ದಾವಣಗೆರೆ: ಮತದಾನ ಮಾಡಲು ಅಮೆರಿಕಾದಿಂದ ಬಂದರೂ ಮತದಾನದಿಂದ ವಂಚಿತನಾದ ವ್ಯಕ್ತಿ!

1.50 ಲಕ್ಷ ರೂ. ಖರ್ಚು ಮಾಡಿ ಬಂದಿದ್ದ ಸಾಫ್ಟ್‌ವೇರ್ ಇಂಜಿನಿಯರ್

Update: 2023-05-10 09:08 GMT

ದಾವಣಗೆರೆ: ಮತದಾನ ಮಾಡಲು ಅಮೆರಿಕಾದಿಂದ ತಾಯ್ನಾಡಿಗೆ ಬಂದಿದ್ದ ಮತದಾರ ರಾಘವೇಂದ್ರ ಕಮಲಕರ್ ಎಂಬವರು ಮತಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದಿಂದ ವಂಚಿತರಾಗಿ ನಿರಾಸೆಯಿಂದ ಮನೆಗೆ ತೆರಳಿದ ಘಟನೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಂಸಿಸಿ ಎ ಬ್ಲಾಕ್ ನ ಬಕ್ಕೇಶ್ವರ ಶಾಲೆಯ ಬೂತ್ ನಂಬರ್ 78ರ ಮತಗಟ್ಟೆಯಲ್ಲಿ ನಡೆದಿದೆ.

ಅಮೆರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕಮಲಕರ್, ತಾಯ್ನಾಡಿನಲ್ಲಿ ಮತದಾನ ಮಾಡುವ ಸಲುವಾಗಿ 1.50 ಲಕ್ಷ ರೂ. ಖರ್ಚು ಮಾಡಿಕೊಂಡು ಬಂದಿದ್ದಾರೆ. ಆದರೆ ಮತಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದಿಂದ ವಂಚಿತರಾಗಿದ್ದಾರೆ.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಅಮೆರಿಕಾದಲ್ಲಿ ಐಡಿ ಕಾಡ್೯ ಇದ್ದರೆ ಸಾಕು ಮತದಾನಕ್ಕೆ ಅವಕಾಶ ಇದೆ. ಆದರೆ ಭಾರತದಲ್ಲಿ ನನಗೆ ಐಡಿ ಕಾಡ್೯ ಇದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ನಾನು ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ. ಈವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಆದರೆ ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News