ಚುನಾವಣೋತ್ತರ ಸಮೀಕ್ಷೆಗಳು ಶೇ.100 ರಷ್ಟು ಸರಿಯಾಗಿರಲು ಸಾಧ್ಯವಿಲ್ಲ: ಸಿಎಂ ಬೊಮ್ಮಾಯಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಮೇಲುಗೈ ಸಾಧಿಸಿದೆ ಎಂಬ ಚುನಾವಣೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ತಮ್ಮ ತವರು ಕ್ಷೇತ್ರ ಶಿಗ್ಗಾಂವ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಪ್ರತಿಸ್ಪರ್ಧಿ ನಾಯಕರು ಹೇಳಿಕೊಳ್ಳುತ್ತಿರುವಂತೆ ಹೆಚ್ಚಿನ ಮತದಾನವು ಯಾವಾಗಲೂ ಬಿಜೆಪಿ ಪರವಾಗಿದೆಯೇ ಹೊರತು ಕಾಂಗ್ರೆಸ್ ಪರವಾಗಿಲ್ಲ. ಎಕ್ಸಿಟ್ ಪೋಲ್ ಗಳು ಶೇಕಡಾ 100 ರಷ್ಟು ಸರಿಯಾಗಿರಲು ಸಾಧ್ಯವಿಲ್ಲ. ಇಡೀ ಸನ್ನಿವೇಶವನ್ನು ಬದಲಾಯಿಸುವ ವ್ಯತ್ಯಾಸಗಳಿವೆ" ಎಂದು ಹೇಳಿದರು.
"ನಾವು ಸಂಪೂರ್ಣ ಬಹುಮತದಿಂದ ಗೆಲ್ಲುತ್ತೇವೆ ಎಂದು ನಮ್ಮ ಗ್ರೌಂಡ್ ರಿಪೋರ್ಟ್ ಹೇಳುತ್ತದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಮತ ಚಲಾಯಿಸದ ಬಹಳಷ್ಟು ಜನರು ಈ ಬಾರಿ ಮತ ಚಲಾಯಿಸಿದ್ದಾರೆ. ಆ ಮತಗಳು ಬಿಜೆಪಿಗೆ ಬರುತ್ತವೆ. ಮತ ಎಣಿಕೆ ನಡೆಯುವ ಮೇ 13ರವರೆಗೂ ಕಾಯೋಣ" ಎಂದು ಸಿಎಂ ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ನಡೆಯಲಿದೆ ಎಂದು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.