ಕನಕಪುರದಲ್ಲಿ 'ಕಮಲ' ಅರಳಲಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ

Update: 2023-05-07 12:42 GMT

ರಾಮನಗರ, ಮೇ 7: ‘ನಿಮ್ಮ ಉತ್ಸಾಹ ನೋಡಿದರೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಕಮಲ ಅರಳಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ರವಿವಾರ ಜಿಲ್ಲೆಯ ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ‘ಇದು ಕನ್ನಡ ನಾಡಿನ ಭವಿಷ್ಯ ನಿರ್ಧರಿಸುವ ಚುನಾವಣೆ. ಬಿಜೆಪಿ ಕಾರ್ಯಕರ್ತರ ಪಕ್ಷ. ಡಾ.ಅಶ್ವತ್ಥ ನಾರಾಯಣ ಈ ಭಾಗದಲ್ಲಿ ಸಾಕಷ್ಟು ಸಂಘಟನೆ ಮಾಡಿದ್ದಾರೆ. ಇಲ್ಲಿಗೆ ಮತ್ತಷ್ಟು ಶಕ್ತಿ ಬರಬೇಕಾದರೆ ಸಾಮ್ರಾಟ್ ಅಶೊಕ್ ಬರಬೇಕು’ ಎಂದು ಹೇಳಿದರು.

‘ಮೋದಿಯವರು ವ್ಯಾಕ್ಸಿನೇಷನ್ ಕೊಟ್ಟಿದ್ದರಿಂದ ನಾವೆಲ್ಲ ಕೋವಿಡ್ ಮುಕ್ತರಾಗಿದ್ದೇವೆ. ಕಾಂಗ್ರೆಸ್‍ನವರು ಲಸಿಕೆ ವಿರುದ್ಧ ಅಪ ಪ್ರಚಾರ ಮಾಡಿದ್ದರು. ಪ್ರವಾಹ ಬಂದಾಗ ಬೆಳೆ ಪರಿಹಾರ ಡಬಲ್ ಪರಿಹಾರ ಕೊಟ್ಟಿದ್ದೇವೆ ಎಂದ ಅವರು, ‘ಅಶೋಕ್ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಕ್ರಾಂತಿ ಮಾಡಿದ್ದೇವೆ’ ಎಂದು ಹೇಳಿದರು.

‘ಕಾಂಗ್ರೆಸ್‍ನವರು ಗ್ಯಾರೆಂಟಿ ಎಂದು ಬರುತ್ತಿದ್ದಾರೆ. ಯಾವುದು ಮಾರಾಟವಾಗುವುದಿಲ್ಲವೋ, ಅದಕ್ಕೆ ಗ್ಯಾರೆಂಟಿ ಕೊಡುತ್ತಾರೆ. ಕಾಂಗ್ರೆಸ್‍ಗೆ ಈಗ ಗ್ಯಾರೆಂಟಿ ಇಲ್ಲ. 10 ಕೆಜಿ ಅಕ್ಕಿ ಕೊಡುವುದಾಗಿ ಈಗ ಹೇಳುತ್ತಿದ್ದಾರೆ. ನಾವು 2013ರಲ್ಲಿಯೇ ಕೊಡುತ್ತಿದ್ದೇವೆ. ಅದನ್ನು ಕಡಿಮೆ ಮಾಡಿದವರು ಇವರೇ ಎಂದು ದೂರಿದರು.

ಸಮಾಜವನ್ನೂ ಒಗ್ಗೂಡಿಸುವುದು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ. ಕನಕಪುರ ಕ್ಷೇತ್ರದಲ್ಲಿ ಸಚಿವ ಆರ್.ಅಶೋಕ ಕೈಬಲ ಪಡಿಸಿ, ಅಶೋಕ ಅವರನ್ನು ಗೆಲ್ಲಿಸಿಕೊಂಡು ಬನ್ನಿ, ಕನಕಪುರ ಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕೋ, ಅಷ್ಟು ನಾನು ಕೊಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Similar News