×
Ad

40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ: ಲಕ್ಷ್ಮಣ್ ಸವದಿ ವಿಶ್ವಾಸ

'ಕಾಂಗ್ರೆಸ್ ಪಕ್ಷ 127ರಿಂದ 130 ಕ್ಷೇತ್ರಗಳಲ್ಲಿ ಗೆಲುವು'

Update: 2023-05-11 12:55 IST

ಬೆಳಗಾವಿ, ಮೇ 11: ಜಿಲ್ಲೆಯ ಅಥಣಿ ಕ್ಷೇತ್ರದಿಂದ ತನಗೆ 1.20 ಲಕ್ಷ ಮತಗಳು ಬರಲಿದ್ದು, 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಅಥಣಿ ಪಟ್ಟಣದ ಸ್ವಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರಿದ ಮೇಲೆ ಅತ್ಯಂತ ಉತ್ಸಾಹದಿಂದ ಚುನಾವಣೆ ಎದುರಿಸಿದ್ದೇನೆ. ಕಾಂಗ್ರೆಸ್ ಮತ ಬ್ಯಾಂಕ್ ಜೊತೆಗೆ ಬಿಜೆಪಿ ತೊರೆದು ನನ್ನ ಬೆಂಬಲಿಗರು ಆಗಮಿಸಿದ್ದಾರೆ ಎಂದು ಹೇಳಿದರು.

ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ 35 ವರ್ಷಗಳಿಂದ ಸತತವಾಗಿ ಒಂದೇ ಸರಕಾರ ಎರಡು ಬಾರಿ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿಯಲ್ಲಿ ಪ್ರಾಮಾಣಿಕರು ನಿಷ್ಠಾವಂತರನ್ನು ನಿರ್ಲಕ್ಷ್ಯ ಮಾಡಲಾಗಿದೆ. ವ್ಯಾಪಾರೀಕರಣದಿಂದ ಬಿಜೆಪಿ ಪಕ್ಷಕ್ಕೆ ಬಹಳ ದೊಡ್ಡ ಹಾನಿಯುಂಟಾಗಿದೆ ಎಂದರು.

ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. 5 ಗ್ಯಾರಂಟಿ ಯೋಜನೆಗಳಿಂದ ಬಡವರು, ಕಾರ್ಮಿಕರಿಗೆ ಬಹಳಷ್ಟು ಆಶಾ ಕಿರಣ ಮೂಡಿದೆ. ಜನಪ್ರಿಯ ಯೋಜನೆಗಳಿಂದ ಜನತೆ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಅನೇಕ ಸಂಸ್ಥೆಗಳ ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಎಂದೂ ಹೇಳಿವೆ. ಬೇರೆ ಜಿಲ್ಲೆಗಳಿಂದ ನಾವು ಮಾಹಿತಿ ಪಡೆದಾಗ 127 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನನ್ನ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 127ರಿಂದ 130 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಅವರು ಹೇಳಿದರು.

Similar News