×
Ad

ರಾಜ್ಯದಲ್ಲಿ ಶೇ.66.30ರಷ್ಟು ಮತದಾನ: ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ

ಮೇ 13ಕ್ಕೆ ಮತ ಎಣಿಕೆ, ಫಲಿತಾಂಶ

Update: 2023-05-10 21:08 IST

ಬೆಂಗಳೂರು, ಮೇ 10: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ವರೆಗೆ ಶೇ.66.87ರಷ್ಟು ಮತದಾನ ಆಗಿದ್ದು, ಕೆಲ ಸಣ್ಣ-ಪುಟ್ಟ ಘಟನೆಗಳು ಹೊರತುಪಡಿಸಿ ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿದೆ. 2,615 ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಮೇ 13(ಶನಿವಾರ)ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ಒಂದೆ ಕುಟುಂಬದ ಸದಸ್ಯರ ಹೆಸರುಗಳು ಬೇರೆ ಬೇರೆ ಮತಗಟ್ಟೆಗಳಲ್ಲಿ ಸೇರ್ಪಡೆ, ಮತದಾರರ ಪಟ್ಟಿಯಲ್ಲಿ ಹೆಸರು ಹಾಗೂ ಭಾವಚಿತ್ರಗಳ ಬದಲಾವಣೆಯಂತಹ ಘಟನೆಗಳು ನಡೆದಿವೆ. ಕೆಲವೆಡೆ ಮತಗಟ್ಟೆ ಅಧಿಕಾರಿಗಳ ಮಧ್ಯಪ್ರವೇಶದಿಂದ ಅರ್ಹರಿಗೆ ಮತದಾನ ಮಾಡುವ ಅವಕಾಶ ಲಭ್ಯವಾಯಿತು.

‘ಪ್ರಜಾಪ್ರಭುತ್ವದ ಹಬ್ಬ’ ಎಂದು ವಿಶ್ಲೇಷಿಸುತ್ತಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವ ಮತದಾರರು, ವಯೋವೃದ್ಧರು, ವಿಕಲಚೇತನರು, ಮಹಿಳೆಯರು ಸೇರಿದಂತೆ ಜನಸಾಮಾನ್ಯರು, ಸಿನಿಮಾ ನಟ-ನಟಿಯರು ಬೆಳಗ್ಗೆಯಿಂದಲೇ ಅತ್ಯಂತ ಉತ್ಸಾಹದಿಂದಲೇ ಸರದಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮೇ 13ರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯವು ಆಯಾ ಜಿಲ್ಲಾ ಹಾಗೂ ತಾಲೂಕಿನ ನಿಗದಿತ ಕೇಂದ್ರಗಳಲ್ಲಿ ನಡೆಯಲಿದ್ದು, ಬಹುತೇಕ ಅಂದು ಮಧ್ಯಾಹ್ನದ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಒಂದು ತಿಂಗಳಿನಿಂದ ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಅಭ್ಯರ್ಥಿಗಳು ಇದೀಗ ಶನಿವಾರ ಪ್ರಕಟವಾಗಲಿರುವ ಫಲಿತಾಂಶದತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ.

ಘಟಾನುಘಟಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಝಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಘಟನಾಘಟಿ ನಾಯಕರ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಮತದಾನ ಚಾಮರಾಜನಗರ ಜಿಲ್ಲೆಯಲ್ಲಿ ಶೇ.80.81ರಷ್ಟು ಹಾಗೂ ಅತಿ ಕಡಿಮೆ ಮತದಾನ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.53.08ರಷ್ಟು ಆಗಿದೆ. ಬಿಬಿಎಂಪಿ (ಕೇಂದ್ರ)-ಶೇ.52.40, ಬಿಬಿಎಂಪಿ(ಉತ್ತರ)-ಶೇ.50.02, ಬಿಬಿಎಂಪಿ(ದಕ್ಷಿಣ)-ಶೇ.50.21, ಬಾಗಲಕೋಟೆ-ಶೇ.71.08, ಬೆಂಗಳೂರು ಗ್ರಾಮಾಂತರ-ಶೇ.76.10, ಬೆಂಗಳೂರು ನಗರ-ಶೇ.53.08, ಬೆಳಗಾವಿ-ಶೇ.68.53, ಬಳ್ಳಾರಿ-ಶೇ.67.68, ಬೀದರ್-ಶೇ.62.66, ಬಿಜಾಪುರ(ವಿಜಯಪುರ)-ಶೇ.63.58, ಚಾಮರಾಜನಗರ-ಶೇ.80.81, ಚಿಕ್ಕಬಳ್ಳಾಪುರ-ಶೇ.76.64, ಚಿಕ್ಕಮಗಳೂರು-ಶೇ.72.06, ಚಿತ್ರದುರ್ಗ-ಶೇ.73.56, ದಕ್ಷಿಣ ಕನ್ನಡ-ಶೇ.69.88, ದಾವಣಗೆರೆ-ಶೇ.71.30, ಧಾರವಾಡ-ಶೇ.64.10, ಗದಗ-ಶೇ.71.55, ಗುಲ್ಬರ್ಗ-ಶೇ.59.85, ಹಾಸನ-ಶೇ.74.67.

ಹಾವೇರಿ-ಶೇ.73.25, ಕೊಡಗು-ಶೇ.70.46, ಕೋಲಾರ-ಶೇ.75.55, ಕೊಪ್ಪಳ-ಶೇ.73.25, ಮಂಡ್ಯ-ಶೇ.75.90, ಮೈಸೂರು-ಶೇ.68.32, ರಾಯಚೂರು-ಶೇ.64.16, ರಾಮನಗರ-ಶೇ.79.39, ಶಿವಮೊಗ್ಗ-ಶೇ.70.43, ತುಮಕೂರು-ಶೇ.75.24, ಉಡುಪಿ-ಶೇ.73.80, ಉತ್ತರ ಕನ್ನಡ-ಶೇ.68.06, ವಿಜಯನಗರ (ಹೊಸಪೇಟೆ)-ಶೇ.74.70 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೇ.66.66ರಷ್ಟು ಮತದಾನವಾಗಿದೆ.

ಮತ ಎಣಿಕೆ ಕೇಂದ್ರಗಳು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ಬಿಬಿಎಂಪಿ ಕೇಂದ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಬಸವನಗುಡಿಯ ಗಾಂಧಿ ಬಝಾರ್‍ನಲ್ಲಿರುವ ಬಿಎಂಎಸ್ ಕಾಲೇಜು, ಬಿಬಿಎಂಪಿ ದಕ್ಷಿಣ ವ್ಯಾಪ್ತಿಯ ಕ್ಷೇತ್ರಗಳ ಮತ ಎಣಿಕೆಯು ಜಯನಗರ 4ನೆ ಬ್ಲಾಕ್‍ನಲ್ಲಿರುವ ಎಸ್.ಎಸ್.ಎಂ.ಆರ್.ವಿ.ಪಿಯು ಕಾಲೇಜು ಹಾಗೂ ಬಿಬಿಎಂಪಿ ಉತ್ತರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ವಸಂತನಗರದ ಅರಮನೆ ರಸ್ತೆಯಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆಯಲಿದೆ. ಇನ್ನುಳಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಬಿಗಿ ಬಂದೋಬಸ್ತ್: ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಮತಗಳ ಎಣಿಕೆ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೆ, ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮತಗಳ ಎಣಿಕೆ ಕಾರ್ಯಕ್ಕಾಗಿ ಈಗಾಗಲೆ ಚುನಾವಣಾ ಆಯೋಗವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Similar News