4 ಬಾರಿ ಸಿಎಂ, 2 ಬಾರಿ ಪ್ರಧಾನಿಯಾಗಿರುವ ಮೋದಿಯವರು ಅಧಿಕಾರ ಬಿಟ್ಟುಕೊಡುತ್ತಾರೆಯೇ?: ಜಗದೀಶ್ ಶೆಟ್ಟರ್

''ನನಗೆ ಟಿಕೆಟ್ ನೀಡದಿದ್ದರಿಂದ 15-20 ಕ್ಷೇತ್ರಗಳಲ್ಲಿ ಬಿಜೆಪಿ ಪರಿಣಾಮ ಎದುರಿಸಬೇಕಾಗಿದೆ''

Update: 2023-05-11 12:53 GMT

ಹುಬ್ಬಳ್ಳಿ: 'ನರೇಂದ್ರ ಮೋದಿಯವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದಾರೆ, ಎರಡು ಬಾರಿ ಪ್ರಧಾನಮಂತ್ರಿಗಳಾಗಿದ್ದಾರೆ. ಈ ಹಂತದಲ್ಲಿ ಅವರು ಅಧಿಕಾರ ಬಿಟ್ಟುಕೊಡುತ್ತಾರೆಯೇ?' ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ. 

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ನಾನು ಯಾವುದೇ ಆಸೆಯಿಂದ ಕಾಂಗ್ರೆಸ್ ಸೇರಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಯೂ ನಾನಲ್ಲ. ಬಿಜೆಪಿಯವರು ಮಾಡಿದ ಮೋಸಕ್ಕಾಗಿ ಕಾಂಗ್ರೆಸ್ ಪಕ್ಷ ಸೇರಿದೆ, ಶಾಸಕನಾಗಿದ್ದರೆ ಮನಸ್ಸಿಗೆ ಸಮಾಧಾನ ಆಗುತ್ತದೆ. ಜೋಶಿಯವರು 4 ಬಾರಿ ಸಂಸದ, ಮಂತ್ರಿಯಾಗಿದ್ದಾರೆ. ರಾಜಕಾರಣ ಬಿಡಲಿ. ಮೋದಿ ನಾಲ್ಕು ಬಾರಿ ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾರೆ. ಅವರು ರಾಜಕೀಯ ಬಿಡ್ತಾರಾ? ಅದು ಸಾಧ್ಯವಿಲ್ಲ. ಇನ್ನೊಮ್ಮೆ ಪ್ರಧಾನಿ ಆಗಲು ಪ್ರಯತ್ನ ಮಾಡ್ತಿದ್ದಾರೆ. ಜನರ ಆಶೀರ್ವಾದ ಇರುವವರೆಗೆ ರಾಜಕೀಯದಲ್ಲಿ ಇರಬೇಕೆಂಬುದು ನನ್ನ ನಿಲುವು' ಎಂದು ಹೇಳಿದರು. 

''ಬಿಜೆಪಿ ನನಗೆ ಟಿಕೆಟ್‌ ಕೊಡದೆ ಮೋಸ ಮಾಡಿದ್ದರಿಂದ ದೊಡ್ಡ ಪರಿಣಾಮ ಆಗುವುದು ಖಚಿತ. ನನಗೆ ಟಿಕೆಟ್‌ ಕೊಟ್ಟಿದ್ದರೆ ಎಲ್ಲವೂ ಸರಿ ಇರುತ್ತಿತ್ತು. ನನಗೆ ಟಿಕೆಟ್ ನೀಡದಿದ್ದರಿಂದ 15-20 ಕ್ಷೇತ್ರಗಳಲ್ಲಿ ಬಿಜೆಪಿ ಪರಿಣಾಮ ಎದುರಿಸಬೇಕಾಗಿದೆ'' ಎಂದು ತಿಳಿಸಿದರು.

''ಗೆಲುವಿನ ಅಂತರ ಹೆಚ್ಚಾಗಲಿದೆ''

'ಕ್ಷೇತ್ರದಲ್ಲಿ ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತ ದ್ವಿಗುಣ ಬೆಂಬಲ ಸಿಕ್ಕಿದೆ. ಗೆಲುವಿನ ಅಂತರ ಕಳೆದ ಬಾರಿಗಿಂತ ಹೆಚ್ಚಾಗಲಿದೆ.‌ ನಾನು ಆರು ಎಲೆಕ್ಷನ್ ಮಾಡಿದ್ದೀನಿ, ಮತದಾರರಿಗೆ ದುಡ್ಡು ಹಂಚಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ, ಕುಕ್ಕರ್ ಕೊಡುತ್ತಾರೆ. ಆದರೆ ಬಿಜೆಪಿ ಹೆಸರು ಹೇಳಿಕೊಳ್ಳುವ ವ್ಯಕ್ತಿಗಳು ನಮ್ಮ ಕ್ಷೇತ್ರದಲ್ಲಿ ಹತಾಶರಾಗಿ ಹಣ ಹಂಚಿದ್ದಾರೆ.‌ ಸ್ಲಮ್‌ಗಳಲ್ಲಿ ಜನರಿಗೆ ಐದು‌ನೂರು, ಸಾವಿರ ಹಣ ಕೊಟ್ಟಿದ್ದಾರೆ. ಹಣದ ಬಲದ ಮೇಲೆ ಗೆಲ್ಲುವುದಾದರೆ ಬಹಳಷ್ಟು ಶ್ರೀಮಂತರೇ ಗೆಲ್ಲುತ್ತಿದ್ದರು. ನಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚುವುದು ಮಾಡಿದ್ದು ನನಗೆ ವೇದನೆಯಾಗಿದೆ' ಎಂದು ಅವರು ಹೇಳಿದರು.

Similar News