ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕ ಯತ್ನಾಳ್‍ಗೆ ಮತ್ತೊಂದು ನೋಟಿಸ್
ಬೆಂಗಳೂರು, ಮೇ 7: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಚುನಾವಣಾಧಿಕಾರಿಯಿಂದ ಮತ್ತೊಂದು ನೋಟಿಸ್ ಜಾರಿಯಾಗಿದೆ.
ಮೇ 5 ರಂದು ಮಸ್ಕಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಭಾಷಣದಲ್ಲಿ ಯತ್ನಾಳ್, 'ಮಲ್ಲಿಕಾರ್ಜುನ ಖರ್ಗೆ ತಾವೇನು ಹೆಬ್ಬಾವಾ ಎಂದು ಪ್ರಶ್ನಿಸಿದ್ದರು. ಅಲ್ಲದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅರೆಹುಚ್ಚಾ' ಎಂದು ಹೇಳಿಕೆ ನೀಡಿದ್ದರು. ಇದು ಆರ್ ಪಿ ಆಕ್ಟ್ ಉಲ್ಲಂಘನೆ ಮಾಡಿದ್ದು, 24 ಗಂಟೆಗಳಲ್ಲಿ ಸೂಕ್ತ ಸಮಜಾಯಿಷಿ ನೀಡಬೇಕು ಎಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಒಂದು ವೇಳೆ ಈ ನೋಟಿಸ್‍ಗೆ ತಾವು ಸ್ಪಂದಿಸದಿದ್ದರೆ ಚುನಾವಣಾ ಆಯೋಗವು ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ 'ವಿಷಕನ್ಯೆ' ಎಂದು ಹೇಳಿಕೆ ನೀಡಿದ್ದಕ್ಕೆ ಚುನಾವಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದರು.