ಮತ ಹಾಕಲು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದವರ ಕಾರು ಪಲ್ಟಿ
Update: 2023-05-10 22:25 IST
ಸಾಗರ : ಚುನಾವಣೆಯಲ್ಲಿ ಮತ ಹಾಕಲು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಟೊಯೋಟ ಫಾರ್ಚೂನರ್ ಕಾರು ಚನ್ನಗಿರಿ ಹೆಬ್ಬಲಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ನಡೆದಿದೆ.
ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚೆನ್ನಗಿರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಗೊಂಡವರನ್ನು ಸಾಗರದ ಖ್ಯಾತ ಉದ್ಯಮಿ ಇಕ್ಬಾಲ್ ಸಾಹೇಬರ ಮಕ್ಕಳಾದ ಝಹೂರ್ , ನಯಾಝ್ ಮತ್ತು ನಯಾಝ್‌ರ ಪತ್ನಿ ಸುನೈನಾ ಎಂದು ಗುರುತಿಸಲಾಗಿದೆ.
ಚೆನ್ನಗಿರಿ ತಾಲೂಕಿನ ಹೆಬ್ಬಲಗೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ನಡೆದಿದ್ದು, ಮಳೆ ಬರುತ್ತಿದ್ದ ಸಮಯದಲ್ಲಿ ಚಾಲಕ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಗುದ್ದಿದ ಕಾರು ಪಲ್ಟಿಯಾಗಿದೆ. ಈ ವೇಳೆ ಅವರೆಲ್ಲ ಬದುಕುಳಿದಿದ್ದೇ ಹೆಚ್ಚು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.