ಮುಳ್ಳುತಂತಿಯ ಹಿಂದೆ ಇರುವ ಮಕ್ಕಳನ್ನು ಭೇಟಿಯಾದ ಪ್ರಧಾನಿ ಮೋದಿ: ಹಿಟ್ಲರ್‌ ಜೊತೆ ಹೋಲಿಸಿದ ನೆಟ್ಟಿಗರು

Update: 2023-05-06 10:54 GMT

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕಲಬರಗಿಯಲ್ಲಿ ನಡೆಸಿದ ಪ್ರಚಾರದ ಬಳಿಕ ಮುಳ್ಳುತಂತಿಯ ಹಿಂದೆ ನಿಂತ ಮಕ್ಕಳನ್ನು ಮಾತನಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಧಾನಿ ಮೋದಿ ಹಾಗೂ ಮಕ್ಕಳ ನಡುವೆ ಮುಳ್ಳು ಬೇಲಿ ತಂತಿಯೊಂದಿದ್ದು, ಪ್ರಧಾನಿ ಮಕ್ಕಳನ್ನು ಸ್ಪರ್ಷ ಮಾಡದೆ, ತಂತಿ ಬೇಲಿಯ ಹಿಂದೆ ನಿಂತೇ ಮಕ್ಕಳೊಂದಿಗೆ ಮಾತನಾಡಿದ್ದಾರೆನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಳ್ಳು ಬೇಲಿಯ ಇನ್ನೊಂದು ಕಡೆ ಇರುವವರು ಮೋದಿ ಸ್ಪರ್ಷಕ್ಕಾಗಿ ಕೈ ಚಾಚಿದರೂ ಅದನ್ನು ಮೋದಿ ಅವರು ನಿರ್ಲಕ್ಷಿಸಿದ್ದಾರೆಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ವಿರುದ್ಧ ಹಲವಾರು ಮಂದಿ ಆಕ್ರೋಶ ಹೊರ ಹಾಕಿದ್ದು, ರಾಹುಲ್‌ ಗಾಂಧಿ ಅವರು ಮಕ್ಕಳನ್ನು ತಬ್ಬಿರುವ ಫೋಟೋಗಳೊಂದಿಗೆ ಹೋಲಿಕೆ ಮಾಡಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. ಕೆಲವು ನೆಟ್ಟಿಗರು ಪ್ರಧಾನಿಗೆ ರಕ್ಷಣೆ ಸಿಗಬೇಕಾದರೆ ಮಕ್ಕಳನ್ನು ತಂತಿ ಬೇಲಿ ಆ ಕಡೆ ನಿಲ್ಲಿಸುವುದು ಕ್ರೂರತನ ಎಂದು ಹೇಳಿದ್ದಾರೆ.

ಈ ಘಟನೆ ಕುರಿತು ಕಾಂಗ್ರೆಸ್‌ನ ಹಿರಿಯ ಮುಖಂಡ ರಮೇಶ್‌ ಕುಮಾರ್‌, ''ಮೋದಿ ಮಕ್ಕಳನ್ನು ತಂತಿ ಬೇಲಿಯ ಇನ್ನೊಂದು ಬದಿಯಲ್ಲಿರಿಸಿ ಮಾತನಾಡಿದ್ದಾರೆ. ಇದು ಅವರ ತಾರತಮ್ಯ ಮನೋಭಾವವನ್ನು ತೋರಿಸುತ್ತದೆ. ಆದರೆ ರಾಹುಲ್ ಗಾಂಧಿ ಮಕ್ಕಳನ್ನು ಅಪ್ಪಿಕೊಂಡು ಮಾತನಾಡುತ್ತಾರೆ” ಎಂದು ಟೀಕಿಸಿದ್ದಾರೆ.

ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ನೆಟ್ಟಿಗರು ಪ್ರಧಾನಿ ಮೋದಿಯನ್ನು ಹಿಟ್ಲರ್ ಗೆ ಹೋಲಿಸಿ ಖಂಡನೆ ವ್ಯಕ್ತಪಡಿಸಿದ್ದಾರೆ. ಮುಳ್ಳು ತಂತಿಯ ಹಿಂದೆ ಇರುವ ಮಕ್ಕಳನ್ನು ಜರ್ಮನ್‌ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಇರುವಂತಹ ಫೋಟೋವನ್ನು ಪ್ರಧಾನಿ ಮೋದಿಯವರ ಫೋಟೋದೊಂದಿಗೆ ಹಂಚಿಕೊಂಡಿರುವ ಹಲವು ನೆಟ್ಟಿಗರು ಪ್ರಧಾನಿ ಮೋದಿಯನ್ನು ಹಿಟ್ಲರ್‌ಗೆ ಹೋಲಿಸಿದ್ದಾರೆ.

ನಟ ಪ್ರಕಾಶ್‌ ರಾಜ್‌ ಟ್ವೀಟ್‌ ಮಾಡಿ, "ಇತಿಹಾಸ ಮರುಕಳಿಸುತ್ತಿದೆ .. ಭವಿಷ್ಯ ಮುಳ್ಳು ತಂತಿಯ ಹಿಂದಿದೆ . ಎಚ್ಚೆತ್ತುಕೊಳ್ಳಿ" ಎಂದು ಬರೆದಿದ್ದಾರೆ. ಪ್ರಕಾಶ್‌ ರಾಜ್‌ ಮಾತ್ರವಲ್ಲದೆ ಹಲವು ನೆಟ್ಟಿಗರು ಈ ಚಿತ್ರವನ್ನು ಬಳಸಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದಾರೆ. 

"ಇದನ್ನು ಮೋದಿ ಶೈಲಿಯ ಸಂವಾದ ಎಂದು ಕರೆಯಲಾಗುತ್ತದೆ! ಈ ಮಕ್ಕಳು ಪಾಕಿಸ್ತಾನಕ್ಕೆ ಸೇರಿದವರಂತೆ ತೋರುತ್ತಿದೆ. ಅವರು ಭಾರತದ ಪ್ರಧಾನಿಯನ್ನು ಭೇಟಿಯಾಗಲು ಬಯಸಿದ್ದರು, ಆದರೆ ಮುಳ್ಳುತಂತಿಯು ಈ ಮಕ್ಕಳು ಮೋದಿಜಿ ಹತ್ತಿರದಿಂದ ನೋಡಲು ತಡೆಯಿತು. ಹಾಗಾಗಿ, ಅವರು ಮುಳ್ಳುತಂತಿಯ ಇನ್ನೊಂದು ಬದಿಯಿಂದ ಮೋದಿಜಿಯೊಂದಿಗೆ ಸಂವಹನ ನಡೆಸುತ್ತಿದ್ದಾರೆ" ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಆದರೆ, ಹಿಟ್ಲರ್‌ ಹಾಗೂ ಪ್ರಧಾನಿ ಮೋದಿಯನ್ನು ಹೋಲಿಸಿ ವೈರಲ್‌ ಆಗುತ್ತಿರುವ ಚಿತ್ರದಲ್ಲಿರುವ ಹಿಟ್ಲರ್‌ ಭಾಗವು ನಕಲಿಯಾಗಿದ್ದು, ಅದನ್ನು ಎಡಿಟ್‌ ಮಾಡಲಾಗಿದೆ ಎನ್ನಲಾಗಿದೆ. ಎರಡು ಬೇರೆ ಬೇರೆ ಚಿತ್ರವನ್ನು ಒಟ್ಟಿಗೆ ಇಟ್ಟು ಹಿಟ್ಲರ್‌ ಚಿತ್ರವನ್ನು ಎಡಿಟ್‌ ಮಾಡಲಾಗಿದೆ. ವಾಸ್ತವವಾಗಿ, ತಂತಿ ಬೇಲಿ ಹಿಂದಿರುವ ಮಕ್ಕಳನ್ನು ಹಿಟ್ಲರ್‌ ಭೇಟಿಯಾಗಿರುವ ಯಾವ ಮೂಲ ಚಿತ್ರಗಳೂ ಇಲ್ಲ.

Similar News