ಆಯುರ್ವೇದ ಕಾಲೇಜಿಗೆ ದಂಡ ಪ್ರಕರಣ: ಮತ್ತೊಮ್ಮೆ ಪರಿಶೀಲನೆ ನಡೆಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ 7: ಮಂಗಳೂರಿನ ಆಯುರ್ವೇದ ಮೆಡಿಕಲ್ ಕಾಲೇಜೊಂದಕ್ಕೆ ವಿಧಿಸಿರುವ 2.75 ಕೋಟಿ ರೂ.ಗಳ ದಂಡ ಕುರಿತಂತೆ ಮತ್ತೊಮ್ಮೆ ಪರಿಶೀಲನೆ ನಡೆಸಬೇಕೆಂದು ಭಾರತೀಯ ವೈದ್ಯಕೀಯ ಪದ್ಧತಿಗಳ ರಾಷ್ಟ್ರೀಯ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಜಿ.ಆರ್.ಎಜುಕೇಷನಲ್ ಟ್ರಸ್ಟ್ ಅಧೀನದ ಮಂಗಳೂರಿನ ಕರಾವಳಿ ಆಯುರ್ವೇದ ಮೆಡಿಕಲ್ ಕಾಲೇಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸೂಚನೆ ನೀಡಿದೆ. ಅಲ್ಲದೆ, ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಮನವಿಯನ್ನು ಮತ್ತೊಮ್ಮೆ ಪರಿಶೀಲನೆ ನಡೆಸಲು ನ್ಯಾಯಪೀಠವು ಸೂಚನೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆಯೋಗದ ಅಧ್ಯಕ್ಷರು ಮತ್ತು 8 ಮಂದಿ ಸದಸ್ಯರು ಸಮಿತಿ ಇದೆ. ಆದರೆ, ಈ ಸಮಿತಿಯ ಪೂರ್ಣ ತೀರ್ಮಾನ ಕೈಗೊಳ್ಳದೆ, ಅಧ್ಯಕ್ಷರು ಮಾತ್ರ ಆದೇಶ ನೀಡಲಾಗಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ವಾದ ಮಂಡಿಸಿದ್ದರು. ಇದನ್ನು ಆಲಿಸಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಜಿ ಆರ್ ಎಜುಕೇಷನ್ ಟ್ರಸ್ಟ್ ಅಧೀನದಲ್ಲಿ ನಡೆಯುತ್ತಿರುವ ಕರಾವಳಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸನ್‍ನ್ನು ನಡೆಸುತ್ತಿದೆ. 2021-22ರ ಶೈಕ್ಷಣಿಕ ವರ್ಷದಲ್ಲಿ ಷರತ್ತುಗಳನ್ನು ವಿಧಿಸಿ 60 ಸೀಟುಗಳನ್ನು ಮಂಜೂರು ಮಾಡಿರುವ ಸಂಬಂಧ ಆಯೋಗದ ನಿರೀಕ್ಷಕರು 2021ರಲ್ಲಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಸಂಬಂಧ 2022ರಲ್ಲಿ ಮತ್ತೊಂದು ಬಾರಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಆರು ತಿಂಗಳ ಕಾಲದಲ್ಲಿ ಸಿಬ್ಬಂದಿ ಹಾಜರಾಗಿರುವ ಸಂಬಂಧ ದಾಖಲೆಗಳನ್ನು ಸಂಗ್ರಹಿಸಿಲ್ಲದಿರುವುದು ಸೇರಿದಂತೆ ಏಳು ತಪ್ಪುಗಳನ್ನು ಪತ್ತೆ ಹಚ್ಚಿತ್ತು.
ಈ ಸಂಬಂಧ ತನಿಖೆ ನಡೆಸಿ 2.75 ಕೋಟಿ ರೂ.ಗಳ ದಂಡ ವಿಧಿಸಿತ್ತು. ಇದೇ ಕಾರಣದಿಂದ 2022 ಮತ್ತು 2023ರ ಶೈಕ್ಷಣಿಕ ಸಾಲಿನಲ್ಲಿ ಷರತ್ತಗಳನ್ನು ವಿಧಿಸಿ 60 ಸ್ಥಾನಗಳು ಲಭ್ಯವಾಗುವಂತೆ ಅನುಮತಿ ನೀಡುವುದಕ್ಕೆ ನಿರಾಕರಿಸಿತ್ತು. ಇದನ್ನು ಎತ್ತಿ ಹಿಡಿದ್ದಿದ್ದ ಭಾರತೀಯ ಔಷಧ ಪದ್ಧತಿ ರಾಷ್ಟ್ರೀಯ ಆಯೋಗ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು.