×
Ad

ನಾಳೆ (ಮೇ 10) ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕುವುದು ಹೇಗೆ?

ಮತದಾರರಿಗೆ ತಿಳಿದಿರಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ

Update: 2023-05-09 19:17 IST

ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ವಿಧಾನಸಭಾ ಚುನಾವಣೆ ನಾಳೆ, ಮೇ 10, ಬುಧವಾರದಂದು ನಡೆಯಲಿದೆ. ಮತದಾನ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡು ಸಂಜೆ 6 ಗಂಟೆ ತನಕ ನಡೆಯಲಿದೆ.

ಈ ಸಂದರ್ಭ ಮತದಾರರಿಗೆ ತಿಳಿದಿರಬೇಕಾದ ಕೆಲ ಅಗತ್ಯ ಮಾಹಿತಿ ಇಲ್ಲಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹೇಗೆ ಹುಡುಕುವುದು ಮತ್ತು ಮತದಾರ ಅಥವಾ ವೋಟರ್‌ ಸ್ಲಿಪ್‌ ಅನ್ನು ಹೇಗೆ ಪಡೆದುಕೊಳ್ಳುವುದು?

► https://ceo.karnataka.gov.in/ ನಲ್ಲಿ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿ ಅಥವಾ ನಿಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ‘Chunavana’ ಮೊಬೈಲ್‌ ಆ್ಯಪ್‌ ಡೌನ್ ಲೋಡ್ ಮಾಡಿ, ಅದರಲ್ಲಿ ನಿಮ್ಮ ವೋಟರ್‌ ಐಡಿ ಸಂಖ್ಯೆ ಟೈಪ್‌ ಮಾಡಿ ನಿಮ್ಮ ಹೆಸರನ್ನು ಹುಡುಕಿ.

►ನೀವು ಮತದಾರರ ಅಥವಾ ವೋಟರ್‌ ಸ್ಲಿಪ್‌ ಅನ್ನು ಪಡೆಯದೇ ಇದ್ದರೆ ಚಿಂತೆಯಿಲ್ಲ, ಮತದಾನ ಕೇಂದ್ರಗಳ ಸಮೀಪ ರಾಜಕೀಯ ಪಕ್ಷಗಳ ಕೌಂಟರ್‌ಗಳಲ್ಲಿ ಸ್ಲಿಪ್‌ ಅನ್ನು ನೀವು ಪಡೆದುಕೊಳ್ಳಬಹುದು.

ನಿಮ್ಮ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಬೇಕೇ?

ನಿಮ್ಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಯಾರೆಂಬ ಬಗ್ಗೆ ನಿಮಗೆ ಖಚಿತತೆಯಿಲ್ಲದೇ ಇದ್ದಲ್ಲಿ ‘Chunavana’ ಆ್ಯಪ್‌ ನಲ್ಲಿ ವಿವರಗಳನ್ನು 'ಸ್ಪರ್ಧಿಸುತ್ತಿರುವ ಅಭ್ಯರ್ಥಿ' ವಿಭಾಗ ಕ್ಲಿಕ್‌ ಮಾಡಿ ತಿಳಿದುಕೊಳ್ಳಬಹುದು. ಅಲ್ಲಿ ಅಭ್ಯರ್ಥಿಗಳ ಫೋಟೋ, ಹೆಸರು ಮತ್ತು ಪಕ್ಷಗಳ ಮಾಹಿತಿ ಇರಲಿದೆ.

ನಿಮ್ಮ ಬೂತ್‌ ಅನ್ನು ಹೇಗೆ ಕಂಡುಕೊಳ್ಳುವುದು?

ನಿಮ್ಮ ಬೂತ್‌ ಬಗ್ಗೆ ತಿಳಿಯಲು ಚುನಾವಣಾ ಆ್ಯಪ್‌ನಲ್ಲಿ “ನಿಮ್ಮ ಬೂತ್‌ ತಿಳಿದುಕೊಳ್ಳಿ” ವಿಭಾಗವನ್ನು ಕ್ಲಿಕ್‌ ಮಾಡಿ ನಿಮ್ಮ ವೋಟರ್‌ ಐಡಿ ಸಂಖ್ಯೆಯನ್ನು ಟೈಪ್‌ ಮಾಡಿದರೆ ನಿಮ್ಮ ಮತದಾನ ಕೇಂದ್ರ ಮತ್ತುಅಲ್ಲಿಗೆ ತೆರಳುವ ನಕ್ಷೆ ಹಾಗೂ ಹತ್ತಿರದ ಮಾರ್ಗವನ್ನು ಅದು ತೋರಿಸುತ್ತದೆ.

ಮತದಾರರ ಗುರುತಿನ ಚೀಟಿ ಕಳೆದುಕೊಂಡಿದ್ದೀರಾ?

ನೀವು ನಿಮ್ಮ ವೋಟರ್‌ ಐಡಿ (ಮತದಾರರ ಗುರುತಿನ ಚೀಟಿ) ಅಥವಾ EPIC (ಮತದಾರರ ಫೋಟೊ ಗುರುತಿನ ಚೀಟಿ) ಕಳೆದುಕೊಂಡಿದ್ದರೆ ನಿಮ್ಮ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸನ್ಸ್‌, ಪಾನ್‌ ಕಾರ್ಡ್‌, ಆಧಾರ್‌, ಇಸಿಐ ಒದಗಿಸುವ ಚುನಾವಣಾ ಸ್ಲಿಪ್‌, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳ ಕಾರ್ಡ್‌, ಫೋಟೋ ಇರುವ ಬ್ಯಾಂಕ್‌  ಅಥವಾ ಪೋಸ್ಟ್‌ ಆಫೀಸ್‌ ಪಾಸ್‌ ಬುಕ್‌, ಮನ್‌ರೇಗಾ ಉದ್ಯೋಗ ಕಾರ್ಡ್‌, ಭಾವಚಿತ್ರವಿರುವ ಪಿಂಚಣಿ ದಾಖಲೆ ಹಾಜರುಪಡಿಸಿ ಮತ ಚಲಾಯಿಸಬಹುದು.

ಬೂತ್‌ನಲ್ಲಿ ನೀವೇನು ಮಾಡಬೇಕು…

►ಕೋವಿಡ್-19 ನಿಯಮ ಪಾಲಿಸಬೇಕು

►ಮೊಬೈಲ್‌, ಕ್ಯಾಮೆರಾ ಸಹಿತ ಇಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು ಬೂತುಗಳೊಳಗೆ ತರುವಂತಿಲ್ಲ.

►ಮತದಾನದ ವೇಳೆ ಸೆಲ್ಫೀ ಕ್ಲಿಕ್ಕಿಸಲು ಅನುಮತಿಯಿಲ್ಲ

►ಮತದಾನ ಬೂತ್‌ ಪ್ರವೇಶಿಸಿದ ನಂತರ ನಿಮ್ಮ ವೋಟರ್‌ ಸ್ಲಿಪ್‌, ನಿಮ್ಮ ಐಡಿಯನ್ನು ಅಧಿಕಾರಿಗಳು ಪರಿಶೀಲಿಸಿ ನಿಮ್ಮ ಬೆರಳಿಗೆ ಅಳಿಸಲಾಗದ ಶಾಯಿಯಿಂದ ಗುರುತು ಹಾಕಿ, ಲಾಗ್‌ ಪುಸ್ತಕಕ್ಕೆ ನಿಮ್ಮ ಸಹಿ ಪಡೆದು ನಿಮಗೆ ಮತದಾನ ಮಾಡುವ ಸ್ಲಿಪ್‌ ನೀಡುತ್ತಾರೆ.

►ಚುನಾವಣಾಧಿಕಾರಿ ಈ ಸ್ಲಿಪ್‌ ಪರಿಶೀಲಿಸಿ ಮತದಾನ ಮಾಡುವಲ್ಲಿ ನಿಮಗೆ ತೆರಳಲು ಸೂಚಿಸಿದ ನಂತರ ನೀವು ನಿಮ್ಮ ಮತ ಚಲಾಯಿಸಬಹುದು.

►ಇವಿಎಂನಲ್ಲಿ ನಿಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದೆ ಇರುವ ಬಟನ್‌ ಅನ್ನು ಒತ್ತಿ ಬೀಪ್‌ ಸದ್ದು ಕೇಳುವ ತನಕ ನಿಲ್ಲಿ.

►ಆ ಬೀಪ್‌ ಸದ್ದು ನಿಂತ ನಂತರ ನಿಮ್ಮ ಮತವನ್ನು ದೃಢೀಕರಿಸಲು ಇವಿಎಂ ಹತ್ತಿರ ಇರುವ  ವಿವಿಪ್ಯಾಟ್‌ನಲ್ಲಿ ನಿಮ್ಮ ಮತ ಕಾಣಿಸುತ್ತದೆ. ಈ ಸ್ಲಿಪ್‌ಗಳು ವಿವಿಪ್ಯಾಟ್‌ನ ಗ್ಲಾಸ್‌ ಕೇಸ್‌ ಒಳಗಡೆ ಕೆಲ ನಿಮಿಷ ಕಾಣಿಸಿ ನಂತರ ಸೀಲ್‌ ಮಾಡಿದ ಪೆಟ್ಟಿಗೆಯೊಳಗೆ ಬೀಳುತ್ತದೆ.

ವಿಶೇಷ ಮತ್ತು ಸಾಮಾನ್ಯ ಮತದಾರರಿಗೆ ಸವಲತ್ತುಗಳು.

►ನೀವು ವಿಶೇಷ ಚೇತನರಾಗಿದ್ದರೆ ಅಥವಾ 80 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿದ್ದರೆ ನೀವು Chunavana ಅ್ಯಪ್‌ನಲ್ಲಿ ಪಿಕಪ್‌ ಮತ್ತು ಡ್ರಾಪ್‌ ಸೌಲಭ್ಯಕ್ಕೆ ನೋಂದಣಿ ಮಾಡಿರಬೇಕು. ಕ್ಯಾಬ್‌ಗಳ ಪಿಕಪ್‌ ಸೇವೆಗೆ ಕ್ಲಿಕ್‌ ಮಾಡಿ.

►ನಿಮಗೆ ಆರೋಗ್ಯ ಸಮಸ್ಯೆಯಿದ್ದರೆ ಹಾಗೂ ತುರ್ತು ವೈದ್ಯಕೀಯ ಸಹಾಯ ಬೇಕಿದ್ದರೆ “ಆರೋಗ್ಯ ಸೌಲಭ್ಯಗಳು” ಐಕಾನ್‌ ಕ್ಲಿಕ್‌ ಮಾಡಿ. ಅಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ವಿವರ ಮತ್ತು ಮೊಬೈಲ್‌ ಸಂಖ್ಯೆಗಳಿರುತ್ತವೆ.

►ಮತದಾನ ಪ್ರಕ್ರಿಯೆಯಲ್ಲಿ ಏನಾದರೂ ಸಮಸ್ಯೆ ಅಥವಾ ಏನಾದರೂ ಪ್ರಶ್ನೆಗಳಿದ್ದರೆ 'ಅಧಿಕಾರಿಗಳ ಪಟ್ಟಿ' ಐಕಾನ್‌ ಒತ್ತಿ. ನಿಮ್ಮ ಮತದಾನ ಬೂತ್‌ಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಪಟ್ಟಿ ಅಲ್ಲಿರುತ್ತದೆ.

►ಮತದಾನ ಬೂತಿನ 100 ಮೀಟರ್‌ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ಲಭ್ಯ ಪಾರ್ಕಿಂಗ್‌ ಸ್ಥಳಗಳ ಬಗ್ಗೆ ತಿಳಿಯಲು ಪಾರ್ಕಿಂಗ್‌ ಸ್ಥಳ ಐಕಾನ್‌ ಒತ್ತಿದರೆ ನಿಮಗೆ ಸೂಕ್ತ ಮಾಹಿತಿ ದೊರಕುತ್ತದೆ. ಎಲ್ಲಾ ಮತದಾರನ ಬೂತುಗಳಲ್ಲಿ ಪಾರ್ಕಿಂಗ್‌ ಸ್ಥಳಗಳಿರುತ್ತವೆ.

ವೇತನ ಸಹಿತ ರಜೆ

ಮೇ 10ರಂದು ಚುನಾವಣೆ  ಹಿನ್ನೆಲೆ ಪೇಯ್ಡ್‌ ಹಾಲಿಡೇ ಅಥವಾ ವೇತನ ಸಹಿತ ರಜೆ ಆಗಿದೆ. ಅಗತ್ಯ ಸೇವಾ ವಲಯಗಳನ್ನು ಹೊರತುಪಡಿಸಿ ಎಲ್ಲಾ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳು ಈ ದಿನ ತಮ್ಮ ಉದ್ಯೋಗಿಗಳು ಮತದಾನ ಮಾಡುವಂತಾಗಲು ಮುಚ್ಚಿರುತ್ತವೆ.

Full View

Similar News