ಮಾದಕದ್ರವ್ಯ ಕಳ್ಳಸಾಗಣೆ ಪ್ರಕರಣ: ಆರೋಪಿಗೆ ಹೈಕೋರ್ಟ್ ನಿಂದ ಜಾಮೀನು ನೀಡಲು ನಕಾರ
ಬೆಂಗಳೂರು, ಮೇ 11: ಮಾದಕ ದ್ರವ್ಯಗಳ ಕಳ್ಳಸಾಗಣೆ ಮಾಡುತ್ತಿದ್ದ ಕೀನ್ಯಾ ದೇಶದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಮಾದಕದ್ರವ್ಯ ಮತ್ತು ಉದ್ದೀಪನ ಮದ್ದು ಕಾಯ್ದೆ 1985ರ ಅಡಿ ಸ್ಥಾಪನೆಯಾಗಿರುವ ವಿಶೇಷ ಕೋರ್ಟಿನಲ್ಲಿ 1,300ಕ್ಕೂ ಅಧಿಕ ಪ್ರಕರಣ ಬಾಕಿ ಇದೆ. ಅವುಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು ಅಸಾಧ್ಯ ಎಂದು ಪೀಠ ಹೇಳಿತು.
ವಿದೇಶಿ ಮಾರ್ಗಗಳ ಮೂಲಕ ದೇಶದಲ್ಲಿ ಮಾದಕ ದ್ರವ್ಯಗಳ ಸಾಗಣೆಗೆ ಪ್ರಯತ್ನಿಸುತ್ತಿರುವ ಆಧಾರದ ಮೇಲೆ ಬಂಧನಕ್ಕೊಳಗಾಗಿದ್ದ ಕೀನ್ಯಾ ಪ್ರಜೆ ಎಮ್ಯಾನುಯಲ್ ಮೈಕೆಲ್ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾ.ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಪ್ರಕಟಿಸಿತು.
ಭಾರತೀಯ ಸಂವಿಧಾನದ 21ನೆ ವಿಧಿಯಡಿ ಆರೋಪಿಗೆ ಜಾಮೀನು ಪಡೆಯುವ ಹಕ್ಕಿರುತ್ತದೆ. ಅದರಂತೆ ವಿಚಾರಣಾಧೀನ ನ್ಯಾಯಾಲಯದ ಮುಂದಿರುವ 1,308 ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ. ಆದರೆ ಅದು ನಾಗರಿಕ ಸಮಾಜದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಪ್ರಕರಣವೇನು?: ಎಮ್ಯಾನುಯಲ್ ಮೈಕೆಲ್ ಎಂಬ ಆರೋಪಿ 2020ರ ಡಿಸೆಂಬರ್‍ನಲ್ಲಿ ಮಾದಕ ದ್ರವ್ಯ ಕಳ್ಳ ಸಾಗಾಣೆ ಆರೋಪದಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ. ಅಂದಿನಿಂದ ಆತ ನ್ಯಾಯಾಂಗ ಬಂಧನಲ್ಲಿದ್ದಾನೆ.
2022ರ ನವೆಂಬರ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಮೂರು ತಿಂಗಳಲ್ಲಿ ಆರೋಪಿ ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವಂತೆ ವಿಚಾರಣಾ ಕೋರ್ಟ್‍ಗೆ ಸೂಚನೆ ನೀಡಿತ್ತು. ವಿಚಾರಣಾ ಕೋರ್ಟ್ ಮತ್ತಷ್ಟು ಸಮಯಾವಕಾಶ ಕೋರಿತ್ತು. ಈ ನಡುವೆ ಆರೋಪಿ ಹೈಕೋರ್ಟ್‍ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.