×
Ad

ವಿಧಾನಸಭೆ ಚುನಾವಣೆ | ಬಹಿರಂಗ ಪ್ರಚಾರಕ್ಕೆ ತೆರೆ; ಯಾವುದಕ್ಕೆಲ್ಲ ನಿರ್ಬಂಧ ?

Update: 2023-05-08 20:45 IST

ಬೆಂಗಳೂರು, ಮೇ 8: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ ಬಿದ್ದಿದ್ದು, ಇನ್ನು ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಮಾತ್ರ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಬಹಿರಂಗ ಪ್ರಚಾರದ ಕೊನೆ ದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಘಟನಾಘಟಿ ನಾಯಕರು ಅಬ್ಬರದ ಪ್ರಚಾರ ನಡೆಸಿದರು.

ಇದನ್ನೂ ಓದಿBMTC ಬಸ್​​ನಲ್ಲಿ ಪ್ರಯಾಣ ಮಾಡಿ ಗಮನ ಸೆಳೆದ ರಾಹುಲ್ ಗಾಂಧಿ 

ಯಾವುದಕ್ಕೆಲ್ಲ ನಿರ್ಬಂಧ ?:

ಮೇ 10ರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ರಾಜ್ಯದ 224 ಕ್ಷೇತ್ರಗಳಿಗೆ ಒಂದೆ ಹಂತದಲ್ಲಿ ಮತದಾನ ನಡೆಯಲಿದ್ದು, ಯಾವುದೇ ಬಹಿರಂಗ ಸಭೆ, ಸಮಾರಂಭ, ಸಾರ್ವಜನಿಕ ಸಮಾವೇಶ, ಉತ್ಸವ, ರ್ಯಾಲಿಗಳನ್ನು ನಡೆಸುವಂತಿಲ್ಲ. ಧ್ವನಿವರ್ಧಕಗಳನ್ನು ಬಳಸಿ ಪ್ರಚಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು. ಬೇರೆ ಕ್ಷೇತ್ರದ ನಾಯಕರು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿಗಳ ಪ್ರಚಾರದ ವೇಳೆ ಅವರು ಸೇರಿದಂತೆ ಆರು ಜನರಿಗಿಂತ ಹೆಚ್ಚಿನ ಜನ ಸೇರಿ ಪ್ರಚಾರಕ್ಕೆ ತೆರಳುವಂತಿಲ್ಲ.

ಮದ್ಯ ಮಾರಾಟಕ್ಕೆ ತಡೆ: ಮೇ 8ರ ಸಂಜೆ 5 ಗಂಟೆಯಿಂದ ಮೇ 10ರ ಮಧ್ಯರಾತ್ರಿಯ ವರೆಗೆ ರಾಜ್ಯಾದ್ಯಂತ ಎಲ್ಲ ಪಬ್, ಬಾರ್, ರೆಸ್ಟೊರೆಂಟ್‍ಗಳು, ಎಂಆರ್‍ಪಿ ಔಟ್‍ಲೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಅಲ್ಲದೆ, ಅನಧಿಕೃತವಾಗಿ ಮದ್ಯ ಸರಬರಾಜು ಆಗದಂತೆ ತಡೆಯಲು ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಅಭ್ಯರ್ಥಿಗಳು ಯಾವುದೆ ಕಾರಣಕ್ಕೂ ಪರಸ್ಪರ ದ್ವೇಷ ಹೆಚ್ಚಿಸುವಂತಹ ಯಾವುದೆ ಬಗೆಯ ಚಟುವಟಿಕೆಗಳನ್ನು ನಡೆಸಬಾರದು. ಚುನಾವಣಾ ಆಯೋಗವು ಗುರುತಿಸಿರುವ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿನ ಮತಕೇಂದ್ರಗಳ ಬಳಿ ನಿರಂತರವಾಗಿ ಸಿಸಿಟಿವಿ ಕಣ್ಗಾವಲು ಇರಿಸುವಂತೆ ಸೂಚಿಸಲಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಅಂದೇ ಫಲಿತಾಂಶ ಪ್ರಕಟವಾಗಲಿದೆ.

Similar News