ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಮಣಿಕಂಠ ರಾಠೋಡ್ ಭಯೋತ್ಪಾದಕನಲ್ಲವೇ: ದೇವನೂರ ಮಹಾದೇವ ಪ್ರಶ್ನೆ
ದಸಂಸ, ಪ್ರಗತಿಪರ ಮತ್ತು ರೈತ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು,ಮೇ 8: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಭಯೋತ್ಪಾದಕನಲ್ಲವೇ? ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಪ್ರಶ್ನಿಸಿದ್ದಾರೆ.
ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ದಲಿತ, ಪ್ರಗತಿಪರ ಮತ್ತು ರೈತ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮಣಿಕಂಠ ರಾಠೋಡ್ ನ ಒಂದು ವಿಡಿಯೋ ನೋಡಿದೆ. ಠೇಂಕಾರದಲ್ಲಿ ಕೂಗಿ ಭಯ ಹುಟ್ಟಿಸುವ ಈತ ಭಯೋತ್ಪಾದಕ ಅಲ್ಲವೇ? ಇವನು ಯಾರಿಗೆ ಕಂಟಕವಾಗುತ್ತಾನೆ. ಸಮಾಜ ಕಂಟಕ ಹೌದು. ಇವನ ಪರವಾಗಿ ಜೈ ಜೈ ಎನ್ನುವವರಿಗೆ, ಬೆಳೆಸಿದವರಿಗೆ ಕಂಟಕವಾಗುತ್ತಾನೆ. ಈತನ ಮೇಲೆ ಎಷ್ಟೋ ಪ್ರಕರಣ ಇದೆ. ಗಡಿಪಾರು ಆಗಿದ್ದಾನೆ. ಇಂಥ ವ್ಯಕ್ತಿ ಬಿಜೆಪಿ ಅಭ್ಯರ್ಥಿ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಆಗಿದ್ದನ್ನು ಚುನಾವಣಾ ಆಯೋಗ, ಪೊಲೀಸ್ ವ್ಯವಸ್ಥೆ ನೋಡಿಕೊಂಡು ಸುಮ್ಮನಿದೆ. ಇವರೆಡು ಸ್ವತಂತ್ರವಾಗಿಲ್ಲವೇ? ಇವೆರಡು ಸರ್ಕಾರದ ಕಾಲಾಳುಗಳಂತೆ ಇವೆ ಅನಿಸುತ್ತದೆ. ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಏನಾಗಿದೆ? ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಟನ್ ಒತ್ತುವಾಗ ಜೈ ಭಜರಂಗ ಬಲಿ ಎನ್ನುವಂತೆ ಹೇಳಿದ್ದಾರೆ. ಹನುಮಂತ ನಮ್ಮ ಸಂಸ್ಕೃತಿಯ ಪ್ರತೀಕ. ಹನುಮಂತ ಪರಮಭಕ್ತಿಯ ಸಂಕೇತ. ಈ ವೇಷಧಾರಿ ಭಕ್ತರದು ಡಂಭಾಚಾರದ ಭಕ್ತಿ. ರಾಮ ವಚನ ಪಾಲನೆಗೆ ಪ್ರತೀಕ. ವಚನ ಪಾಲನೆ ಮಾಡಿದರೆ ರಾಮನ ಹೆಸರು ಹೇಳಬಹುದು. ವಚನ ಭ್ರಷ್ಟರಾದರೆ ರಾಮನ ಹೆಸರು ಉಚ್ಚಾರಣೆ ಮಾಡಲು ಆಗಲ್ಲ. ಇದು ಮೋದಿ ಅವರಿಗಾದರೂ ತಿಳಿಯಬೇಕಿತ್ತು ಎಂದರು.
ರಾಮನನ್ನು ಒಂಟಿ ಮಾಡಿದರು. ರಾಮನ ಭಕ್ತ ಹನುಮಂತನನ್ನು ಘರ್ಜಿಸುವ ವ್ಯಾಘ್ರ ಮಾಡಿದರು. ಪಕ್ಕದಲ್ಲಿದ್ದ ಸೀತೆ ತೆಗೆದು ಆಚೆಗೆ ತಳ್ಳಿಬಿಟ್ಟರು. ಈ ರೀತಿ ಸಂಸ್ಕೃತಿಯ ನಾಶಕರು. ಈಗ ಚುನಾವಣೆ ಮುಗಿದ ಮೇಲೆ ಏನೇನು ಅನಾಹುತ ಮಾಡಿದ್ದರೆ ಮತ್ತು ವಿರೂಪ ಮಾಡಿದ್ದರೆ ಪರಿಶೀಲಿಸಿ ನಿಜವಾದ ಭಾರತೀಯ ಸಂಸ್ಕೃತಿ ತರಬೇಕಿದೆ. ಜನ ಸಾಮಾನ್ಯರ ಮನಸ್ಸಿನಲ್ಲಿರುವ ವಚನ, ಬುದ್ಧ, ಸಂತರು, ಶರೀಫ ಇಂಥವರನ್ನು ಮರು ಸ್ಥಾಪಿಸುವ ದೊಡ್ಡ ಸವಾಲು ಎದುರಾಗಿದೆ. ಒಡಕು ಮನಸ್ಸಿನವರು ಸಮಾಜಕ್ಕೆ ವಿಷ ಹಾಕಿದ್ದಾರೆ ಎಂದು ನುಡಿದರು.
ದಸಂಸ ಸಂಚಾಲಕ ಇಂದೂಧರ ಹೊನ್ನಾಪುರ ಮಾತನಾಡಿ, ಧೀಮಂತ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ಮಣಿಕಂಠ ರಾಠೋಡ್ ಧೂರ್ತ ಬಿಜೆಪಿ ಸರ್ಕಾರದ ಹೃದಯದಲ್ಲಿರುವ ವಿಷವನ್ನು ಕಾರಿಕೊಂಡಿದ್ದಾನೆ. ಬಿಜೆಪಿ ಯಕಶ್ಚಿತ ಒಬ್ಬ ರೌಡಿಗೆ ಟಿಕೆಟ್ ಕೊಟ್ಟು ದ್ರೋಹ ಬಗೆದಿದೆ. ಮೋದಿ ಉಪನಾಮ ಬಳಸಿದ್ದಕ್ಕೆ ರಾಹುಲ್ ಗಾಂಧಿ ಅವರ ಸದಸ್ಯತ್ವ ರದ್ದು ಮಾಡುತ್ತಾರೆ. ಕೊಲ್ಲುವುದಾಗಿ ಹೇಳಿದರೂ ಯಾವುದೇ ಕ್ರಮವಿಲ್ಲ ಎಂದು ಹೇಳಿದರು.
ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರ ಕತ್ತನ್ನು ಹಿಸುಕುವ, ದಲಿತ ನಾಯಕತ್ವಕ್ಕೆ ಕೊಲೆ ಬೆದರಿಕೆ ಹಾಕುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಜಗತ್ತಿಗೆ ಅಹಿಂಸೆ ಪಾಠ ಮಾಡಿದ ಮಹಾತ್ಮಾ ಗಾಂಧಿಯವರನ್ನು ಕೊಂದವರಿಗೆ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಯಾವ ಲೆಕ್ಕ. ಅವರ ಬುಲೆಟ್‌ಗಳಿಗೆ ನಾವು ಬ್ಯಾಲೆಟ್ ಪೇಪರ್‌ನಲ್ಲಿ ಉತ್ತರ ಕೊಡಬೇಕು ಎಂದು ನುಡಿದರು.
ಪ್ರೊ.ಸುಮಿತ್ರಾ ಬಾಯಿ, ದಸಂಸ ಸಂಚಾಲಕರಾದ ವಿ.ನಾಗರಾಜ್, ಆಲಗೂಡು ಶಿವಕುಮಾರ್, ಅಹಿಂದ ಜವರಪ್ಪ, ದೇವಗಳ್ಳಿ ಸೋಮಶೇಖರ್, ಶಂಭುಲಿಂಗಸ್ವಾಮಿ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ಶಿವಲಿಂಗಯ್ಯ, ಕಲ್ಲಹಳ್ಳಿ ಕುಮಾರ್, ವಕೀಲ ಎನ್.ಪುನೀತ್, ವರಹಳ್ಳಿ ಆನಂದ್, ಮಹೇಶ್ ಸೋಸಲೆ ಮುಂತಾದವರು ಭಾಗವಹಿಸಿದ್ದರು.
ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಕಾಶವಾದಿ ಎಂದಿದ್ದಾರೆ. ಬೇರೆ ಯಾರಾದರೂ ಈ ಮಾತು ಅಂದಿದ್ದರೆ ಸಮಸ್ಯೆ ಇಲ್ಲ. ನನ್ನ ಗೆಳೆಯ ಅಂದಿದ್ದರಿಂದ ಆ ದಿನ ರಾತ್ರಿ ನಿದ್ದೆ ಬರಲಿಲ್ಲ. ಶ್ರೀನಿವಾಸಪ್ರಸಾದ್ ಅವರಿಗೆ ಏನಾಗಿದೆ? ಮಲ್ಲಿಕಾರ್ಜುನ ಖರ್ಗೆ ಪಕ್ಷ ನಿಷ್ಠರು. ಅಧಿಕಾರ ದಾಹ ಇಲ್ಲದವರು. ಪ್ರಧಾನ ಮಂತ್ರಿಯಾಗುವ ಸಾಧ್ಯತೆ ಇದೆ. ಆದರೆ, ತಮದೇ ಪಕ್ಷದವರು ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದನ್ನು ಪ್ರಸಾದ್ ಅವರು ಯಾಕೇ ಪ್ರಶ್ನಿಸಲಿಲ್ಲ.
-ದೇವನೂರ ಮಹಾದೇವ