×
Ad

ಡಬಲ್ ಇಂಜಿನ್ ಸರಕಾರದಿಂದ ಉತ್ತರ ಪ್ರದೇಶದಲ್ಲೂ ಶಾಂತಿ, ಸೌಹಾರ್ದ, ಸುರಕ್ಷತೆ ನೆಲೆಸಿದೆ: ಕೊಪ್ಪದಲ್ಲಿ ಆದಿತ್ಯನಾಥ್

''ಮೋದಿ ಟೀಮ್ ಇಂಡಿಯಾದ ಕ್ಯಾಪ್ಟನ್ ರೀತಿ ಕೆಲಸ ಮಾಡುತ್ತಿದ್ದಾರೆ''

Update: 2023-05-06 23:49 IST

ಕೊಪ್ಪ, ಮೇ 6: ಹಿಂದೂ ಅಸ್ಮಿತೆಯೊಂದಿಗೆ ಚೆಲ್ಲಾಟವಾಡಲು ಮುಂದಾಗಿರುವ ಕಾಂಗ್ರೆಸ್‌ಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕರೆ ನೀಡಿದ್ದಾರೆ.

ಶನಿವಾರ ಕೊಪ್ಪ ಪಟ್ಟಣದ ಲಾಲ್‌ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿ ಡಿ.ಎನ್.ಜೀವರಾಜ್ ಪರ ಪ್ರಚಾರ ಭಾಷಣ ಮಾಡಿದ ಅವರು, ಸಾವಿರಾರು ವರ್ಷಗಳಿಂದ ಕರ್ನಾಟಕ ಹಾಗೂ ಉತ್ತರ ಪ್ರದೇಶ ಅನನ್ಯ ಸಂಬಂಧ ಹೊಂದಿವೆ. ಪರಸ್ಪರ ಸೇರಿ ಏಕ್ ಭಾರತ್ ಶ್ರೇಷ್ಠ ಭಾರತವನ್ನು ಸಾಕಾರಗೊಳಿಸುವ ಕಾರ್ಯ ಮಾಡುತ್ತಿವೆ. ಕರ್ನಾಟಕ ಭಾರತದ ಒಂದು ಭಾವ ಭೂಮಿಯಾಗಿದೆ ಎಂದರು.

ಉತ್ತರ ಪ್ರದೇಶದಲ್ಲಿ ಜನರ ಇಷ್ಟು ದೊಡ್ಡ ಪ್ರೀತಿ ಸಿಗಲು ಡಬಲ್ ಇಂಜಿನ್ ಸರಕಾರದ ಸಾಧನೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲೂ ಡಬಲ್ ಇಂಜಿನ್ ಸರಕಾರದ ಕಾರಣಕ್ಕೆ ಶಾಂತಿ, ಸೌಹಾರ್ದ, ಸುರಕ್ಷತೆ ನೆಲೆಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕ್ಯಾಪ್ಟನ್ ರೀತಿಯಲ್ಲಿ ಮೋದಿ ಕೆಲಸ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಟೀಮ್ ಇಂಡಿಯಾದ ಕ್ಯಾಪ್ಟನ್ ರೀತಿ ಕೆಲಸ ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ಪರವಾಗಿ ಕೋಟಿ ಜನರು ಅಭಿಮಾನಿಗಳಿದ್ದಾರೆ. ಅದೇ ರೀತಿ ಈ ಬಾರಿ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಮೋದಿ ಅವರನ್ನು ಬೆಂಬಲಿಸಬೇಕು ಎಂದು ಯೋಗಿ ಆದಿತ್ಯನಾಥ್ ಕರೆ ನೀಡಿದರು.

ಭಾರತ ಇಂದು ಜಗತ್ತಿನಲ್ಲಿ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ಕಳೆದ 9 ವರ್ಷದಲ್ಲಿ ವಿಶ್ವಮಟ್ಟದಲ್ಲಿ ದೇಶದ ಪ್ರತಿಷ್ಠೆ ಹೆಚ್ಚಾಗಿದೆ. ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ಆಗುತ್ತಿರುವ ಕಾರ್ಯಗಳು ಅದು ರೈಲ್ವೆ ಇರಬಹುದು, ಹೈವೇಗಳಿರಬಹುದು, ಏರ್‌ಪೋರ್ಟ್‌ಗಳು, ಐಐಟಿಗಳು, ಐಎಎಂ, ಸೈನ್ಸ್ ಸಿಟಿ ಎಲ್ಲದರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದರು.

ಭಾರತೀಯ ಜನತಾ ಪಕ್ಷದ ಡಬ್ಬಲ್ ಇಂಜಿನ್ ಸರಕಾರ ಪಿಎಂ ಆವಾಸ್ ಯೋಜನೆಯಡಿ ಯಾವುದೇ ಭೇದ ಭಾವ ಮಾಡದೆ ಪ್ರತಿ ಬಡವರಿಗೆ ನೆರವು ತಲುಪಿಸುವ ಕೆಲಸ ಮಾಡುತ್ತಿದೆ. ಪ್ರತಿ ಬಡವರಿಗೆ ಶೌಚಾಲಯ ನಿರ್ಮಾಣ, 5 ಲಕ್ಷ ರೂ. ನ ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ, ಕರೋನಾ ಕಾಲದಲ್ಲಿ 3 ವರ್ಷದಿಂದ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಪಡಿತರವನ್ನು ಡಬ್ಬಲ್ ಇಂಜಿನ್ ಸರಕಾರ ನೀಡುತ್ತಿದೆ. ಕರೋನಾ ಮಹಾ ಮಾರಿಯಿಂದ ರಕ್ಷಿಸಲು ಬಿಜೆಪಿ ಸರಕಾರದಿಂದ 220 ಕೋಟಿ ಉಚಿತ ಲಸಿಕೆಯನ್ನು ಭಾರತೀಯರಿಗೆ ನೀಡಲಾಗಿದೆ ಎಂದರು.

ಕಾಂಗ್ರೆಸ್-ಜೆಡಿಎಸ್ ಸರಕಾರ ಇದ್ದಾಗ ಪ್ರಜೆಗಳಿಗಾಗಿ, ರಾಜ್ಯಕ್ಕಾಗಿ ಏನನ್ನೂ ಮಾಡಿಲ್ಲ. ದಂಗೆ ಹುಟ್ಟುಹಾಕಿ ಅರಾಜಕತೆ ಮೂಡಿಸುತ್ತಿದ್ದರು. ಆದರೆ ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕರ್ನಾಟಕ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ವೇಗಗತಿಯಲ್ಲಿ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

Similar News