ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ
ಕರ್ನಾಟಕ ವಿಧಾನಸಭಾ ಚುನಾವಣೆ - 2023
ಹೊಸದಿಲ್ಲಿ: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಕಳೆದ ಬಳಿಕ ಇದೀಗ ಚುನಾವಣಾ ನಂತರದ ಸಮೀಕ್ಷೆಗಳು ಪ್ರಕಟವಾಗುತ್ತಿದೆ. ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯ ಕುರಿತು ಪ್ರತಿಪಾದಿಸಿ, ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದೆ. ಈ ನಡುವೆ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷವು 122 ರಿಂದ 140 ಸೀಟುಗಳನ್ನು ಗಳಿಸಿ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ 62-80, ಜೆಡಿಎಸ್ 20-25 ಹಾಗೂ ಇತರ ಪಕ್ಷಗಳು 0-3 ಸೀಟುಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನ ಗಳಿಸಬೇಕಿದೆ.
ಝೀ ಮ್ಯಾಟ್ರಿಝ್ ಸಮೀಕ್ಷೆ ಬಹುಮತಕ್ಕಿಂತ ಹೆಚ್ಚಾದ 118 ಸ್ಥಾನಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂದು ಅಂದಾಜಿಸಿದೆ.
ನ್ಯೂಸ್ ನೇಷನ್-ಸಿಜಿಎಸ್ ಸಮೀಕ್ಷೆ ಆಡಳಿತಾರೂಢ ಬಿಜೆಪಿ 114 ಸ್ಥಾನ ಗಳಿಸುವ ಮೂಲಕ ಬಹುಮತದ ಸಂಖ್ಯೆಯನ್ನು ದಾಟಲಿದ್ದು, ಕಾಂಗ್ರೆಸ್ 86 ಸ್ಥಾನಗಳು ಹಾಗೂ ಜೆಡಿಎಸ್ 21 ಸ್ಥಾನ ಗಳಿಸಲಿವೆ ಎಂದು ಅಂದಾಜಿಸಿದೆ.
ಸುವರ್ಣ ನ್ಯೂಸ್-ಜನ್ ಕಿ ಬಾತ್ ಸಮೀಕ್ಷೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 94-117 ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಕಾಂಗ್ರೆಸ್ 91-106 ಹಾಗೂ ಜೆಡಿಎಸ್ 14-24 ಸ್ಥಾನ ಗಳಿಸಲಿವೆ ಎಂದು ಹೇಳಲಾಗಿದೆ.