×
Ad

ಬಿಜೆಪಿಯ ಲೂಟಿಯಿಂದ ಕರ್ನಾಟಕವನ್ನು ರಕ್ಷಿಸಲು ಕಾಂಗ್ರೆಸ್ ಗೆ ಮತ ಕೊಡಿ: ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ

Update: 2023-05-06 20:38 IST

ಹುಬ್ಬಳ್ಳಿ, ಮೇ 6: ‘ರಾಜ್ಯದ ಜನ ಕರ್ನಾಟಕವನ್ನು ಬಿಜೆಪಿಯ ಲೂಟಿಯಿಂದ ರಕ್ಷಿಸಲು ಮೇ 10ರಂದು ನಿಮ್ಮ ಅಮೂಲ್ಯವಾದ ಮತಗಳನ್ನು ಕಾಂಗ್ರೆಸ್‍ನ ಅಭ್ಯರ್ಥಿಗಳಿಗೆ ನೀಡಿ ಜಯಶೀಲರನ್ನಾಗಿ ಮಾಡಬೇಕು. ಆ ಮೂಲಕ ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು’ ಎಂದು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.

ಶನಿವಾರ ನಗರದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯ ಬದಲಾವಣೆಯಾಗುವ ದಿನ ಹತ್ತಿರದಲ್ಲಿದೆ. ಈ ಪ್ರದೇಶದ ಜನ ಪ್ರತಿ ಕ್ಷೇತ್ರದಲ್ಲಿ ತಮ್ಮ ಪರಿಶ್ರಮದಿಂದ ಈ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದೀರಿ. ಕಲಾಕ್ಷೇತ್ರದಿಂದ ಐಟಿ-ಬಿಟಿ ಕ್ಷೇತ್ರದ ವರೆಗೆ, ಹಾಲು ಉತ್ಪಾದನೆ, ಕೃಷಿ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ರಾಜ್ಯದ ಹೆಸರನ್ನು ಉಜ್ವಲಗೊಳಿಸಿದ್ದೀರಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಇಸಿಹಾಸದಲ್ಲಿ ಕರ್ನಾಟಕ ರಾಜ್ಯಕ್ಕೆ ವಿಶೇಷ ಸ್ಥಾನವಿದೆ. ಇಂದು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರ. ಇಂದಿರಾ ಗಾಂಧಿ ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡಿದ್ದರು. ಆಗ ಚಿಕ್ಕಮಗಳೂರಿನ ಜನ ಅವರ ಬೆಂಬಲಕ್ಕೆ ನಿಂತಿದ್ದರು. 25 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಬಳ್ಳಾರಿಯ ಜನ ನನ್ನನ್ನು ಬೆಂಬಲಿಸಿದ್ದರು. ಈ ಕತ್ತಲ ಸಮಯದಲ್ಲಿ ನಾವು ಸರಕಾರದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ’ ಎಂದು ಅವರು ನುಡಿದರು.

‘ಸಮಾಜದಲ್ಲಿ ದ್ವೇಷ ಪಸರಿಸುತ್ತಿರುವವರ ವಿರುದ್ಧ ಹೋರಾಡಲು ‘ಭಾರತ ಜೋಡೋ ಯಾತ್ರೆ’ ಮಾಡಲಾಯಿತು. ಬಿಜೆಪಿಯ ಈ ದ್ವೇಷ ರಾಜಕೀಯದಿಂದ ದೇಶವನ್ನು ಮುಕ್ತಿಗೊಳಿಸುವ ಹೊರತಾಗಿ ಕರ್ನಾಟಕ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಲಕ್ಷಾಂತರ ಜನ ರಾಹುಲ್ ಗಾಂಧಿ ಜತೆ 4 ಸಾವಿರ ಕಿ.ಮೀ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿಗೆ ಎಷ್ಟು ಭಯವಾಗಿದೆ ಎಂದರೆ, ಅವರು ಎಲ್ಲ ರೀತಿಯ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇಂದು ಅಧಿಕಾರದಲ್ಲಿರುವವರು ಜನರ ರಕ್ಷಣೆ ಮಾಡುವ ಬದಲು ಹಣ ಮಾಡಿಕೊಳ್ಳುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

‘2018ರಲ್ಲಿ ನೀವು ಬಿಜೆಪಿಗೆ ಅಧಿಕಾರ ನೀಡಲಿಲ್ಲ. ಆದರೂ ಇವರು ಸರಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿದ್ದರು. ನಂತರ ಅವರ ಶೇ.40 ಸರಕಾರ ನಿಮ್ಮನ್ನು ಲೂಟಿ ಮಾಡಿದೆ. ಬಿಜೆಪಿ ನಾಯಕರು ಎಷ್ಟು ಅಹಂಕಾರದಲ್ಲಿದ್ದಾರೆಂದರೆ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ಯಾವುದೇ ಪತ್ರಕ್ಕೂ ಉತ್ತರ ನೀಡುತ್ತಿಲ್ಲ. ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಿಯಂತ್ರಿಸುತ್ತಿದ್ದಾರೆ. ಯಾವುದೇ ಸರಕಾರದಲ್ಲಿ ಇಂತಹ ದುರಾಡಳಿತವನ್ನು ನೀವು ಎಂದಾದರೂ ನೋಡಿದ್ದೀರಾ?’ ಎಂದು ಅವರು ಪ್ರಶ್ನಿಸಿದರು. 

‘ಕರ್ನಾಟಕ ರಾಜ್ಯದ ಜನರನ್ನು ದಡ್ಡರೆಂದು ಭಾವಿಸಬೇಡಿ. ಕರ್ನಾಟಕದ ಜನ ತಮ್ಮ ಪರಿಶ್ರಮ ಹಾಗೂ ಸಂಕಲ್ಪದ ಮೇಲೆ ಭರವಸೆ ಇಟ್ಟಿದ್ದಾರೆ ಹೊರತು ಬೇರೆ ಯಾರ ಆಶೀರ್ವಾದದಿಂದಲೂ ಅಲ್ಲ. ಕರ್ನಾಟಕದ ಜನ ದುರಾಸೆ ಇರುವವರಲ್ಲ, ನಿಮ್ಮ ಬೆದರಿಕೆಗಳಿಗೆ ಹೆದರುವವರೂ ಅಲ್ಲ. ಕರ್ನಾಟಕದ ಜನ ಮೇ 10ರಂದು ನಿಮಗೆ ಈ ಮಣ್ಣಿನ ಶಕ್ತಿ ಏನು ಎಂದು ತಿಳಿಸಲಿದ್ದಾರೆ’ ಎಂದು ಸೋನಿಯಾ ಗಾಂಧಿ, ಮೋದಿ, ಶಾ ವಿರುದ್ಧ ವಾಗ್ದಾಳಿ ನಡೆಸಿದರು.

‘ಬಿಜೆಪಿ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ರಾಜ್ಯ ಹಾಗೂ ದೇಶವನ್ನು ಒಡೆಯುತ್ತಿದ್ದಾರೆ. ನಾಲ್ಕು ವರ್ಷಗಳಲ್ಲಿ ರಾಜ್ಯವನ್ನು ಯಾವ ಸ್ಥಿತಿಗೆ ತಂದಿದ್ದಾರೆಂದು ಎಲ್ಲರೂ ನೋಡಿದ್ದಾರೆ. ಇಂತಹ ಸರಕಾರವನ್ನು ತೊಲಗಿಸುವ ಶಪತವನ್ನು ನೀವೆಲ್ಲರೂ ಕೈಗೊಳ್ಳಬೇಕು. ನೀವು ಸಂತರ ತತ್ವ ಸಿದ್ಧಾಂತದ ಮೇಲೆ ದಾಳಿ ಮಾಡುವವರ ಪರ ನಿಲ್ಲುತ್ತೀರೋ ಅಥವಾ ಎಲ್ಲ ವರ್ಗದವರ ಕಲ್ಯಾಣಕ್ಕಾಗಿ ಹೋರಾಟ ಮಾಡುವವರ ಪರವಾಗಿ ನಿಲ್ಲುತ್ತೀರೋ ಎಂಬುದನ್ನು ನೀವು ನಿರ್ಧರಿಸಬೇಕು’ ಎಂದು ಅವರು ತಿಳಿಸಿದರು.

‘ಐದು ವರ್ಷಗಳ ಹಿಂದೆ ಇದ್ದ ನಮ್ಮ ಸರಕಾರ ತನ್ನ ಮಾತಿಗೆ ಬದ್ಧವಾಗಿ ಕೊಟ್ಟ ಬಹುತೇಕ ಎಲ್ಲ ಭರವಸೆ ಈಡೇರಿಸಿದೆ. ಇಂದು ರಾಜಸ್ಥಾನ, ಛತ್ತೀಸ್‍ಗಡ, ಹಿಮಾಚಲದಲ್ಲಿ ಕಾಂಗ್ರೆಸ್ ಸರಕಾರ ತಮ್ಮ ಭರವಸೆಗಳನ್ನು ಈಡೇರಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳಲಿದೆ’

-ಸೋನಿಯಾ ಗಾಂಧಿ ಎಐಸಿಸಿ ಮಾಜಿ ಅಧ್ಯಕ್ಷೆ 

Similar News