×
Ad

ಜೆಡಿಎಸ್​​ನೊಂದಿಗೆ ಒಳ ಒಪ್ಪಂದ ಆರೋಪ: ಉಪ್ಪು ಮುಟ್ಟಿ ಪ್ರಮಾಣ ಮಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

Update: 2023-05-11 19:36 IST

ಮೈಸೂರು,ಮೇ.11: ತಮ್ಮ ವಿರುದ್ಧ ಹೊಂದಾಣಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಉಪ್ಪು ಮುಟ್ಟಿ ಪ್ರಮಾಣ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಉಪ್ಪು ಮುಟ್ಟಿ ಪ್ರಮಾಣ ಮಾಡುವ ಮೂಲಕ ತಮ್ಮ ವಿರುದ್ಧದ ಹೊಂದಾಣಿಕೆ ಆರೋಪ ತಳ್ಳಿ ಹಾಕಿದ ಮಾವಿನಹಳ್ಳಿ ಸಿದ್ದೇಗೌಡ,  ಉಪ್ಪು ಮುಟ್ಟಿ ಹೇಳುತ್ತೇನೆ. ಸಿದ್ದರಾಮಯ್ಯರಿಗೆ ಮೋಸ ಮಾಡಿಲ್ಲ. ಚಾಮುಂಡಿ ತಾಯಿ ಆಣೆಗೂ ನಾನು ತಪ್ಪು ಮಾಡಿಲ್ಲ. ನಾನು ಫೋನ್ ಸ್ವಿಚ್ ಆಫ್ ಮಾಡಿಲ್ಲ ಎಂದಿದ್ದಾರೆ.

500 ಜನರ ಗುಂಪು ಕಟ್ಟಿಕೊಂಡು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ನಾನು ಯಾರೋ ಒಬ್ಬ ವ್ಯಕ್ತಿಯನ್ನ ನಂಬಿ ಮೋಸ ಹೋದೆ. ಸಿದ್ದರಾಮಯ್ಯಗೆ ಈ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಖುದ್ದು ಸಿದ್ದರಾಮಯ್ಯರನ್ನ ನಾನೇ ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಮಾವಿನಹಳ್ಳಿ ಸಿದ್ಧೇಗೌಡ ತಿಳಿಸಿದ್ದಾರೆ. 

ನಾನು ಸೇರಿದಂತೆ ಒಟ್ಟು ನಾವು ನಾಲ್ಕು ಜನ ಅಣ್ಣ ತಮ್ಮಂದಿರು, ನನ್ನ ಮಗ ಯಾರ ಜೊತೆಯೂ ಹೊಂದಾಣಿಕೆ ಮಾತನಾಡಿಲ್ಲ, ನಮ್ಮ ಕುಟುಂಬದಲ್ಲಿ ಅಂತಹ ಕೆಟ್ಟ ಬುದ್ಧಿ ಇಲ್ಲ. ನಾನು ಜೆಡಿಎಸ್ ಕಾರ್ಯಕರ್ತರ ಅಥವಾ ಜಿ.ಟಿ.ದೇವೇಗೌಡರ ಜೊತೆ ಮಾತನಾಡಿದ್ದೇನೆ ಎಂದು ಸಾಬೀತು ಪಡಿಸಿದರೆ ನನ್ನ ಕತ್ತನ್ನು ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಆಪ್ತ ಮಾಜಿ ಜಿ.ಪಂ. ಅಧ್ಯಕ್ಷ ಮರೀಗೌಡ ದೊಡ್ಡ ಮೋಸಗಾರ, ಆತನಿಂದಲೇ ಕಾಂಗ್ರೆಸ್‍ನಲ್ಲಿ ಗೊಂದಲ ಸೃಷ್ಟಿಯಾಗಿರುವುದು. ನಾನು ಒಂದು ಸಾವಿರದಿಂದ ಐದು ಸಾವಿರ ಅಂತರದಿಂದ ಗೆಲ್ಲುತ್ತೇನೆ. ಮರೀಗೌಡ ಮೂಲ ಕಾಂಗ್ರೆಸ್ಸಿಗರು ವಲಸೆ ಕಾಂಗ್ರೆಸ್ಸಿಗರು ಎಂದು ಕ್ಷೇತ್ರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾನೆ. ಆತನನ್ನು 20 ದಿನ ನನ್ನ ಜೊತೆಯಲ್ಲಿ ಕರೆದುಕೊಂಡು ತಿರುಗಾಡಿದ್ದೇನೆ. ಆದರೆ ಆತ ನನಗೆ ಮೋಸ ಮಾಡಿಬಿಟ್ಟ. ಈ ವಿಚಾರವನ್ನು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರಿಗೆ ತಿಳಿಸುತ್ತೇನೆ ಎಂದು ಹೇಳಿದರು.

Similar News