ಕಲಬುರಗಿ | ಬಿಜೆಪಿ ಅಭ್ಯರ್ಥಿ ಪರ ಹಣ ಹಂಚುತ್ತಿದ್ದ ಆರೋಪ: ಇಬ್ಬರನ್ನು ಬೆನ್ನಟ್ಟಿ ಹಿಡಿದ ಜಿಲ್ಲಾಧಿಕಾರಿ
ಕಲಬುರಗಿ, ಮೇ 9: ಇಲ್ಲಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಗಮೇಶ್ವರ ಕಾಲನಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲು ಮುಂದಾಗಿದ್ದರೆನ್ನಲಾದ ಇಬ್ಬರನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಬೆನ್ನಟ್ಟಿ ಹಿಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಬೆಂಬಲಿಗರೆನ್ನಲಾದ ಇಬ್ಬರು ಸೋಮವಾರ ತಡರಾತ್ರಿ 1 ಗಂಟೆ ಸುಮಾರಿಗೆ ಬೀದಿ ದೀಪಗಳನ್ನು ಆರಿಸಿ ಮತದಾರರಿಗೆ ಹಣ ಹಂಚಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಮಾಹಿತಿ ಸಿಕ್ಕ ತಕ್ಷಣ ಜಿಲ್ಲಾಧಿಕಾರಿ ಯಶವಂತ ಖುದ್ದಾಗಿ ಸ್ಥಳಕ್ಕೆ ಧಾವಿಸಿದ್ದಾರೆ.
ಜಿಲ್ಲಾಧಿಕಾರಿಯನ್ನು ಕಂಡ ಕಕ್ಕಾಬಿಕ್ಕಿಯಾದ ಹಣ ಹಂಚಲು ಮುಂದಾಗಿದ್ದ ಇಬ್ಬರು ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಅವರ ಬೆನ್ನಟ್ಟಿದ ಜಿಲ್ಲಾಧಿಕಾರಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ವಿದ್ಯಾನಗರದ ಬಳಿ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಪೊಲೀಸರೂ ಅಲ್ಲಿಗೆ ತಲುಪಿದ್ದಾರೆ. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಅದರಲ್ಲಿದ್ದ ಇಬ್ಬರನ್ನು ಕೊರಳಪಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಹಣದ ಬ್ಯಾಗ್ ನೊಂದಿಗೆ ವ್ಯಕ್ತಿಯೋರ್ವ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಕಾರನ್ನು ನಿಲ್ಲಿಸುವಂತೆ ಸೂಚಿಸಿದರೂ ಕೇಳದೇ ಅತೀ ವೇಗವಾಗಿ ಕಾರು ಚಲಾಯಿಸಿದ ಚಾಲಕನನ್ನು ಜಿಲ್ಲಾಧಿಕಾರಿ ಗುರುಕರ್ ತೀವ್ರ ತರಾಟೆಗೈಯುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.