ರಾಜ್ಯದಲ್ಲಿ ಶೇ. ನೂರರಷ್ಟು ಕಾಂಗ್ರೆಸ್ ಸರಕಾರ ರಚನೆ: ಡಾ.ಜಿ.ಪರಮೇಶ್ವರ್

Update: 2023-05-11 11:58 GMT

ತುಮಕೂರು, ಮೇ 11:ರಾಜ್ಯದ ಜನರು ಬದಲಾವಣೆ ಬಯಸಿದ್ದು, ಇದಕ್ಕೆ ಗ್ರಾಮೀಣ ಭಾಗದಲ್ಲಿ ಆಗಿರುವ ದಾಖಲೆಯ ಮತದಾನವೇ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷ ಶೇ. ನೂರರಷ್ಟು ಸರಕಾರ ರಚನೆ ಮಾಡಲಿದೆ. ಇದು ಜನರ ಆಶಯವೂ ಆಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಚುನಾವಣೆಯಲ್ಲಿ ಶೇ18 ರಿಂದ 20ರಷ್ಟು ಯುವಜನತೆ ಮೊದಲ ಬಾರಿಗೆ ಮತಹಾಕಿದ್ದು,ಹೊಸ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ದೊರೆತಂತಾಗಿದೆ.ಇದಕ್ಕಾಗಿ ಕೊರಟಗೆರೆ, ಮಧುಗಿರಿ ಸೇರಿದಂತೆ ಜಿಲ್ಲೆಯ ಎಲ್ಲಾ ಮತದಾರರಿಗೂ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುವುದಾಗಿ ನುಡಿದರು.

ತುಮಕೂರು ಜಿಲ್ಲೆಯಲ್ಲಿ ತುಮಕೂರು ನಗರ ಮತ್ತು ಶಿರಾ ಹೊರತು ಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಶೇ80ಕ್ಕಿಂತಲೂ ಹೆಚ್ಚು ಮತದಾನವಾಗಿದೆ.ನಮಗೆ ಇರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ.ಇದನ್ನೇ ಸಮೀಕ್ಷೆಗಳು ಹೇಳಿವೆ.ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮೊದಲು ಸಂಪುಟ ಸಭೆಯಲ್ಲಿಯೇ ಪಕ್ಷ ಘೋಷಿಸಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಿದೆ.ಮಹಿಳೆಯರು,ಸಾಮಾಜಿಕವಾಗಿ ಹಿಂದುಳಿದ ಜನರು ನಮ್ಮ ಪ್ರಣಾಳಿಕೆಯನ್ನು ನಂಬಿ ಮತ ನೀಡಿದ್ದಾರೆ.ಹಾಗಾಗಿ ನಾವುಗಳು ಸಹ ಜನರ ಅಭಿಪ್ರಾಯಕ್ಕೆ ಬದ್ದತೆಯನ್ನು ತೋರಿಸಬೇಕಾಗಿದೆ.ಇವಿಎಂ ಮೇಲೆ ನಮ್ಮ ಅನುಮಾನ ಇಂದಿಗೂ ಇದೆ.ಹಾಗಾಗಿ ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಿ ಎಂದು ಕಾಂಗ್ರೆಸ್ ಪಕ್ಷ ಆಯೋಗಕ್ಕೆ ದೂರು ಸಲ್ಲಿಸಿದ್ದೇವು ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಪ್ರಜಾಪ್ರಭುತ್ವದಲ್ಲಿ ಜನರು ತಮ್ಮ ಜವಾಬ್ದಾರಿಯನ್ನು ಅರಿತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರಗಳಲ್ಲಿ ಕನಿಷ್ಠ 7 ರಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಕಾಣಲಿದೆ.ಮುಖ್ಯಮಂತ್ರಿಗಳ ರೇಸ್‍ನಲ್ಲಿ ತುಂಬ ಜನರಿದ್ದಾರೆ. ಹಾಗಾಗಿ ನಮ್ಮ ವರಿಷ್ಠರು ಸಿಎಲ್‍ಪಿ ಸಭೆಯಲ್ಲಿ ಇದನ್ನು ತೀರ್ಮಾನಿಸಲಿದ್ದಾರೆ. ಜೊತೆಗೆ ನಾವು ನೀಡಿರುವ ಭರವಸೆ,ಅವುಗಳನ್ನು ಈಡೇರಿಸಲು ಇರುವ ಚಾಕುಚಕ್ಯತೆ ಇವುಗಳನೆಲ್ಲಾ ಗಮನಹರಿಸಲಿದ್ದಾರೆ.ಅತಿ ಹೆಚ್ಚು ಮತದಾನ ಮಾಡಿದ ಎಲ್ಲಾ ಮತದಾರರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಡಾ.ಜಿ.ಪರಮೇಶ್ವರ್ ನುಡಿದರು.

ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಮಧುಗಿರಿ ಕ್ಷೇತ್ರದಲ್ಲಿ ಶೇ85.38ರಷ್ಟು ಮತದಾನವಾಗಿ ಇದಕ್ಕಾಗಿ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಗರ ಪ್ರದೇಶಗಳಲ್ಲಿ ನಿರೀಕ್ಷೆಯಂತೆ ಮತದಾನವಾಗಿಲ್ಲ. ಹಾಗಾಗಿ ಮತದಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ, ಮತದಾನ ಮಾಡದವರಿಗೆ ಸರಕಾರಿ ಸವಲತ್ತುಗಳನ್ನು ಕಡಿತಗೊಳಿಸುವ ನಿಯಮ ರೂಪಿಸಿದರೆ ಹೆಚ್ಚು ಮತದಾನ ಆಗಬಹುದು ಎಂಬ ಸಲಹೆ ನಮ್ಮದು.ಜನರು ತಮ್ಮ ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ ಹೋರಾಡುತ್ತಾರೆ.ಆದರೆ ತಮ್ಮ ಸಂವಿಧಾನಾತ್ಮಕ ಕರ್ತವ್ಯವನ್ನು ಮರೆಯುತ್ತಾರೆ.ಇದು ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ಕ್ಷೇತ್ರದ ಅಭ್ಯರ್ಥಿ ಇಕ್ಬಾಲ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ,ರಾಜ್ಯ ವಕ್ತಾರ ಮುರುಳೀಧರ ಹಾಲಪ್ಪ, ಮಾಜಿ ಶಾಸಕ ಗಂಗಹನುಮಯ್ಯ, ಉದ್ಯಮಿ ವೆಂಕಟೇಶ್, ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರರವಿಕುಮಾರ್,ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ, ನಟರಾಜು,ರೆಡ್ಡಿ ಚಿನ್ನಯಲ್ಲಪ್ಪ,ಮರಿಚನ್ನಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Similar News