ನಾಳೆ (ಮೇ 10) ಮತದಾನ: ಹಕ್ಕು ಚಲಾಯಿಸಲಿರುವ 5.30ಕೋಟಿ ಮತದಾರರು

58,545 ಮತಗಟ್ಟೆಗಳು, 4 ಲಕ್ಷ ಚುನಾವಣಾ ಸಿಬ್ಬಂದಿ ನಿಯೋಜನೆ | ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ

Update: 2023-05-09 15:30 GMT

ಬೆಂಗಳೂರು, ಮೇ 9: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ನಾಳೆ (ಮೇ 10) ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ 37,777 ಸ್ಥಳಗಳಲ್ಲಿ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, ರಾಜ್ಯದ ಒಟ್ಟು 5,30,85,566 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದ್ದು, ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ ಸೇರಿದಂತೆ ಚುನಾವಣಾ ಸಾಮಾಗ್ರಿಗಳೊಂದಿಗೆ ಮೇ 9ರ ರಾತ್ರಿಯೇ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದು, ನಾಳೆ(ಮೇ 10) ಬೆಳಗ್ಗೆ 6ಗಂಟೆಯಿಂದಲೇ ಸುಗಮ ಮತದಾನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಿದ್ದಾರೆ.

ಒಟ್ಟಾರೆ ಮತದಾರರ ಪೈಕಿ ಪುರುಷ ಮತದಾರರು 2,66,82,156, ಮಹಿಳಾ ಮತದಾರರು 2,63,98,483, ಇತರೆ ಮತದಾರರು 4,927 ಮಂದಿ ಇದ್ದಾರೆ. 11,71,558 ಮಂದಿ ಮೊದಲ ಬಾರಿ ಮತದಾನ ಮಾಡಲಿದ್ದು, 80ವರ್ಷ ಮೇಲ್ಪಟ್ಟ 12,15,920 ಮಂದಿ, 5,71,281 ಮಂದಿ ವಿಶೇಷ ಚೇತನ ಮತದಾರರು ಇದ್ದಾರೆ.

4 ಲಕ್ಷ ಸಿಬ್ಬಂದಿ ನಿಯೋಜನೆ: ಚುನಾವಣಾ ಕಾರ್ಯಕ್ಕಾಗಿ ಸುಮಾರು 4 ಲಕ್ಷ ಸಿಬ್ಬಂದಿಯನ್ನು ನೇಮಿಸಲಾಗಿದ್ದು, 58,545 ಮತಗಟ್ಟೆಗಳಿಗೆ 62,988 ಬ್ಯಾಲೆಟ್ ಯೂನಿಟ್(ಬಿಯು) ಹಾಗೂ 58,545 ವಿವಿ ಪ್ಯಾಟ್‍ಗಳನ್ನು ಹಂಚಿಕೆ ಮಾಡಲಾಗಿದೆ. 1,15,709 ಬ್ಯಾಲೆಟ್ ಯೂನಿಟ್‍ಗಳು, 82,543 ಸಿಯು ಹಾಗೂ 89,379 ವಿವಿಪ್ಯಾಟ್‍ಗಳನ್ನು ಸುಸ್ಥಿತಿಯಲ್ಲಿ ಇರಿಸಲಾಗಿದೆ. 

ಮತದಾನದ ಸಂದರ್ಭದಲ್ಲಿ ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ 84,119 ಪೊಲೀಸರನ್ನು ನಿಯೋಜಿಸಲಾಗಿದೆ. ಈ ಪೈಕಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್‍ಪೆಕ್ಟರ್, 2610 ಪಿಎಸೈ, 5803 ಎಎಸ್ಸೈ, 46,421 ಪೊಲೀಸ್ ಕಾನ್ಸ್‍ಟೇಬಲ್‍ಗಳು, 27,990 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದಲ್ಲದೆ, ಕೇಂದ್ರ ಸಶಸ್ತ್ರ ಪಡೆಯ 58,500 ಸಿಬ್ಬಂದಿಗಳು, 650 ಸಿಆರ್‍ಪಿಎಫ್ ತುಕಡಿ, ಆಂಧ್ರದಿಂದ ತಲಾ 1ಸಾವಿರ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ, ತೆಲಂಗಾಣದಿಂದ 516 ಪೊಲೀಸ್, 684 ಗೃಹ ರಕ್ಷಕ ದಳದ ಸಿಬ್ಬಂದಿ, ಮಹಾರಾಷ್ಟ್ರದಿಂದ 3ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿ, ಕೇರಳದಿಂದ 600 ಪೊಲೀಸ್, ಗೋವಾದಿಂದ ತಲಾ 100 ಪೊಲೀಸ್ ಹಾಗೂ 100 ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ವಿಶೇಷ ಘಟಕ ನಿಯೋಜನೆ: ಚುನಾವಣೆ ಕಾರ್ಯಕ್ಕೆ 19 ಎಸ್ಪಿ, 107 ಡಿಎಸ್ಪಿ, 189 ಪೊಲೀಸ್ ಇನ್ಸ್‍ಪೆಕ್ಟರ್, 130 ಎಎಸ್ಸೈ, 2,274 ಪೊಲೀಸ್ ಕಾನ್ಸ್‍ಟೇಬಲ್ ಸೇರಿದಂತೆ ಒಟ್ಟು 2,959 ಮಂದಿಯನ್ನು ಒಳಗೊಂಡ ವಿಶೇಷ ಘಟಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

185 ಗಡಿ ಚೆಕ್‍ಪೋಸ್ಟ್ ಗಳು: 185 ಅಂತರ್‍ರಾಜ್ಯ ಗಡಿ ಚೆಕ್‍ಪೋಸ್ಟ್‍ಗಳು, 100 ಅಬಕಾರಿ ಅಂತರ್‍ರಾಜ್ಯ ಗಡಿ ಚೆಕ್‍ಪೋಸ್ಟ್ ಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

185 ಚೆಕ್ಪೋಸ್ಟ್ ಗಳಲ್ಲೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ನೆರೆ ರಾಜ್ಯಗಳಲ್ಲಿನ ಗಡಿಗಳಲ್ಲೂ 190 ಪೊಲೀಸ್, 18 ಅಬಕಾರಿ ಹಾಗೂ 33 ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್‍ಗಳು ಸಕ್ರಿಯವಾಗಿದ್ದು, ಯಾವುದೆ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಿವೆ.

ನೆರೆ ರಾಜ್ಯಗಳಲ್ಲಿ ಚೆಕ್‍ಪೋಸ್ಟ್ ಗಳ ಸ್ಥಾಪನೆ: ರಾಜ್ಯದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ನೆರೆ ರಾಜ್ಯಗಳು ಕೈ ಜೋಡಿಸಿದ್ದು, ಮಹಾರಾಷ್ಟ್ರ ರಾಜ್ಯವು 53 ಪೊಲೀಸ್ ಚೆಕ್‍ಪೋಸ್ಟ್, ಗೋವಾ ರಾಜ್ಯವು 5 ಪೊಲೀಸ್, ತಲಾ ಮೂರು ಅಬಕಾರಿ ಹಾಗೂ ವಾಣಿಜ್ಯ ತೆರಿಗೆ ಚೆಕ್‍ಪೋಸ್ಟ್‍ಗಳನ್ನು ಆರಂಭಿಸಿದೆ. 

ಆಂಧ್ರಪ್ರದೇಶವು 57 ಪೊಲೀಸ್ ಚೆಕ್‍ಪೋಸ್ಟ್, ತೆಲಂಗಾಣ 30 ಪೊಲೀಸ್, 5 ಅಬಕಾರಿ ಹಾಗೂ 11 ವಾಣಿಜ್ಯ ತೆರಿಗೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿದೆ. ತಮಿಳುನಾಡು ರಾಜ್ಯವು 25 ಪೊಲೀಸ್, 2 ಅಬಕಾರಿ ಹಾಗೂ 5 ವಾಣಿಜ್ಯ ತೆರಿಗೆ ಚೆಕ್‍ ಪೋಸ್ಟ್ ಗಳು, ಕೇರಳ ರಾಜ್ಯವು 20 ಪೊಲೀಸ್, 8 ಅಬಕಾರಿ ಹಾಗೂ 14 ವಾಣಿಜ್ಯ ತೆರಿಗೆ ಚೆಕ್‍ ಪೋಸ್ಟ್ ಗಳನ್ನು ಆರಂಭಿಸಿದೆ. 

ಕಣದಲ್ಲಿರುವ 2615 ಅಭ್ಯರ್ಥಿಗಳು: 224 ಕ್ಷೇತ್ರಗಳಲ್ಲಿ ಅಂತಿಮವಾಗಿ 2615 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಈ ಪೈಕಿ 2430 ಪುರುಷ, 184 ಮಹಿಳೆ ಹಾಗೂ ಓರ್ವ ತೃತೀಯ ಲಿಂಗಿ ಅಭ್ಯರ್ಥಿಯಿದ್ದಾರೆ. ಬಿಜೆಪಿಯ 224, ಕಾಂಗ್ರೆಸ್ ಪಕ್ಷದ 223, ಆಮ್ ಆದ್ಮಿ ಪಕ್ಷದ 209, ಸಿಪಿಎಂ ಪಕ್ಷದ 4, ಬಹುಜನ ಸಮಾಜ ಪಾರ್ಟಿಯ 133, ಜೆಡಿಎಸ್ ಪಕ್ಷದ 209, ಕರ್ನಾಟಕ ರಾಷ್ಟ್ರ ಸಮಿತಿಯ 195, ಉತ್ತಮ ಪ್ರಜಾಕೀಯ ಪಕ್ಷದ 110 ಅಭ್ಯರ್ಥಿಗಳು, 918 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 2615 ಮಂದಿ ಕಣದಲ್ಲಿದ್ದಾರೆ.

ಪರ್ಯಾಯ ದಾಖಲೆಗಳು: ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಹೊರತುಪಡಿಸಿ ಪರ್ಯಾಯ ದಾಖಲೆಯಾಗಿ ಆಧಾರ್ ಕಾರ್ಡ್, ನರೇಗಾ ಉದ್ಯೋಗ ಗುರುತಿನ ಚೀಟಿ, ಅಂಚೆ ಕಚೇರಿ ಮತ್ತು ಬ್ಯಾಂಕ್‍ಗಳಲ್ಲಿ ನೀಡಿರುವ ಭಾವಚಿತ್ರ ಇರುವ ಪಾಸ್ ಪುಸ್ತಕ, ಕಾರ್ಮಿಕ ಇಲಾಖೆಯಿಂದ ನೀಡಲಾಗಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್.

ಡ್ರೈವಿಂಗ್ ಲೈಸೆನ್ಸ್(ಚಾಲನ ಪರವಾನಿಗಿ), ಪ್ಯಾನ್ ಕಾರ್ಡ್, ಆರ್‍ಜಿಐ ಮತ್ತು ಎನ್‍ಪಿಆರ್ ಮೂಲಕ ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತದ ಪಾಸ್‍ಪೋರ್ಟ್, ಭಾವಚಿತ್ರ ಹೊಂದಿರುವ ಪಿಂಚಣಿ ಕಾರ್ಡ್, ಕೇಂದ್ರ, ರಾಜ್ಯ, ಪಿಎಸ್‍ಯು, ಪಬ್ಲಿಕ್ ಲಿಮಿಟೆಡ್ ಕಂಪೆನಿಗಳ ಭಾವಚಿತ್ರ ಹೊಂದಿರುವ ಸೇವಾ ಗುರುತಿನ ಚೀಟಿ, ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನಸಭಾ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿಗಳು.

ಬೆಟ್ಟಿಂಗ್ ಮೇಲೆ ನಿಗಾ: ಮತದಾನ ಮುಗಿದ ನಂತರ ಮೇ 13ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್ ದಂಧೆ ಮೇಲೆ ಸೂಕ್ಷ್ಮ ನಿಗಾ ಇರಿಸುವಂತೆ ಸಿಸಿಬಿ ಅಧಿಕಾರಿಗಳು, ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ನಡೆಯುವ ಸಾಧ್ಯತೆಯಿದೆ.

2,298 ಮಾದರಿ ಮತಗಟ್ಟೆ ಕೇಂದ್ರಗಳು: 996 ಸಖಿ, 239 ವಿಶೇಷ ಚೇತನರು, 286 ಯುವ ಸಿಬ್ಬಂದಿ, 737 ಸ್ಥಳೀಯ ವಿಷಯ ಆಧರಿತ ಹಾಗೂ 40 ಬುಡಕಟ್ಟು ಜನಾಂಗದವರಿಗೆ ಸಾಂಪ್ರದಾಯಿಕ ಮತಗಟ್ಟೆ ಸೇರಿದಂತೆ ಒಟ್ಟು 2,298 ಮಾದರಿ ಮತಗಟ್ಟೆ ಕೇಂದ್ರಗಳನ್ನು ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ.

ವಿಶೇಷ ಚೇತನ ಮತದಾರರಿಗೆ ಸೌಲಭ್ಯಗಳು: 5,71,281 ಗುರುತಿಸಲಾದ ವಿಶೇಷ ಚೇತನ ಮತದಾರರಿಗೆ ಅನುಕೂಲ ಕಲ್ಪಿಸಲು 58,545 ಮತಗಟ್ಟೆಗಳಲ್ಲಿ 45,872 ಗಾಲಿಕುರ್ಚಿಗಳು, 46,872 ಭೂತಕನ್ನಡಿ, 1,068 ಸಂಜ್ಞಾ ಭಾಷಾಂತರಕಾರರು ಹಾಗೂ 54,950 ಸಹಾಯಕರನ್ನು ನೇಮಿಸಲಾಗಿದೆ.

ಸೂಕ್ಷ್ಮ ಮತಗಟ್ಟೆಗಳು: ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಗಾ ವಹಿಸಲು ಸೂಕ್ಷ್ಮ ವೀಕ್ಷಕರು, ವೆಬ್ ಕಾಸ್ಟಿಂಗ್, ಸಿಸಿಟಿವಿ ಇತ್ಯಾದಿ ಸೇರಿದಂತೆ ವಿವಿಧ ರಕ್ಷಣಾ ಪಡೆಗಳು ಮತಗಟ್ಟೆಯನ್ನು ಒಳಗೊಂಡಿರುತ್ತವೆ.

ಅಳಿಸಲಾಗದ ಶಾಯಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರಿಗೆ ಅಳಿಸಲಾಗದ ಶಾಯಿಯನ್ನು ಎಡಗೈ ತೋರು ಬೆರಳಿಗೆ ಲೇಪಿಸಲಾಗುತ್ತದೆ.

Similar News