×
Ad

ರೌಡಿಯಿಂದ ಬೆದರಿಕೆ ಹಿನ್ನೆಲೆ: ವಿವಾಹ ಸಮಾರಂಭಕ್ಕೆ ಭದ್ರತೆ ನೀಡಲು ಹೈಕೋರ್ಟ್ ಸೂಚನೆ

Update: 2023-05-07 18:05 IST

ಬೆಂಗಳೂರು, ಮೇ 7: ಯುವತಿಯೊಬ್ಬಳ ವಿವಾಹಕ್ಕೆ ರೌಡಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮೇ 9 ಮತ್ತು 10ರಂದು ನಡೆಯುಲಿರುವ ಕಾರ್ಯಕ್ರಮಕ್ಕೆ ಭದ್ರತೆ ಕಲ್ಪಿಸುವಂತೆ ಕೆಂಗೇರಿ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 

ತನ್ನ ಮದುವೆಗೆ ಭದ್ರತೆ ಕಲ್ಪಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ನಗರದ ಯುವತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಅರ್ಜಿದಾರೆಯ ಮದುವೆ ನಗರದ ಹೋಟೆಲ್‍ವೊಂದರಲ್ಲಿ ಮೇ 9 ಮತ್ತು 10ರಂದು ನಡೆಯಲಿದೆ. ತಂದೆಯ ವ್ಯಾಪಾರದಲ್ಲಿ ಪಾಲುದಾರನಾದ ಕೆ.ಶಿವರಾಜ್ ಗೌಡ ಎಂಬುವರು ಹಣಕಾಸು ವಿವಾದವನ್ನು ಮುಂದಿಟ್ಟುಕೊಂಡು ತನ್ನ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಹೀಗಾಗಿ ಮದುವೆ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಕೆಂಗೇರಿ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಭರವಸೆ ನೀಡಿದ್ದಾರೆ. ಅದರಂತೆ ಇನಸ್ಪೆಕ್ಟರ್ ತಮ್ಮ ಭರವಸೆಗೆ ಬದ್ಧವಾಗಿರಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸರಕಾರಿ ವಕೀಲರು ಪ್ರಕರಣದ ಕುರಿತು ಕೆಂಗೇರಿ ಠಾಣಾ ಪೊಲೀಸ್ ಇನ್ ಸ್ಪೆಕ್ಟರ್ ಮೇ 4ರಂದು ಬರೆದ ಪತ್ರವನ್ನು ಕೋರ್ಟ್‍ಗೆ ಹಾಜರುಪಡಿಸಿ, ಮೇ 9 ಮತ್ತು 10ರಂದು ಠಾಣಾ ವ್ಯಾಪ್ತಿಯಲ್ಲಿ ಎರಡು ಹೊಯ್ಸಳ ವಾಹನವನ್ನು ಗಸ್ತಿಗೆ ನಿಯೋಜಿಸಲಾಗಿರುತ್ತದೆ. ಒಂದು ವೇಳೆ ವಿವಾಹ ನಡೆಯುವಾಗ ಯಾವುದೇ ವ್ಯಕ್ತಿಯಿಂದ ತೊಂದರೆಯಾದರೆ ತಕ್ಷಣವೇ 112ಗೆ ಕರೆ ಮಾಡಬಹುದು.

ಆಗ ಹೊಯ್ಸಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಸೂಕ್ತ ಕ್ರಮ ಜರುಗಿಸುತ್ತಾರೆ ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು. ವಾದ-ಪ್ರತಿವಾದ ಪರಿಗಣಿಸಿದ ನ್ಯಾಯಪೀಠ, ಪೊಲೀಸ್ ಇನಸ್ಪೆಕ್ಟರ್ ತಮ್ಮ ಭರವಸೆಯಂತೆ ಅರ್ಜಿದಾರೆಯ ಮದುವೆಗೆ ಭದ್ರತೆ ಕೊಡಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.

Similar News