ನಾನು ಜೈ ಬಜರಂಗಬಲಿ ಹೇಳುವುದಕ್ಕೂ ಕಾಂಗ್ರೆಸ್ಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ: ಪ್ರಧಾನಿ ಮೋದಿ

Update: 2023-05-05 13:43 GMT

ಬಳ್ಳಾರಿ, ಮೇ 5: ಕಾಂಗ್ರೆಸ್ ಪಕ್ಷವು ರಾಜ್ಯದ ಜನರಿಗೆ ಬೋಗಸ್ ಭರವಸೆಗಳನ್ನು ನೀಡಿದೆ. ಆದರೆ, ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ದೇಶದ ನಂಬರ್ ವನ್ ರಾಜ್ಯವಾಗಿ ಮಾಡುವ ನೀಲನಕ್ಷೆಯನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಶುಕ್ರವಾರ ಬಳ್ಳಾರಿಯಲ್ಲಿ ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  ನಾನು ಜೈ ಬಜರಂಗಬಲಿ ಹೇಳುವುದಕ್ಕೂ ಕಾಂಗ್ರೆಸ್ಸಿಗರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಎಲ್ಲಿಯವರೆಗೆ ಹೋಗುತ್ತಿದೆ ಎಂದು ರಾಜ್ಯದ ಜನತೆ ನೋಡುತ್ತಿದ್ದಾರೆ. ಕಾಂಗ್ರೆಸ್ ಆತಂಕವಾದದ ವಿರುದ್ಧ ಒಂದು ಮಾತನ್ನಾಡಲೂ ಹಿಂಜರಿಯುತ್ತಿದೆ. ಮತಬ್ಯಾಂಕ್ ರಾಜಕೀಯದ ಕಾರಣಕ್ಕೆ ಭಯೋತ್ಪಾದನೆಯನ್ನು ಪಾಲಿಸಿ, ಪೋಷಿಸುತ್ತ ಬಂದಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳಿವೆ. ತುಷ್ಟೀಕರಣದ ನೀತಿಯನ್ನು ಅದು ಅನಾವರಣಗೊಳಿಸಿದೆ. ಬಿಜೆಪಿಯ ಎಲ್ಲ ಉತ್ತಮ ಕಾರ್ಯಕ್ರಮಗಳನ್ನು ಹಿಂದಕ್ಕೆ ಪಡೆಯುವ ಭರವಸೆ ಅಲ್ಲಿದೆ. ಕರ್ನಾಟಕದ ಜನರಿಗೆ ಬೋಗಸ್ ಭರವಸೆಗಳನ್ನು ಅದು ನೀಡಿದೆ ಎಂದು ನರೇಂದ್ರ ಮೋದಿ ಟೀಕಿಸಿದರು.

ಸ್ಮಗ್ಲಿಂಗ್, ಮಾದಕವಸ್ತು ವ್ಯಾಪಾರ ಇವೆಲ್ಲವೂ ಆತಂಕವಾದದ ಹಿಂದಿವೆ. ಬಾಂಬ್, ಪಿಸ್ತೂಲ್ ಬಳಸುವ ಜೊತೆ ಆಂತರಿಕವಾಗಿ ಆತಂಕವಾದವನ್ನು ಹರಡಲಾಗುತ್ತಿದೆ. ಕೇರಳ ಫೈಲ್ಸ್ ಸಿನಿಮಾವು ಒಂದು ರಾಜ್ಯದಲ್ಲಿ ಸಿದ್ಧವಾಗಿದೆ. ಪ್ರತಿಭಾವಂತರಿರುವ ಸುಂದರ ರಾಜ್ಯವೊಂದರ ವಿಷಯ ಇದಾಗಿದೆ. ಆತಂಕವಾದದ ಹಿಂದೆ ಕಾಂಗ್ರೆಸ್ ಇದೆ. ಅಂಥ ಭಯೋತ್ಪಾದಕರ ಜೊತೆ ಕಾಂಗ್ರೆಸ್ ಹಿಂಬಾಗಿಲ ರಾಜಕೀಯ ಮಾಡುತ್ತಿದೆ ಎಂದು ಅವರು ಆಕ್ಷೇಪಿಸಿದರು.

ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಬಗ್ಗೆ ಜನತೆ ಹೆಚ್ಚು ಜಾಗ್ರತೆಯಿಂದಿರಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರವಿದ್ದಾಗ ಭ್ರಷ್ಟಾಚಾರಕ್ಕೆ ಆದ್ಯತೆ ಕೊಡಲಾಗಿತ್ತು. ಕಾಂಗ್ರೆಸ್ಸಿನ ಪ್ರಧಾನಿ ರಾಜೀವ್ ಗಾಂಧಿ 100 ಪೈಸೆ ಅಭಿವೃದ್ಧಿಗಾಗಿ ಕಳಿಸಿದರೆ ಕೇವಲ 15 ಪೈಸೆ ಮಾತ್ರ ಬಡವರನ್ನು ತಲುಪುತ್ತಿತ್ತು ಎಂದಿದ್ದರು. ಕಾಂಗ್ರೆಸ್ ಶೇ.85ರಷ್ಟು ಕಮಿಷನ್ ಪಾರ್ಟಿ ಎಂದು ಅವರೇ ಒಪ್ಪಿಕೊಂಡಿದ್ದರು ಎಂದು ನರೇಂದ್ರ ಮೋದಿ ಹೇಳಿದರು.

ಸಭೆಯಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Similar News