ಬೈಕ್ ಗೆ ಕಾರು ಢಿಕ್ಕಿ: ದಂಪತಿ ಸ್ಥಳದಲ್ಲೇ ಮೃತ್ಯು
ತುಮಕೂರು: ಕಾರೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 4ರ ಸೀಬಿ ಬಳಿ ಶನಿವಾರ ವರದಿಯಾಗಿದೆ. ಮೃತರನ್ನು ಹರ್ಷ ಮತ್ತು ಚಂದ್ರಕಲಾ ಎಂದು ಗುರುತಿಸಲಾಗಿದೆ.
ತುಮಕೂರಿನ ಅಶೋಕ ನಗರದ ನಿವಾಸಿಗಳಾದ ಹರ್ಷ ಮತ್ತು ಚಂದ್ರಕಲಾ ದಂಪತಿ ಬೈಕ್ ನಲ್ಲಿ ಸೀಬಿ ನರಸಿಂಹಸ್ವಾಮಿ ದೇವಾಲಯಕ್ಕೆ ಪೂಜೆ ಮಾಡಿಸಿಕೊಂಡು ಬರಲು ತೆರಳಿದ್ದರು. ಪೂಜೆ ಮುಗಿಸಿಕೊಂಡು ವಾಪಸ್ ಆಗುವ ವೇಳೆ ಎನ್.ಎಚ್.4ರಲ್ಲಿ ಬೈಕ್ ಅನ್ನು ಎಡಭಾಗಕ್ಕೆ ತಿರುಗಿಸಿಕೊಳ್ಳುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಕೇರಳ ಮೂಲದ ಕಾರೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಮೃತದೇಹಗಳನ್ನು ಸಿರಾ ಸರಕಾರಿ ಆಸ್ಪತ್ರೆಗೆ ಕೊಂಡಯ್ಯಲಾಗಿದ್ದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತ ಹರ್ಷ ಮತ್ತು ಚಂದ್ರಕಲಾ ಅವರು ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರ ಪುತ್ರ ಮತ್ತು ಸೊಸೆ ಎಂದು ಗುರುತಿಸಲಾಗಿದೆ.
ಮೇ 7ರಂದು ಮಧ್ಯಾಹ್ನ 12 ಗಂಟೆಗೆ ಚಿಕ್ಕಪೇಟೆಯ ಸಮೀಪ ಇರುವ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.