ಕರ್ನಾಟಕದ ಸಾರ್ವಭೌಮತ್ವ ಕುರಿತ ಕಾಂಗ್ರೆಸ್ ಹೇಳಿಕೆ: ಚುನಾವಣಾ ಆಯೋಗ ನೋಟಿಸ್
ಹೊಸದಿಲ್ಲಿ: "ಕರ್ನಾಟಕದ ಘನತೆ, ಸಾರ್ವಭೌಮತ್ವ ಮತ್ತು ಏಕತೆಗೆ ಯಾರಿಂದಲೂ ಅಪಾಯ ಎದುರಾಗಲು ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ" ಎಂದು ಪಕ್ಷದ ಸಂಸದೀಯ ಸಮಿತಿ ಅಧ್ಯಕ್ಷೆ ಸೋನಿಯಾಗಾಂಧಿಯವರ ಪರವಾಗಿ ಕಾಂಗ್ರೆಸ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಮಾಡಲಾದ ಟ್ವೀಟ್‌ಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ನೋಟಿಸ್ ನೀಡಿದೆ.
ಪಕ್ಷದ ಸಾಮಾಜಿಕ ಜಾಲತಾಣ ಪೋಸ್ಟ್ ಬಗ್ಗೆ ಸ್ಪಷ್ಟನೆ ಮತ್ತು ಸರಿಪಡಿಸುವಿಕೆ ಕ್ರಮ ಕೈಗೊಳ್ಳುವಂತೆ ಸೋಮವಾರ ನೀಡಲಾದ ನೊಟಿಸ್‌ನಲ್ಲಿ ಸೂಚಿಸಲಾಗಿದೆ. ಬಿಜೆಪಿ ಸಲ್ಲಿಸಿದ ದೂರಿನ ಮೇರೆಗೆ ಈ ನೋಟಿಸ್ ನೀಡಲಾಗಿದೆ.
ಬಿಜೆಪಿ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ, ಸೋನಿಯಾಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಜತೆಗೆ ಅವರ ಪಕ್ಷದ ಮಾನ್ಯತೆ ರದ್ದುಪಡಿಸಬೇಕು ಎಂದೂ ಒತ್ತಾಯಿಸಲಾಗಿದೆ. ಸೋನಿಯಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ಕೋರಿದೆ. ಕೇಂದ್ರ ಸಚಿವ ಭೂಪೇಂದರ್ ಯಾದವ್ ನೇತೃತ್ವದ ಬಿಜೆಪಿ ನಿಯೋಗ ಈ ಸಂಬಂಧ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ಸಲ್ಲಿಸಿದೆ.
"ಭಾರತದ ಚುನಾವಣಾ ಆಯೋಗ, ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಿಗೆ ನೋಟಿಸ್ ನೀಡಿ, ಐಎನ್‌ಸಿ ಟ್ವಿಟ್ಟರ್ ಹ್ಯಾಂಡಲ್‌ನಿಂದ ಮಾಡಲಾದ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡುವಂತೆ ಹಾಗೂ ಸರಿಪಡಿಸುವ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ" ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ.
"ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದ್ದು, ಇದರ ಸಾರ್ವಭೌಮತ್ವ ಸಂರಕ್ಷಣೆಗೆ ನೀಡುವ ಕರೆ, ದೇಶದಿಂದ ಪ್ರತ್ಯೇಕವಾಗುವಂತೆ ನೀಡಿದ ಕರೆಯಾಗುತ್ತದೆ ಹಾಗೂ ಅಪಾಯಕಾರಿ ಮತ್ತು ವಿನಾಶಕಾರಿ ಅಂಶಗಳಿಂದ ಕೂಡಿದ್ದಾಗಿದೆ" ಎಂದು ಬಿಜೆಪಿ ದೂರಿನಲ್ಲಿ ವಿವರಿಸಿದೆ.