ವಿಧಾನಸಭಾ ಚುನಾವಣೆ | ಮತ ಚಲಾಯಿಸಲು ಆಗಮಿಸಿದ್ದ ಮಹಿಳೆಗೆ ಮತ ಕೇಂದ್ರದಲ್ಲಿಯೇ ಹೆರಿಗೆ!

Update: 2023-05-10 13:15 GMT

ಬಳ್ಳಾರಿ, ಮೇ 10: ಮತದಾನ ಮಾಡಲು ಆಗಮಿಸಿದ್ದ ತುಂಬು ಗರ್ಭಿಣಿಗೆ ಮತಗಟ್ಟೆಯಲ್ಲೇ ಸಹಜ ಹೆರಿಗೆಯಾದ ಅಪರೂಪದ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಕೋರ್ಲಗುಂದಿ ಗ್ರಾಮದಲ್ಲಿ ನಡೆದಿದೆ.

ಬುಧವಾರ ವಿಧಾನಸಭೆ ಚುನಾವಣೆಗೆ ಮತದಾನ ಮಾಡಲು ಬೆಳಗ್ಗೆ 10ಗಂಟೆಯ ಸುಮಾರಿಗೆ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ-228ಕ್ಕೆ ಮಣಿಲಾ ಎನ್ನುವ ತುಂಬು ಗರ್ಭಿಣಿ ಆಗಮಿಸಿದ್ದು ಮತದಾನಕ್ಕೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಬಳಿಕ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಪಕ್ಕದ ಕೊಠಡಿಗೆ ಕರೆದೊಯ್ಯುದಿದ್ದು, ಮತದಾನ ಕೇಂದ್ರದಲ್ಲಿಯೇ ಸಹಜ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದು ಬಂದಿದೆ.

‘ಕೂಡಲೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ತಾಯಿ ಮತ್ತು ನವಜಾತ ಶಿಶುವನ್ನು ಇಬ್ಬರೂ ಆರೋಗ್ಯವಾಗಿದ್ದಾರೆ. ಮತಗಟ್ಟೆಯಲ್ಲೇ ತುಂಬು ಗರ್ಭಿಣಿ ಸಹಜ ಹೆರಿಗೆಯಾಗಿದ್ದು ಚುನಾವಣಾ ಸಿಬ್ಬಂದಿ ಮತ್ತು ಮತದಾನಕ್ಕೆ ಆಗಮಿಸಿದ್ದ ಮಹಿಳೆಯರು ಹೆರಿಗೆ ಮಾಡಿಸಲು ಸಹಕರಿಸಿದರು’ ಎಂದು ಮತಗಟ್ಟೆ ಅಧಿಕಾರಿ ವೆಂಕಟೇಶ್ ರಾಮಚಂದ್ರ ತಿಳಿಸಿದ್ದಾರೆ.

Similar News