನು ಬದಲಿಸುವ ತಿದ್ದುಪಡಿಗಳನ್ನು ತರದಂತೆ ತೀರ್ಪು ನಿರ್ಬಂಧಿಸುತ್ತದೆ. ಆದರೆ, ‘ಮೂಲಭೂತ ಚೌಕಟ್ಟು’ ಎಂದರೇನು ಎನ್ನುವುದನ್ನು ವಿವರಿಸುವುದಿಲ್ಲ. ಇದೊಂದು ತಾರ್ಕಿಕ ಆದೇಶ. ಏಕೆಂದರೆ, ಸಂವಿಧಾನದ ಸೃಷ್ಟಿಯಾದ ಸಂಸತ್ತು, ತನ್ನದೇ ಮೂಲಭೂತ ಸಂರಚನೆಯನ್ನು ತಿದ್ದುವ ಅಧಿಕಾರ ಹೊಂದಿರಬಾರದು. ಈ ದಾಖಲೆಯ ಮಹತ್ವ ಎಷ್ಟಿದೆಯೆಂದರೆ, ಹಲವು ದೇಶಗಳ ಸಾಂವಿಧಾನಿಕ ಚಿಂತನೆಯಲ್ಲಿ ಅದನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯಕ್ಕೆ ಅದು ಬಲಿಷ್ಠ ಅಡಿಪಾಯ ನೀಡಿದ್ದು, ಸ್ಥಿರತೆಯನ್ನು ತಂದುಕೊಟ್ಟಿದೆ. ಈ ದಾಖಲೆ ನ್ಯಾಯಾಲಯಗಳ ಹಲವು ಆದೇಶಗಳ ಮೂಲಕ ವಿಕಸನಗೊಂಡಿದ್ದು, ಅದರಲ್ಲಿ ಮುಖ್ಯವಾದದ್ದು 1967ರ ಗೋಲಕ್‌ನಾಥ್ / ಪಂಜಾಬ್ ಸರಕಾರ ಪ್ರಕರಣದ ತೀರ್ಪು. ಮೂಲಭೂತ ಹಕ್ಕುಗಳನ್ನು ಸಂಸತ್ತು ತಿದ್ದುಪಡಿ ಮಾಡಬಾರದು ಎಂದು ಈ ಆದೇಶ ಹೇಳಿತ್ತು.

ಸರಳವಾಗಿ ನೋಡಿದರೆ, ವಿಧಿ 368 ಸಂವಿಧಾನದ ಯಾವುದೇ ಶರತ್ತುಗಳನ್ನು ಬದಲಿಸುವ ಸಂಸತ್ತಿನ ಅಧಿಕಾರವನ್ನು ನಿರ್ಬಂಧಿಸುವುದಿಲ್ಲ. ಈ ವಿಧಿಯನ್ನು ಬಳಸಿಕೊಂಡು ಸಂವಿಧಾನಕ್ಕೆ ತರುವ ತಿದ್ದುಪಡಿಗಳು ಮೂಲಭೂತ ಹಕ್ಕುಗಳಡಿ ಪುನರ್ವಿಮರ್ಶೆಗೊಳಪಡುತ್ತವೆ. ಅದೇ ಹೊತ್ತಿನಲ್ಲಿ ನ್ಯಾಯಾಲಯವು ಸಂವಿಧಾನದ ‘ಮೂಲ ಚೌಕಟ್ಟಿ’ಗೆ ಧಕ್ಕೆ ತಾರದ ನಿರ್ದೇಶಕ ಸೂತ್ರಗಳಿಗೆ ತರುವ ತಿದ್ದುಪಡಿಯನ್ನು ಅನುಷ್ಠಾನಗೊಳಿಸಲು ವಿಧಿ 31-ಸಿಯ ಮೊದಲ ನಿಯಮದ ಸಂವಿಧಾನಾತ್ಮಕತೆಯನ್ನು ಎತ್ತಿ ಹಿಡಿಯಿತು. ‘‘ಸಂಸತ್ತಿಗೆ ವಿಶಾಲ ವ್ಯಾಪ್ತಿಯ ಅಧಿಕಾರವಿದ್ದರೂ, ಸಂವಿಧಾನದ ಮೂಲಭೂತ ಲಕ್ಷಣಗಳ ಆಧಾರ ಅಂಶಗಳನ್ನು ನಾಶಪಡಿಸುವ ಅಥವಾ ದುರ್ಬಲಗೊಳಿಸುವ ಅಧಿಕಾರವಿಲ್ಲ. ಸಂವಿಧಾನದ ತಿರುಳು ಇಲ್ಲವೇ ಮೂಲಭೂತ ಚೌಕಟ್ಟನ್ನು ಬದಲಿಸದಿದ್ದರೆ ಇಲ್ಲವೇ ಮರುಪರಿಶೀಲಿಸದಿದ್ದರೆ, ಶಾಸಕಾಂಗವು ಸಂವಿಧಾನದ ಯಾವುದೇ ಶರತ್ತುಗಳನ್ನು ಬದಲಿಸಬಹುದು’’ ಎಂದಿತು.

ಪ್ರಧಾನಿ ಇಂದಿರಾಗಾಂಧಿ 1969ರಲ್ಲಿ 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದರು; ರಾಜ್ಯಗಳನ್ನು ದೇಶಕ್ಕೆ ಸೇರಿಸಿಕೊಂಡ ಬಳಿಕ ರಾಜರಿಗೆ ರಾಜಧನ ನೀಡುವುದಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ್ದರು. 1971ರಲ್ಲಿ ರಾಜಧನ(ಪ್ರೈವಿ ಪರ್ಸ್)ವನ್ನು ರದ್ದುಗೊಳಿಸಲಾಯಿತು. ಮಾಧವರಾವ್ ಸಿಂಧಿಯಾ ಇದನ್ನು ಪ್ರಶ್ನಿಸಿದರು. ಇಂದಿರಾಗಾಂಧಿ ಸರಕಾರ ತಂದ ಬಹುಮುಖ್ಯ ಎನ್ನಬಹುದಾದ 24, 25, 26 ಮತ್ತು 29ನೇ ತಿದ್ದುಪಡಿಗಳು ಗೋಲಕ್‌ನಾಥ್(1967), ರುಸ್ತುಂ ಕವಾಸ್ಜೀ ಕೂಪರ್ ಮತ್ತು ಮಾಧವರಾವ್ ಸಿಂಧಿಯಾ(1970) ಪ್ರಕರಣಗಳ ತೀರ್ಪನ್ನು ಬುಡಮೇಲು ಮಾಡುವ ಯತ್ನಗಳಾಗಿದ್ದವು.

ದಂತಕತೆಯಂಥ ತೀರ್ಪು

ಎಂ.ಸಿ. ಛಗ್ಲಾ ಹಾಗೂ ಸಿ.ಕೆ. ದಫ್ತರಿ ವಯಸ್ಸಿನ ಕಾರಣ ನೀಡಿ ಹಿಂದೆ ಸರಿದಿದ್ದರಿಂದ, ಅರ್ಜಿದಾರರ ಪರ ವಾದಿಸುವ ಜವಾಬ್ದಾರಿ ಎನ್.ಎ. ಪಾಲ್ಖೀವಾಲಾ ಅವರ ಹೆಗಲಿಗೇರಿತು. ಮು.ನ್ಯಾ. ಸಿಕ್ರಿ ಅವರ ನಿವೃತ್ತಿಯ ದಿನದಂದೇ ಪ್ರಕಟಗೊಂಡ ಕೇಶವಾನಂದ ಭಾರತಿ ಪ್ರಕರಣದ ತೀರ್ಪು, 24ನೇ ತಿದ್ದುಪಡಿಯಲ್ಲಿ ಅಳವಡಿಸಿದ್ದ ವಿಧಿ 368(3) ಹಾಗೂ ವಿಧಿ 13ರ ಖಂಡ 1ನ್ನು ಎತ್ತಿಹಿಡಿಯಿತು. ತೀರ್ಪು ಕುರಿತು ಪಾಲ್ಖೀವಾಲಾ ‘‘ಸಂವಿಧಾನವನ್ನು ಅಳವಡಿಸಿಕೊಂಡ ದಿನವಾದ ನವೆಂಬರ್ 26,1949ರಂತೆ ಇದು ಚರಿತ್ರಾರ್ಹ, ಸಂಭ್ರಮಿಸಬೇಕಾದ ದಿನ’’ ಎಂದರು. ಈ ದಾಖಲೆ ಎಷ್ಟು ಮಹತ್ವದ್ದು ಎಂದರೆ, ಹಲವು ದೇಶಗಳ ಸಾಂವಿಧಾನಿಕ ಚಿಂತನೆಯಲ್ಲಿ ಅದು ಅಳವಡಿಕೆಯಾಗಿದೆ. ಮಹಾರಾಷ್ಟ್ರ ಪರ ವಕೀಲ ಎಚ್.ಎಂ. ಸೀರ್ವಾಯ್ ಅವರ ಕಿರಿಯ ವಕೀಲ ಅಂಧ್ಯಾರ್ಜುನ ಪ್ರಕರಣ ಕುರಿತು ‘‘ದ ಕೇಶವಾನಂದ ಭಾರತಿ ಕೇಸ್-ದ ಅನ್‌ಟೋಲ್ಡ್ ಸ್ಟೋರಿ ಆಫ್ ಸ್ಟ್ರಗಲ್ ಫಾರ್ ಸುಪ್ರೀಮಸಿ ಬೈ ಸುಪ್ರೀಂ ಕೋರ್ಟ್ ಆ್ಯಂಡ್ ಪಾರ್ಲಿಮೆಂಟ್’’ ಎಂದರು. ಆಶ್ಚರ್ಯದ ಸಂಗತಿ ಎಂದರೆ, ಸೀರ್ವಾಯ್ ಆನಂತರ ಪಾಲ್ಖೀವಾಲಾ ಅವರನ್ನು ಸಮರ್ಥಿಸಿಕೊಂಡು, ಮೂಲಭೂತ ಸಂರಚನೆ ಸಿದ್ಧಾಂತವು ಪ್ರಜಾಪ್ರಭುತ್ವ ಹಾಗೂ ದೇಶದ ರಕ್ಷಣೆಗೆ ಬಹಳ ಮುಖ್ಯ ಎಂದು ಹೇಳಿದರು. ಉದಾಹರಣೆಗೆ, 39ನೇ ತಿದ್ದುಪಡಿ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ ಹಾಗೂ ಪ್ರಧಾನಿಯ ಆಯ್ಕೆಯನ್ನು ಪ್ರಶ್ನಿಸುವಂತಿಲ್ಲ. ಇದು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿ ವಿರುದ್ಧ ನೀಡಿದ ತೀರ್ಪು ಬುಡಮೇಲು ಮಾಡಲು ನಡೆಸಿದ ಯತ್ನವಾಗಿತ್ತು. 41ನೇ ತಿದ್ದುಪಡಿಯು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಅಥವಾ ರಾಜ್ಯಪಾಲರ ಮೇಲೆ ಸಿವಿಲ್ ಅಥವಾ ಕ್ರಿಮಿನಲ್ ದೂರು ನೀಡುವುದನ್ನು ತಡೆಯುತ್ತದೆ. ಸೇವಾವಧಿಯಲ್ಲಿ ಮಾತ್ರವಲ್ಲದೆ ಜೀವಿತಾವಧಿಯಿಡೀ ಅವರಿಗೆ ರಕ್ಷಣೆ ದೊರೆಯುತ್ತದೆ. ಇದು ಎಲ್ಲರೂ ಕಾನೂನಿನ ಮುಂದೆ ಸಮಾನರು ಎನ್ನುವ ತತ್ವಕ್ಕೆ ವಿರುದ್ಧವಾದುದು.

1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಬಳಿಕ ಸುಪ್ರೀಂ ಕೋರ್ಟಿನ ಸಂಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳು ಆದವು. 8 ನ್ಯಾಯಾಧೀಶರು ಹೊಸದಾಗಿ ನೇಮಕಗೊಂಡಿದ್ದರು ಹಾಗೂ ಮೂವರ ಹಿರಿತನವನ್ನು ಕಡೆಗಣಿಸಿ, ಎ.ಎನ್.ರೇ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು. ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನು ಮರುಪರಿಶೀಲಿಸಲು 13 ನ್ಯಾಯಮೂರ್ತಿಗಳಿದ್ದ ಪೀಠವನ್ನು ರಚಿಸಲಾಯಿತು. ತೀರ್ಪನ್ನು ಮರುಪರಿಶೀಲಿಸಬಾರದೆಂದು ಪಾಲ್ಖೀವಾಲಾ ವಾದಿಸಿದರು. ಪುನವಿರ್ಮರ್ಶೆಗೆ ಯಾರೂ ಅರ್ಜಿಯನ್ನೇ ಸಲ್ಲಿಸಿರಲಿಲ್ಲ ಎನ್ನುವುದು ಬೆಳಕಿಗೆ ಬಂದು, ನ್ಯಾಯಮೂರ್ತಿ ರೇ ತೀವ್ರ ಮುಖಭಂಗಕ್ಕೊಳಗಾದರು. ಇನ್ನುಳಿದ ನ್ಯಾಯಮೂ ರ್ತಿಗಳು ಸಿಟ್ಟಿಗೆದ್ದರು ಹಾಗೂ 13 ನ್ಯಾಯಮೂರ್ತಿಗಳ ಪೀಠವನ್ನು ರದ್ದುಗೊಳಿಸಲಾಯಿತು.

ಸಂವಿಧಾನದ ಅಖಂಡತೆಗೆ ಧಕ್ಕೆ
ಸಂವಿಧಾನದ ಅಖಂಡ ಶಿಲ್ಪವನ್ನು ತಿದ್ದುಪಡಿಗಳ ಮೂಲಕ ದುರ್ಬಲಗೊಳಿಸುವಿಕೆ ನಿರಂತರವಾಗಿ ಮುಂದುವರಿದಿದೆ. ಈವರೆಗೆ ವಿಧಿ 338 ಬಿ, 342 ಎ ಮತ್ತು 366ಕ್ಕೆ ತಂದ ತಿದ್ದುಪಡಿ ಸೇರಿದಂತೆ, 105 ತಿದ್ದುಪಡಿ ತರಲಾಗಿದೆ. ಆಡಳಿತಾರೂಢರಿಂದಲೇ ಸಂವಿಧಾನ, ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಮೇಲೆ ಹಲ್ಲೆ ನಡೆಯುತ್ತಿದೆ. ಸಂವಿಧಾನದಿಂದಾಗಿಯೇ ಉನ್ನತ ಹುದ್ದೆಯಲ್ಲಿರುವ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ‘‘ಸಂಸತ್ತು ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವ ಅಧಿಕಾರ ಹೊಂದಿದೆ ಮತ್ತು ಸಂಸತ್ತಿನ ಅಧಿಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸುವಂತಿಲ್ಲ’’ ಎನ್ನುತ್ತಾರೆ. ಸಂಸದ ಅನಂತಕುಮಾರ್ ಹೆಗ್ಡೆ, ‘‘ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ’’ ಎಂದರೆ, ಇದನ್ನು ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಸಮರ್ಥಿಸಿಕೊಳ್ಳುತ್ತಾರೆ. ನ್ಯಾಯಾಂಗದ ಮೇಲೆ ಹಾಗೂ ನ್ಯಾಯಾಧೀಶರ ನೇಮಕಕ್ಕೆ ರೂಪುಗೊಂಡ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಸಚಿವ ಕಿರಣ್ ರಿಜಿಜು ನಡೆಸುವ ದಾಳಿ ಕೂಡ ನ್ಯಾಯಾಂಗವನ್ನು ಆಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನವಷ್ಟೆ. ಇವೆಲ್ಲವನ್ನೂ ಬಿಡಿಬಿಡಿಯಾಗಿ ನೋಡಲು ಸಾಧ್ಯವಿಲ್ಲ; ಮೀಸಲು, ಸಂವಿಧಾನ ಮತ್ತು ನ್ಯಾಯಾಂಗವನ್ನು ದುರ್ಬಲಗೊಳಿಸುವ ಹುನ್ನಾರದ ಭಾಗಗಳು.

ನ್ಯಾಯಾಧೀಶರು/ಸಿಬ್ಬಂದಿ/ಸಾರ್ವಜನಿಕ ವಕೀಲರ ನೇಮಕದಲ್ಲಿ ವಿಳಂಬ ಮತ್ತು ಮೂಲಸೌಲಭ್ಯ ಕೊರತೆಯಿಂದ ನ್ಯಾಯಾಂಗ ಒತ್ತಡಕ್ಕೆ ಸಿಲುಕಿದೆ; ನ್ಯಾಯದಾನ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ವಿಚಾರಣೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನವರಿ 2,2023ರ ಇಂಡಿಯಾ ಜಸ್ಟಿಸ್ ವರದಿ ಪ್ರಕಾರ, ಹೈಕೋರ್ಟ್‌ಗಳಲ್ಲಿ ಅರ್ಧದಷ್ಟು ಪ್ರಕರಣಗಳ ವಿಚಾರಣೆ 5 ವರ್ಷವಾದರೂ ಆರಂಭಗೊಂಡಿಲ್ಲ. 2014ರಲ್ಲಿ 41 ಲಕ್ಷ ಇದ್ದ ಇಂತಹ ಪ್ರಕರಣಗಳ ಸಂಖ್ಯೆ 2022ರಲ್ಲಿ 53 ಲಕ್ಷಕ್ಕೆ ಹೆಚ್ಚಿದೆ. ತಾಲೂಕು/ಜಿಲ್ಲಾ ನ್ಯಾಯಾಲಯಗಳಲ್ಲಿ 5 ವರ್ಷವಾದರೂ ವಿಚಾರಣೆ ಆರಂಭಗೊಂಡಿಲ್ಲದ ಪ್ರಕರಣಗಳ ಸಂಖ್ಯೆ 4.18 ಕೋಟಿ. ಇದರಲ್ಲಿ ಕರ್ನಾಟಕದ ಪಾಲು ಶೇ.16. ಇನ್ನು 5 ವರ್ಷ ದಾಟಿದ ಪ್ರಕರಣಗಳ ಸಂಖ್ಯೆ 1.08 ಕೋಟಿ.

ನ್ಯಾಯದ ಗಾಣ ನಿಧಾನವಾಗಿ ಸುತ್ತುತ್ತಿದೆ. ನ್ಯಾಯಾಧೀಶರ ಕೊರತೆ ತೀವ್ರವಾಗಿದೆ. ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ಕೊರತೆ ರಾಜಸ್ಥಾನದಲ್ಲಿ ಗರಿಷ್ಠ(ಶೇ.48) ಮತ್ತು ಜಾರ್ಖಂಡ್‌ನಲ್ಲಿ ಕನಿಷ್ಠ(ಶೇ.16) ಇದೆ. ದೇಶದಲ್ಲಿ ನ್ಯಾಯಾಧೀಶರ ಒಟ್ಟಾರೆ ಕೊರತೆ ಶೇ. 29.8 ಮತ್ತು ಸಿಬ್ಬಂದಿ ಕೊರತೆ ಶೇ. 35.6 ಇದೆ. ಉತ್ತರಪ್ರದೇಶದಲ್ಲಿ 1.13 ಲಕ್ಷ ನಾಗರಿಕರಿಗೆ ಒಬ್ಬರು ನ್ಯಾಯಾಧೀಶರಿದ್ದು, ತೆಲಂಗಾಣದಲ್ಲಿ 1.08 ಲಕ್ಷ, ಬಿಹಾರ 1 ಲಕ್ಷ, ತಮಿಳುನಾಡು 96,167 ಹಾಗೂ ಕರ್ನಾಟಕದಲ್ಲಿ 60,373 ಮಂದಿಗೆ ಒಬ್ಬ ನ್ಯಾಯಾಧೀಶ ಇದ್ದಾರೆ. ಇದರಿಂದ ಪ್ರಕರಣಗಳ ವಿಚಾರಣೆ/ತೀರ್ಪು ನೀಡುವಿಕೆ ವಿಳಂಬವಾಗುತ್ತಿದೆ ಮತ್ತು ಸೆರೆಮನೆಗಳು ವಿಚಾರಣಾಧೀನ ಕೈದಿಗಳಿಂದ ತುಂಬಿಕೊಂಡಿವೆ. 17 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದ ಸೆರೆಮನೆಗಳು ಸಂಪೂರ್ಣ ಭರ್ತಿಯಾಗಿದ್ದು, ಉತ್ತರಪ್ರದೇಶದ ಜೈಲುಗಳಲ್ಲಿ ಭರ್ತಿ ಪ್ರಮಾಣ ಶೇ.177 ಇದೆ; ಕರ್ನಾಟಕದಲ್ಲಿ ಶೇ.98.3 (ಮಾಹಿತಿ: ಸ್ಟ್ಯಾಟ್ಸ್ ಆಫ್ ಇಂಡಿಯಾ.ಇನ್). ಸೂಕ್ತ ಆದೇಶವಿಲ್ಲದೆ ಯಾರೂ ಸೆರೆವಾಸ ಅನುಭವಿಸಬಾರದು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದ್ದು, ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿಚಾರಣಾಧೀನ ಕೈದಿಗಳು ಇರುವುದಕ್ಕೆ ಕಳವಳ ವ್ಯಕ್ತಪಡಿಸಿದೆ(ಎಸ್ ಬ್ಯಾಂಕ್ / ಡಿಎಚ್‌ಎಲ್‌ಎಫ್‌ಎಲ್ ಪ್ರಕರಣ).

ರಾಜ್ಯಪಾಲರ ಹಾವಳಿಯಿಂದ ಒಕ್ಕೂಟ ವ್ಯವಸ್ಥೆಗೆ ಹಾನಿ

ನಮ್ಮದು ಒಕ್ಕೂಟ ವ್ಯವಸ್ಥೆ. ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳ ರಾಜ್ಯಪಾಲರ ವರಸೆಗಳು ಸಂವಿಧಾನ-ಪ್ರಜಾಸತ್ತೆ ಮತ್ತು ಒಕ್ಕೂಟ ತತ್ವಕ್ಕೆ ಧಕ್ಕೆ ಬರುವಂತೆ ಇವೆ. ರಾಜ್ಯಪಾಲರು ವಸಾಹತುಶಾಹಿಯ ಪಳೆಯುಳಿಕೆ. ತಮಿಳುನಾಡು, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ, ದಿಲ್ಲಿಯ ಶಾಸನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದೆ ಸತಾಯಿಸುವುದು ಸಾಮಾನ್ಯವಾಗಿದೆ. ರಾಜ್ಯಪಾಲರು ನಿಗದಿತ ಅವಧಿಯೊಳಗೆ ಮಸೂದೆಗಳಿಗೆ ಅಂಗೀಕಾರ ನೀಡಬೇಕೆಂಬ ಗೊತ್ತುವಳಿಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಅದನ್ನು ರಾಷ್ಟ್ರಪತಿ ಹಾಗೂ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರು. ಇಂಥದ್ದೇ ಗೊತ್ತುವಳಿ ಮಂಡಿಸಬೇಕೆಂದು ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಿಗೆ ಪತ್ರ ಬರೆದಿದ್ದರು. ತೆಲಂಗಾಣದ ರಾಜ್ಯಪಾಲ ಡಾ. ತಮಿಳಿಸೈ ಸೌಂದರರಾಜನ್ ವಿರುದ್ಧ ರಾಜ್ಯ ಸರಕಾರ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಎಷ್ಟು ಸಾಧ್ಯವೋ ಅಷ್ಟು ಬೇಗ’ ಮಸೂದೆಗೆ ಸಹಿ ಹಾಕಬೇಕು ಎಂಬ ವಿಧಿ 200ರ ಆಶಯವನ್ನು ಎತ್ತಿಹಿಡಿಯಿತು.

ವಿಧಿ 200ರ ಪ್ರಕಾರ, ಶಾಸನಸಭೆ ಕಳಿಸಿದ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಬಹುದು ಅಥವಾ ಸಮ್ಮತಿಯನ್ನು ತಡೆಹಿಡಿಯಬಹುದು ಇಲ್ಲವೆ ರಾಷ್ಟ್ರಪತಿಯವರ ಗಮನಕ್ಕೆ ತರಬಹುದು. ಸಮ್ಮತಿ ನೀಡುವುದು ತಮ್ಮ ವಿವೇಚನಾಧಿಕಾರ ಎಂದು ರಾಜ್ಯಪಾಲರುಗಳು ತಪ್ಪಾಗಿ ಗ್ರಹಿಸಿರುವುದು ಸಮಸ್ಯೆ ಸೃಷ್ಟಿಸಿದೆ. ಜುಲೈ 30, 1949ರಲ್ಲಿ ಈ ವಿಧಿಗೆ ತಿದ್ದುಪಡಿ ಮಂಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ‘‘ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಲು ಅವಕಾಶವಿಲ್ಲ’’ ಎಂದಿದ್ದರಲ್ಲದೆ, ‘ರಾಜ್ಯಪಾಲರು, ವಿವೇಚನಾಧಿಕಾರ’ ಎಂಬ ಪದವನ್ನು ತೆಗೆದುಹಾಕಲು ಹೇಳಿದ್ದರು. ಶಂಶೇರ್‌ಸಿಂಗ್ / ಪಂಜಾಬ್ ಸರಕಾರ(1974) ಪ್ರಕರಣದಲ್ಲಿ ಏಳು ನ್ಯಾಯಮೂರ್ತಿಗಳಿದ್ದ ಸುಪ್ರೀಂ ಕೋರ್ಟ್ ಪೀಠ, ‘‘ರಾಜ್ಯಪಾಲರಿಗೆ ಇರಬಹುದಾದ ವಿವೇಚನಾಧಿಕಾರ ಸೀಮಿತವಾದದ್ದು ಮತ್ತು ಅವರು ಅತ್ಯಂತ ಅಪರೂಪದ ಪ್ರಸಂಗಗಳಲ್ಲಿ ಕೂಡ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವಂತೆ ವರ್ತಿಸಬಾರದು’’ ಎಂದು ಹೇಳಿತ್ತು. ರಾಜ್ಯಪಾಲರು ಸಚಿವ ಸಂಪುಟದ ನೆರವು ಮತ್ತು ಸಲಹೆಯನ್ವಯ ಕಾರ್ಯ ನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ, ರಾಜ್ಯಪಾಲರು ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ ಎಂದರೆ ಅವರಿಗೆ ಕೇಂದ್ರದ ಬೆಂಬಲ ಇದೆ ಎಂದೇ ಅರ್ಥ. ಇದು ಒಕ್ಕೂಟ ತತ್ವಕ್ಕೆ ವಿರುದ್ಧವಾದುದು.

ಆದರೆ, ಬೇರೆ ದೇಶಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಂಗ್ಲೆಂಡ್‌ನಲ್ಲಿ ಸ್ಕಾಟಿಷ್ ಮಿಲಿಷಿಯಾ ಮಸೂದೆಗೆ ರಾಣಿ ಆ್ಯನ್ 1708ರಲ್ಲಿ ಅಂಗೀಕಾರ ನಿರಾಕರಿಸಿದ ನಂತರ ವಿಟೋ ಬಳಕೆಯಾಗಿಲ್ಲ. ಅಮೆರಿಕದಲ್ಲಿ ಮಸೂದೆಯೊಂದಕ್ಕೆ ಅಧ್ಯಕ್ಷರು 10 ದಿನದೊಳಗೆ ಅನುಮತಿ ನೀಡಬೇಕು ಇಲ್ಲವೆ ನಿರಾಕರಿಸಬೇಕು. ಇಲ್ಲವಾದಲ್ಲಿ ಮಸೂದೆ ತನ್ನಿಂದ ತಾನೇ ಕಾಯಿದೆಯಾಗುತ್ತದೆ. ಒಂದು ವೇಳೆ ಅಧ್ಯಕ್ಷರು ಮಸೂದೆಗೆ ಸಹಿ ಹಾಕಲು ನಿರಾಕರಿಸಿ ಸೆನೆಟ್ ಇಲ್ಲವೆ ಕಾಂಗ್ರೆಸ್‌ಗೆ ವಾಪಸ್ ಕಳಿಸಿದಲ್ಲಿ ಕಾಂಗ್ರೆಸ್‌ನ ಎರಡೂ ಸದನಗಳು ಅದನ್ನು ತಳ್ಳಿಹಾಕಬಹುದು.

ವೆಬ್ ಪುಟ ಅನಾವರಣ

ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಶವಾನಂದ ಭಾರತಿ ಪ್ರಕರಣಕ್ಕೆ ಸಂಬಂಧಿಸಿದ ವಾದಗಳು, ಲಿಖಿತ ಹೇಳಿಕೆಗಳು ಮತ್ತು ತೀರ್ಪು ಕುರಿತು ಮಾಹಿತಿ ಇರುವ ವೆಬ್ ಪುಟವನ್ನು ಅನಾವರಣಗೊಳಿಸಿದೆ. ‘‘ಸಂವಿಧಾನ ಉತ್ತಮವಾಗಿದ್ದರೂ, ಅದನ್ನು ಅನುಷ್ಠಾಗೊಳಿಸುವವರು ಅಧಮರಾಗಿದ್ದರೆ ಸಂವಿಧಾನ ಕೂಡ ಕೆಟ್ಟದ್ದಾಗಿರುತ್ತದೆ’’ ಎಂದು ಬಾಬಾ ಸಾಹೇಬ್ ಹೇಳಿದ್ದರು. ಶಾಸಕಾಂಗ ಹಣವಂತರ ಅಂಕಣವಾಗಿದ್ದು, ನ್ಯಾಯಾಂಗದ ದುರ್ಬಲಗೊಳಿಸುವಿಕೆ ಚಾಲ್ತಿಯಲ್ಲಿದೆ. ಇಂಥ ಸನ್ನಿವೇಶದಲ್ಲಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಭಾರತೀಯತೆಯ ಸಾರ ಹಾಗೂ ಪ್ರಜಾಸತ್ತಾತ್ಮಕ ರಾಷ್ಟ್ರೀಯತೆಯ ತಿರುಳಾದ ಸಂವಿಧಾನವನ್ನು ರಕ್ಷಿಸಲೇಬೇಕಾದ ಅನಿವಾರ್ಯತೆ ಇದೆ. ಇದು ಸುಪ್ರೀಂ ಕೋರ್ಟ್ ಜವಾಬ್ದಾರಿ ಮಾತ್ರವಲ್ಲ; ಹೆಚ್ಚು ಜವಾಬ್ದಾರಿ ಇರುವುದು ಜನರ ಮೇಲೆ. ಚುನಾವಣೆಯಲ್ಲಿ ಎಚ್ಚರದಿಂದ ಮತ ಚಲಾವಣೆ ಮಾಡುವ ಹಾಗೂ ಅಧಿಕಾರಸ್ಥರನ್ನು ನಿರಂತರ ಪ್ರಶ್ನಿಸುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯಬೇಕಿದೆ.