ವಿಧಾನಸಭೆ ಚುನಾವಣೆ | ಒಟ್ಟು 379 ಕೋಟಿ ರೂ.ಗಳ ಸೊತ್ತುಗಳು ವಶ: ಮನೋಜ್ ಕುಮಾರ್ ಮೀನ

Update: 2023-05-09 14:30 GMT

ಬೆಂಗಳೂರು, ಮೇ 9: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ನಂತರ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಎಲ್ಲ ತಂಡಗಳು ಒಟ್ಟು 379.36 ಕೋಟಿ ರೂ.ಮೌಲ್ಯದ ನಗದು ಸೇರಿದಂತೆ ಮದ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

150.05 ಕೋಟಿ ರೂ.ನಗದು, 24.23 ಕೋಟಿ ರೂ.ಮೌಲ್ಯದ ಉಚಿತ ಕೊಡುಗೆ, ಉಡುಗೊರೆ ವಸ್ತುಗಳು, 84.62 ಕೋಟಿ ರೂ.ಮೌಲ್ಯದ 22.57 ಲಕ್ಷ ಲೀಟರ್ ಮದ್ಯ, 23.84 ಕೋಟಿ ರೂ.ಮೌಲ್ಯದ 1,972.29 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 

91.96 ಕೋಟಿ ರೂ.ಮೌಲ್ಯದ 179.82 ಕೆಜಿ ಚಿನ್ನ, 4.63 ಕೋಟಿ ರೂ.ಮೌಲ್ಯದ 669.41 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 379.36 ಕೋಟಿ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಇಲಾಖೆಯು ಈವರೆಗೆ 2,970 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ. 69,865 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್‍ಪಿಸಿ ಕಾಯ್ದೆಯಡಿ 5,784 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 11,843 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 17,375  ಜಾಮೀನು ರಹಿತ ವಾರೆಂಟ್‍ಗಳನ್ನು ಜಾರಿಗೊಳಿಸಲಾಗಿದೆ.

ಅಬಕಾರಿ ಇಲಾಖೆಯು 3,662 ಗಂಭೀರ ಪ್ರಕರಣಗಳು, 3,387 ಪರವಾನಿಗಿ ಉಲ್ಲಂಘನೆ, 103 ಎನ್‍ಡಿಪಿಎಸ್ ಹಾಗೂ ಅಬಕಾರಿ ಕಾಯ್ದೆ 1965ರ ಸೆಕ್ಷನ್ 15(ಎ)ಅಡಿಯಲ್ಲಿ 36,573 ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು, 2,545 ವಿವಿಧ  ಮಾದರಿಯ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ವಿಶೇಷ ವರದಿ: ಆದಾಯ ತೆರಿಗೆ ಇಲಾಖೆಯವರು 1.24 ಕೋಟಿ ರೂ.ಗಳನ್ನು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಗೂ 25.30 ಲಕ್ಷ ರೂ.ಗಳನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

Similar News