ಸತ್ಯೋತ್ತರ ಯುಗದ ಸುಳ್ಳಿನ ಹೆಮ್ಮಾರಿ ಡೀಪ್‌ಫೇಕ್

Update: 2023-05-12 04:55 GMT

ಡೀಪ್‌ಫೇಕ್ ಮೂಲಭೂತವಾಗಿ ಅತಿ ವಾಸ್ತವ ಡಿಜಿಟಲ್ ತಿದ್ದುವಿಕೆ. ಕ್ಲೌಡ್ ಕಂಪ್ಯೂಟಿಂಗ್, ಸಾರ್ವಜನಿಕ ಸಂಶೋಧನೆ, ಎಐ ಅಲ್ಗರಿದಂಗಳು, ಅಪಾರ ಪ್ರಮಾಣದ ಅಂಕಿಅಂಶ-ಮಾಹಿತಿಯ ಲಭ್ಯತೆ ಹಾಗೂ ವಿಸ್ತೃತ ವೇದಿಕೆ ಇರುವುದರಿಂದ, ಅದರ ತಲುಪುವಿಕೆ ಪ್ರಮಾಣ ಮತ್ತು ವ್ಯಾಪ್ತಿ ಅಗಾಧವಾಗಿದೆ. ವ್ಯಕ್ತಿಯ ಘನತೆಗೆ ಧಕ್ಕೆ ತರಲು, ಸುಳ್ಳು ಸಾಕ್ಷ್ಯ ಸೃಷ್ಟಿಸಲು, ಸಾರ್ವಜನಿಕರನ್ನು ವಂಚಿಸಲು ಮತ್ತು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಹಾಳು ಮಾಡಲು ಬಳಸಬಹುದು. ಇವೆಲ್ಲವನ್ನೂ ಕನಿಷ್ಠ ಸಂಪನ್ಮೂಲದಿಂದ ಸಾಧ್ಯ ಮಾಡಬಹುದು. ಡಿಎಫ್‌ನಿಂದ ಶ್ರಾವ್ಯ ಮತ್ತು ದೃಶ್ಯ ತದ್ರೂಪಿ ಸೃಷ್ಟಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರೊಫೈಲ್, ಅಸಲಿ ವೀಡಿಯೊದಲ್ಲಿ ವಿವಾದಾತ್ಮಕ ಹೇಳಿಕೆ ಸೇರ್ಪಡೆ ಮಾಡಬಹುದು.



ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಬುನಾದಿ ಮುಕ್ಕಾಗುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕ ಸಂವಾದವನ್ನು ಪ್ರಭಾವಿಸುವ ಹಾಗೂ ಜನಜೀವನದ ಮೇಲೆ ಪರಿಣಾಮ ಬೀರಬಲ್ಲ ತಂತ್ರಜ್ಞಾನವೊಂದು ಮುನ್ನೆಲೆಗೆ ಬಂದಿದೆ. ಅದೇ ಡೀಪ್‌ಫೇಕ್. 2017ರಲ್ಲಿ ಬೆಳಕಿಗೆ ಬಂದ, ಕಟ್ಟುಜಾಣ್ಮೆ(ಎಐ-ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಯಂತ್ರ ಕಲಿಕೆ(ಎಂಎಲ್-ಮೆಷಿನ್ ಲರ್ನಿಂಗ್)ಯನ್ನು ಆಧರಿಸಿದ ತಂತ್ರಜ್ಞಾನವಿದು. ಡೀಪ್ ಲರ್ನಿಂಗ್ ಎಂಬ ಎಐ ವಿಧಾನದ ಮೂಲಕ ಯಾವುದೋ ಘಟನೆ, ವಿದ್ಯಮಾನ ಅಥವಾ ವ್ಯಕ್ತಿಯ ಬಿಂಬಕ್ಕೆ ಇನ್ಯಾವುದೋ ಅಂಥದ್ದೇ ದೃಶ್ಯ, ಚಿತ್ರ ಇಲ್ಲವೇ ಧ್ವನಿಯನ್ನು ಅಳವಡಿಸಿ, ನಕಲನ್ನು ಅಸಲಿಯಾಗಿಸುವ ಮತ್ತು ಅಸಲಿ-ನಕಲಿ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದಂತೆ ಮಾಡುವ ತಂತ್ರಜ್ಞಾನ. ಸುಳ್ಳು ಸೃಷ್ಟಿಯ ಸಾಮ್ರಾಜ್ಯಕ್ಕೆ ಇನ್ನೊಂದು ಸೇರ್ಪಡೆ. ರಾಜಕೀಯ ಕ್ಷೇತ್ರದಲ್ಲಿ ಡೀಪ್‌ಫೇಕ್ ಎಗ್ಗಿಲ್ಲದೆ ಬಳಕೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ದೀರ್ಘ ಇತಿಹಾಸ
ಪ್ರಾಯೋಜಿತ ಮತ್ತು ಯೋಜಿತ ಪ್ರಚಾರಕ್ಕೆ ದೀರ್ಘ ಇತಿಹಾಸವಿದೆ. ಅಧಿಕೃತ ಇತಿಹಾಸದ ಸೋಗಿನಲ್ಲಿದ್ದ ಅಸಂಖ್ಯಾತ ಕಟ್ಟುಕತೆಗಳನ್ನು ಜನರ ಮನಸ್ಸು ಸೆಳೆಯಲು ಬಳಸಿಕೊಳ್ಳಲಾಗಿದೆ. ಗ್ರೀಕ್ ತತ್ವಶಾಸ್ತ್ರಜ್ಞ ಅರಿಸ್ಟಾಟಲ್‌ರ ‘ರೆಟರಿಕ್’ ಸಿದ್ಧಾಂತವು ‘ಸಂವಹನಕಾರ ಉದ್ದೇಶಪೂರ್ವಕ ಸಂದೇಶಗಳ ಮೂಲಕ ಜನರ ಮನವೊಲಿಸಲು ಪ್ರಯತ್ನಿಸುತ್ತಾನೆ’ ಎನ್ನುತ್ತದೆ. ಆಧುನಿಕ ರಾಜಕೀಯ ತತ್ವಶಾಸ್ತ್ರ ಹಾಗೂ ರಾಜಕೀಯ ವಿಜ್ಞಾನದ ಪಿತಾಮಹ ಎಂದೇ ಹೆಸರಾದ ಇಟಲಿಯ ನಿಕ್ಕೋಲೋ ಮೆಕಿಯಾವಲ್ಲಿ ತಮ್ಮ ಹೊತ್ತಗೆ ‘ಪ್ರಿನ್ಸ್’ ನಲ್ಲಿ ‘ರಾಜನೊಬ್ಬ ತನ್ನ ಹಿಡಿತ ಸಾಧಿಸಲು ತೆಗೆದುಕೊಳ್ಳುವ ನಿರ್ಧಾರಗಳು ಅನೈತಿಕವಾಗಿದ್ದರೂ, ಅರಾಜಕತೆ ಸೃಷ್ಟಿಸಿದರೂ ಪರವಾಗಿಲ್ಲ. ರಾಜಕೀಯ ಯಾವತ್ತೂ ವಂಚನೆ, ಅಪರಾಧ ಮತ್ತು ವಿಶ್ವಾಸಘಾತಕತೆಯನ್ನು ಒಳಗೊಂಡಿರುತ್ತದೆ’ ಎನ್ನುತ್ತಾನೆ. ಅಮೆರಿಕದ ಪುಲಿಟ್ಜರ್ ಪುರಸ್ಕೃತ ಪತ್ರಕರ್ತ, ಲೇಖಕ ವಾಲ್ಟರ್ ಲಿಪ್‌ಮನ್ ಅವರ ರಾಜಕೀಯ ಸಂವಹನ ಕ್ಷೇತ್ರದ ಬಹುಮುಖ್ಯ ಕೃತಿ ಎಂದು ಪರಿಗಣಿಸಲ್ಪಟ್ಟಿರುವ ‘ಪಬ್ಲಿಕ್ ಒಪಿನಿಯನ್’, ಕೆಲವರ ಹಿತಾಸಕ್ತಿ, ಪಡಿಯಚ್ಚುಗಳು ಮತ್ತು ಮಿಥ್ಯೆಗಳು ಹೇಗೆ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಬಳಕೆಯಾಗುತ್ತವೆ ಎಂಬುದನ್ನು ವಿವರಿಸುತ್ತದೆ. ಆಧುನಿಕ ಭಾಷಾ ವಿಜ್ಞಾನದ ಪಿತಾಮಹ ಎನ್ನಲಾದ ನೋಮ್ ಚಾಮ್‌ಸ್ಕಿ, ಅಭಿಪ್ರಾಯಗಳನ್ನು ಹೇಗೆ ಸೃಷ್ಟಿಸಲಾಗುತ್ತದೆ ಎಂಬುದನ್ನು ‘ಮ್ಯಾನ್ಯುಫ್ಯಾಕ್ಚರಿಂಗ್ ಕನ್ಸೆಂಟ್’ನಲ್ಲಿ ಬಿಡಿಸಿಟ್ಟಿದ್ದಾರೆ.

ಹಲವು ಸಂದಿಗ್ಧಗಳು
ಡೀಪ್‌ಫೇಕ್‌ಗಳು ಯಂತ್ರ ಕಲಿಕೆ ಮತ್ತು ಕಟ್ಟು ಜಾಣ್ಮೆಯನ್ನು ಬಳಸಿಕೊಂಡು, ದೃಶ್ಯ ಮತ್ತು ಶ್ರಾವ್ಯ ವಿಷಯಗಳನ್ನು ತಿರುಚುತ್ತವೆ. ನಂಬಿಕಾರ್ಹ ಎಂಬಂತೆ ಕಂಡುಬರುವುದರಿಂದ, ತಪ್ಪುಮಾಹಿತಿ ನೀಡುವ ಹಾಗೂ ಪ್ರಚಾರದ ಸರಕಾಗಿ ಬಳಸಲ್ಪಡುತ್ತವೆ. ಇದು ವಾಸ್ತವ ಮತ್ತು ಕಲ್ಪನೆ ನಡುವಿನ ವ್ಯತ್ಯಾಸವನ್ನು ಪತ್ತೆ ಹಚ್ಚುವ ಜನತೆಯ ಸಾಮರ್ಥ್ಯಕ್ಕೆ ಧಕ್ಕೆ ತರುತ್ತದೆ. ವ್ಯಕ್ತಿಯನ್ನು ಅಶ್ಲೀಲ-ಅವಮಾನಕರ ಸನ್ನಿವೇಶದಲ್ಲಿ ಸಿಲುಕಿಸಲು ಬಳಕೆಯಾಗುತ್ತದೆ. ಇಂಥ ಅಶ್ಲೀಲ ಫೋಟೊ/ವೀಡಿಯೊದಿಂದ ಖಾಸಗಿತನದ ಉಲ್ಲಂಘನೆಯಲ್ಲದೆ, ಘನತೆಗೆ ಧಕ್ಕೆಯುಂಟಾಗಲಿದೆ. ಹಣಕಾಸು ವಂಚನೆಗೂ ಕಾರಣವಾಗಬಹುದು. ಇತ್ತೀಚೆಗೆ ಇಂಗ್ಲೆಂಡ್‌ನ ಕಂಪೆನಿಯೊಂದರ ಮುಖ್ಯಸ್ಥರಿಗೆ ಜರ್ಮನಿಯಲ್ಲಿದ್ದ ಆತನ ಬಾಸ್ ಧ್ವನಿಯನ್ನು ನಕಲು ಮಾಡಿ, ಫೋನ್ ಕರೆ ಮಾಡಲಾಗಿತ್ತು. ಹಣ ವರ್ಗಾಯಿಸಬೇಕೆಂದು ಹೇಳಿದ್ದರಿಂದ, ಆತ ವಂಚಕನಿಗೆ 2.2 ಲಕ್ಷ ಡಾಲರ್ ಹಣ ವರ್ಗಾಯಿಸಿ ಪಿಗ್ಗಿ ಬಿದ್ದ.
ಇವೆಲ್ಲಕ್ಕಿಂತ ಹೆಚ್ಚು ಅಪಾಯಕರ ಚುನಾವಣೆಗಳನ್ನು ತಿರುಚಲು ಬಳಕೆ. ಡೀಪ್‌ಫೇಕ್ ವಿದ್ರೋಹ ಕೃತ್ಯಗಳಿಗೂ ಬಳಕೆಯಾಗಬಹುದು. ತಿದ್ದಿದ ವೀಡಿಯೋ ಬಳಸಿ ದೇಶ ಹಾಗೂ ರಕ್ಷಣಾ ಪಡೆಗಳನ್ನು ಬ್ಲ್ಯಾಕ್‌ಮೇಲ್ ಮಾಡಿ, ಮಿಲಿಟರಿ ರಹಸ್ಯಗಳನ್ನು ರಟ್ಟು ಮಾಡಬಹುದು. 2019ರಲ್ಲಿ ಅಸೋಸಿಯೇಟೆಡ್ ಪ್ರೆಸ್ ಗುರುತಿಸಿದ ಕೇಟಿ ಜೋನ್ಸ್ ಎಂಬ ಹೆಸರಿನ ಲಿಂಕ್ಡ್‌ಇನ್ ಪ್ರೊಫೈಲ್ ವಿದ್ರೋಹಿ ಕೃತ್ಯಗಳ ವೇದಿಕೆಯಾಗಿತ್ತು. ಪ್ರೊಫೈಲ್ ವಾಶಿಂಗ್ಟನ್‌ನ ಹಲವು ಪ್ರಭಾವಿಗಳೊಡನೆ ಸಂಪರ್ಕ ಹೊಂದಿತ್ತು. ಉಕ್ರೇನ್ ಪ್ರಧಾನಿ ವೊಲೊದಿಮಿರ್ ಝೆಲೆನ್‌ಸ್ಕ್ಕಿ, ‘‘ದೇಶದ ಸೈನಿಕರು ರಶ್ಯದ ಸೈನಿಕರಿಗೆ ಶರಣಾಗಬೇಕು’’ ಎಂದು ಹೇಳುತ್ತಿರುವ ತಮ್ಮ ವೀಡಿಯೋ ಡಿಎಫ್ ಎಂದು ಮಾರ್ಚ್ 2022ರಲ್ಲಿ ಬಹಿರಂಗಗೊಳಿಸಿದ್ದರು. ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಮನೀಷ್ ಕಶ್ಯಪ್ ಎಂಬಾತ ಯುಟ್ಯೂಬ್‌ನಲ್ಲಿ ನಕಲಿ ವೀಡಿಯೊ ಹಾಕಿದ್ದ. ವೀಡಿಯೊ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಆತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ 19 ಎಫ್‌ಐಆರ್ ದಾಖಲಿಸಲಾಗಿತ್ತು. ಮನೀಷ್ ಮಾರ್ಚ್ 18ರಂದು ಬಿಹಾರದ ಜಗದೀಶ್‌ಪುರ ಠಾಣೆಗೆ ಶರಣಾಗಿದ್ದ. ತನ್ನ ಮೇಲೆ ದಾಖಲಾದ ಎಫ್‌ಐಆರ್‌ಗಳನ್ನು ಬಿಹಾರಕ್ಕೆ ವರ್ಗಾಯಿಸಬೇಕು ಹಾಗೂ ದೂರು ರದ್ದುಗೊಳಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಮೇ 8, 2023ರಂದು ತಳ್ಳಿಹಾಕಿತು.

‘ಸುಳ್ಳುಕೋರರ ಲಾಭಾಂಶ’
ವ್ಯಕ್ತಿ ಅಶ್ಲೀಲ ಅಥವಾ ಅಪರಾಧ ಕೃತ್ಯದಲ್ಲಿ ತೊಡಗದೆ ಇದ್ದರೂ, ಸಾಚಾ ವಿಷಯವನ್ನು ಸುಳ್ಳು ಎಂದು ಸಾಬೀತುಪಡಿಸುವುದು ಸಾಧ್ಯವಾಗಲಿದೆ. ವರ್ಜೀನಿಯಾ ಸ್ಕೂಲ್ ಆಫ್ ಲಾ ವಿಶ್ವವಿದ್ಯಾನಿಲಯದ ಪ್ರೊ. ಡೇನಿಯಲ್ ಕೀಟ್ಸ್ ಸಿಟ್ರಾನ್ ಮತ್ತು ರಾಬರ್ಟ್ ಚೆಸ್ನಿ ಇದನ್ನು ‘ಸುಳ್ಳುಕೋರರ ಲಾಭಾಂಶ’(ಲೈಯರ್ಸ್ ಡಿವಿಡೆಂಡ್) ಎಂದು ಕರೆಯುತ್ತಾರೆ. ಇದರರ್ಥ-ಡಿಎಫ್ ತಂತ್ರಜ್ಞಾನದಿಂದ ಅಧಿಕೃತ ಮಾಹಿತಿಯನ್ನು ಕೂಡ ಸುಳ್ಳು ಎಂದು ಸಾಬೀತುಪಡಿಸಿ, ದುರುಪಯೋಗ ಮಾಡಬಹುದು. ತಂತ್ರಜ್ಞಾನ ಮುಂದುವರಿದಂತೆ ಇಂತಹ ವೀಡಿಯೊಗಳ ಸೃಷ್ಟಿ ಇನ್ನಷ್ಟು ಸುಲಭವಾಗಲಿದೆ. ವ್ಯಕ್ತಿಯೊಬ್ಬ ಸಮಾಜವಿರೋಧಿ ವರ್ತನೆ ಹೊಂದಿದ್ದಾನೆಂದು ಮತ್ತು ಮಾಡದೆ ಇರುವ ಕೆಲಸಗಳನ್ನು ಆತ ಮಾಡಿದ್ದಾನೆಂದು ಮಿಥ್ಯಾರೋಪ ಹೊರಿಸಬಹುದು. ಆತ ಸಾಕ್ಷ್ಯಾಧಾರ ನೀಡುವಷ್ಟರಲ್ಲಿ ತಡವಾಗಿರುತ್ತದೆ; ಆಗಬೇಕಾದ ಹಾನಿ ಆಗಿರುತ್ತದೆ. ಈ ತಂತ್ರಜ್ಞಾನ ಅಲ್ಪಕಾಲೀನ ಮತ್ತು ದೀರ್ಘಕಾಲೀನ ಸಾಮಾಜಿಕ ಹಾನಿ ಉಂಟುಮಾಡಲಿದ್ದು, ಜನರು ಸಾಂಪ್ರದಾಯಿಕ ಮಾಧ್ಯಮಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ. ಸರಕಾರಗಳು ಅನಿಶ್ಚಿತತೆಯನ್ನು ಸೃಷ್ಟಿಸಲು ಬಳಸಿದರೆ, ನಿಷೇಧಿತ ಗುಂಪುಗಳು ಮತ್ತು ಉಗ್ರಗಾಮಿಗಳು ಜನರಲ್ಲಿ ರಾಷ್ಟ್ರವಿರೋಧಿ ಭಾವನೆ ಸೃಷ್ಟಿಸಲು ಬಳಸಬಹುದು. ಅಪಥ್ಯ ಸತ್ಯವನ್ನು ಸುಳ್ಳು ಮಾಡಲು ಹಾಗೂ ಸುಳ್ಳು ಸುದ್ದಿ/ಪರ್ಯಾಯ ಕಥನಗಳನ್ನು ಬಳಸಿಕೊಂಡು, ಮಾಧ್ಯಮದ ವರದಿ ಮತ್ತು ಸತ್ಯಸಂಗತಿಗಳನ್ನು ಸುಳ್ಳು ಎಂದು ಸಾಬೀತುಪಡಿಸಬಹುದು.

ತಪ್ಪು ಮಾಹಿತಿ ಹಾಗೂ ವಂಚನೆಯಿಂದ ಸಾಮಾಜಿಕ ವಿಭಜನೆ, ಧ್ರುವೀಕರಣ ಹೆಚ್ಚಲಿದೆ. ಸಾಮಾಜಿಕ ಮಾಧ್ಯಮದ ನರೇಟಿವ್‌ಗಳನ್ನು ಸುಲಭವಾಗಿ ತಿದ್ದಬಹುದು. ಡೀಪ್‌ಫೇಕ್ ಮೂಲಭೂತವಾಗಿ ಅತಿ ವಾಸ್ತವ ಡಿಜಿಟಲ್ ತಿದ್ದುವಿಕೆ. ಕ್ಲೌಡ್ ಕಂಪ್ಯೂಟಿಂಗ್, ಸಾರ್ವಜನಿಕ ಸಂಶೋಧನೆ, ಎಐ ಅಲ್ಗರಿದಂಗಳು, ಅಪಾರ ಪ್ರಮಾಣದ ಅಂಕಿಅಂಶ-ಮಾಹಿತಿಯ ಲಭ್ಯತೆ ಹಾಗೂ ವಿಸ್ತೃತ ವೇದಿಕೆ ಇರುವುದರಿಂದ, ಅದರ ತಲುಪುವಿಕೆ ಪ್ರಮಾಣ ಮತ್ತು ವ್ಯಾಪ್ತಿ ಅಗಾಧವಾಗಿದೆ. ವ್ಯಕ್ತಿಯ ಘನತೆಗೆ ಧಕ್ಕೆ ತರಲು, ಸುಳ್ಳು ಸಾಕ್ಷ್ಯ ಸೃಷ್ಟಿಸಲು, ಸಾರ್ವಜನಿಕರನ್ನು ವಂಚಿಸಲು ಮತ್ತು ಪ್ರಜಾಪ್ರಭುತ್ವದ ಮೇಲಿನ ನಂಬಿಕೆಯನ್ನು ಹಾಳು ಮಾಡಲು ಬಳಸಬಹುದು. ಇವೆಲ್ಲವನ್ನೂ ಕನಿಷ್ಠ ಸಂಪನ್ಮೂಲದಿಂದ ಸಾಧ್ಯ ಮಾಡಬಹುದು. ಡಿಎಫ್‌ನಿಂದ ಶ್ರಾವ್ಯ ಮತ್ತು ದೃಶ್ಯ ತದ್ರೂಪಿ ಸೃಷ್ಟಿಸಬಹುದು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಪ್ರೊಫೈಲ್, ಅಸಲಿ ವೀಡಿಯೊದಲ್ಲಿ ವಿವಾದಾತ್ಮಕ ಹೇಳಿಕೆ ಸೇರ್ಪಡೆ ಮಾಡಬಹುದು. ಈವರೆಗೆ ಡೀಪ್‌ಫೇಕ್ ತಂತ್ರಜ್ಞಾನ ಹೆಚ್ಚು ಬಳಕೆಯಾಗಿರುವುದು ಕಾಮಪ್ರಚೋದಕ ಚಿತ್ರಗಳಲ್ಲಿ(ಪೋರ್ನೋಗ್ರಫಿ). ಡೀಪ್‌ಟ್ರೇಸ್ ಎಂಬ ಎಐ ತಂತ್ರಜ್ಞಾನ ಸಂಸ್ಥೆ ಪ್ರಕಾರ, ಅಂತರ್ಜಾಲದಲ್ಲಿರುವ ಡಿಎಫ್‌ಗಳಲ್ಲಿ ಶೇ.96ರಷ್ಟು ಪೋರ್ನ್ ವೀಡಿಯೊ. ಪೋರ್ನ್ ತಾರೆಯರ ಮುಖಕ್ಕೆ ಜನಪ್ರಿಯ ನಟಿಯರ ಮುಖ ಅಂಟಿಸಲಾಗಿರುತ್ತದೆ. ಇಂಥ ಪೋರ್ನ್ ವೆಬ್‌ಸೈಟ್‌ಗಳನ್ನು 135 ದಶಲಕ್ಷ ಮಂದಿ ನೋಡಿದ್ದಾರೆ. ಈ ವೆಬ್‌ಸೈಟ್‌ಗಳು ಮಹಿಳೆಯರನ್ನು ಗುರಿಯಾಗಿರಿಸಿಕೊಂಡಿರುತ್ತವೆ. ಅವರನ್ನು ಕಾಮದ ಗೊಂಬೆಗಳಂತೆ ಚಿತ್ರಿಸಿ, ಮಾನಸಿಕ ಕ್ಷೋಭೆಗೆ ಕಾರಣವಾಗುತ್ತವೆ. ಇದರ ಜಾಲಕ್ಕೆ ಸಿಲುಕುವವರು ಆರ್ಥಿಕ ನಷ್ಟವಲ್ಲದೆ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ.

ತಡೆಯಬಹುದೇ?
ದೇಶದ ಕಾನೂನುಗಳು ತಂತ್ರಜ್ಞಾನದ ಬೆಳವಣಿಗೆಗೆ ಅನುಗುಣವಾಗಿ ಬೆಳೆದಿಲ್ಲ. ಅಂತರ್ಜಾಲ, ಎಐ ಇತ್ಯಾದಿಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಅಸ್ಪಷ್ಟತೆಯಿದೆ, ಉತ್ತರದಾಯಿತ್ವದ ಕೊರತೆಯಲ್ಲದೆ, ಸೂಕ್ತ ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆ ಇಲ್ಲ. ಭಾರತೀಯ ಅಪರಾಧ ಸಂಹಿತೆಯ ವಿಭಾಗ 300 ಮಾನಹಾನಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿಭಾಗ 67 ಮತ್ತು 67ಎ ಮುಚ್ಚುಮರೆಯಿಲ್ಲದ ಲೈಂಗಿಕ ಪ್ರದರ್ಶನಕ್ಕೆ ಶಿಕ್ಷೆ ವಿಧಿಸುತ್ತವೆ. 1952ರ ಜನಪ್ರತಿನಿಧಿಗಳ ಕಾಯ್ದೆಯು ಚುನಾವಣೆ ವೇಳೆ ವ್ಯಕ್ತಿ ಇಲ್ಲವೇ ರಾಜಕೀಯ ಪಕ್ಷಗಳ ಬಗ್ಗೆ ಸುಳ್ಳು ಇಲ್ಲವೇ ದಾರಿ ತಪ್ಪಿಸುವ ಮಾಹಿತಿಯ ಸೃಷ್ಟಿ ಅಥವಾ ಹರಡುವಿಕೆಯನ್ನು ನಿರ್ಬಂಧಿಸುತ್ತದೆ. ಟಿವಿ, ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಳ್ಳುವ ಜಾಹೀರಾತುಗಳು ನ್ಯಾಯಬದ್ಧ ಎಂಬುದನ್ನು ಚುನಾವಣೆ ಆಯೋಗ ಖಾತ್ರಿಪಡಿಸಿಕೊಂಡು ಒಪ್ಪಿಗೆ ನೀಡಿದ ನಂತರವಷ್ಟೇ ಪ್ರಕಟಿಸಬೇಕಾಗುತ್ತದೆ.

ಕೆಲವೊಮ್ಮೆ ಚುನಾವಣೆಗಳ ಫಲಿತಾಂಶ ಕೂಡ ಪ್ರಭಾವಕ್ಕೊಳಗಾಗ ಬಹುದು. 2020ರ ಅಮೆರಿಕದ ಅಧ್ಯಕ್ಷರ ಚುನಾವಣಾ ಸಂದರ್ಭದಲ್ಲಿ ವಾತಾವರಣವನ್ನು ಹದಗೆಡಿಸುತ್ತವೆ ಎಂದು ಡಿಎಫ್ ವೀಡಿಯೊಗಳನ್ನು ಫೇಸ್‌ಬುಕ್ ನಿಷೇಧಿಸಿತ್ತು. ಇತ್ತೀಚೆಗೆ ತೈವಾನ್ ಸರಕಾರ ಡೀಪ್‌ಫೇಕ್ ವೀಡಿಯೊ ಇಲ್ಲವೇ ಬಿಂಬಗಳ ಹಂಚಿಕೆಯನ್ನು ಶಿಕ್ಷಾರ್ಹಗೊಳಿಸಿ, ಚುನಾವಣೆ ಕಾನೂನಿಗೆ ತಿದ್ದುಪಡಿ ತಂದಿತು. ಚೀನಾ ಸುಳ್ಳು ಮಾಹಿತಿ ಹರಡುವ ಮೂಲಕ ಸಾರ್ವಜನಿಕರ ಅಭಿಪ್ರಾಯವನ್ನು ಬದಲಿಸಲು ಹಾಗೂ ಚುನಾವಣೆ ಫಲಿತಾಂಶವನ್ನು ತಿದ್ದಲು ಕೈಚಳಕ ಮಾಡುತ್ತಿದೆ ಎಂಬುದು ತೈವಾನ್ ನಿಲುವಿಗೆ ಕಾರಣ. ಚೀನಾ ಜನವರಿ 10, 2023ರಲ್ಲಿ ಜಾರಿಗೊಳಿಸಿದ ನಿಯಮಗಳ ಅನ್ವಯ, ಮುಖಚಹರೆ ಮತ್ತು ಶ್ರಾವ್ಯ ಮಾಹಿತಿಯ ತಿದ್ದುವಿಕೆ ಶಿಕ್ಷಾರ್ಹ ಅಪರಾಧ. 2020ರಲ್ಲಿ ಬರಾಕ್ ಒಬಾಮಾ, ಅಧ್ಯಕ್ಷ ಟ್ರಂಪ್ ಅವರನ್ನು ‘ನಾಮರ್ದ’ ಎಂದು ಮೂದಲಿಸಿದ್ದ ವೀಡಿಯೊ, ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್ ‘‘ಕೋಟ್ಯಂತರ ಜನರ ವೈಯಕ್ತಿಕ ಮಾಹಿತಿ ನನ್ನ ಅಂಗೈಯಲ್ಲಿದೆ’’ ಎಂದಿದ್ದ ವೀಡಿಯೊಗಳು ನಕಲಿಯಾಗಿದ್ದವು. ಆ್ಯಮ್ನೆಸ್ಟಿ ಇತ್ತೀಚೆಗೆ ಹಂಚಿಕೊಂಡ ಕ್ಯಾಮರೂನ್ ಸೈನಿಕರು ನಡೆಸಿದರು ಎನ್ನಲಾದ ನಾಗರಿಕರ ಹತ್ಯೆ ವೀಡಿಯೊ ಕೂಡ ನಕಲಿ ಆಗಿತ್ತು. ಬರಾಕ್ ಒಬಾಮಾ ವೀಡಿಯೊದಲ್ಲಿದ್ದ ದೃಶ್ಯ ಮತ್ತು ಧ್ವನಿ ಅಸಲಿಯಿತ್ತು. ಆದರೆ, ಶೇ.100ರಷ್ಟು ಹೋಲುವ ನಕಲಿ ಧ್ವನಿಯನ್ನು ಅಳವಡಿಸಲಾಗಿತ್ತು ಮತ್ತು ತುಟಿಗಳ ಚಲನೆ ಕೂಡ ಕರಾರುವಾಕ್ ಆಗಿತ್ತು.

ಸುಳ್ಳು ಸುದ್ದಿಯ ಪರಿಶೀಲನೆ
ಸುದ್ದಿಯೊಂದು ನಕಲಿಯೇ, ನಿಜವೇ ಎಂಬುದನ್ನು ರಿವರ್ಸ್ ಸರ್ಚಿಂಗ್ ಬಳಸಿ ಪರಿಶೀಲಿಸಬಹುದು. ಫ್ಯಾಕ್ಟ್‌ಚೆಕರ್.ಇನ್ ಸುದ್ದಿಗಳ ನಿಜಾಂಶ ಪತ್ತೆ ಮಾಡುವ ದೇಶದ ಮೊದಲ ಉಪಕ್ರಮ. ಪಿಐಬಿಫ್ಯಾಕ್ಟ್ ಚೆಕ್, ಫ್ಯಾಕ್ಟ್ಲಿ.ಇನ್, ಥಿಪ್.ಮೀಡಿಯಾ, ನ್ಯೂಸ್‌ಚೆಕ್ಕರ್.ಇನ್, ಬೆಂಗಳೂರು ಮೂಲದ ಆಲ್ಟ್‌ನ್ಯೂಸ್.ಇನ್, ಡಿಫ್ರಾಕ್.ಆರ್ಗ್, ದ ಲಾಜಿಕಲ್ ಇಂಡಿಯನ್, ಹೋಕ್ಸ್ ಸ್ಲೇಯರ್ ಇತ್ಯಾದಿ ಹಲವು ನಿಜಾಂಶ ಪತ್ತೆ ಮಾಡುವ ಜಾಲತಾಣಗಳಿವೆ. ಆದರೆ, ಸತ್ಯ ಚಪ್ಪಲಿ ಧರಿಸುವುದರೊಳಗೆ ಸುಳ್ಳು ಭೂಮಂಡಲವನ್ನು ಸುತ್ತಿ ಬಂದಿರುತ್ತದೆ ಎಂಬ ಮಾತಿದೆ. ಡಿಎಫ್ ನಕಲಿ ಸುದ್ದಿಗಿಂತ ಭಿನ್ನವಾದುದು; ಅದರಲ್ಲಿ ಸುಳ್ಳು, ಸತ್ಯದ ತಲೆ ಮೇಲೆ ಹೊಡೆದಂತೆ ಇರುತ್ತದೆ. ಡಿಎಫ್‌ಗಳನ್ನು ಪತ್ತೆ ಹಚ್ಚಲು ಸರಳವಾದ, ಎಲ್ಲರಿಗೂ ಕೈಗೆಟಕುವ ತಂತ್ರಜ್ಞಾನದ ಅಗತ್ಯವಿದೆ.

ಮಾಧ್ಯಮ ಶಿಕ್ಷಣದ ಮೂಲಕ ಸಾರ್ವಜನಿಕರಲ್ಲಿ ಅರಿವು ಮಾಡಿಸಬೇಕು. ಮಾಧ್ಯಮ ಸಾಕ್ಷರತೆ ಅತ್ಯಂತ ಪ್ರಬಲ ಅಸ್ತ್ರ. ತಂತ್ರಜ್ಞಾನ ಉದ್ಯಮ, ನಾಗರಿಕ ಸಮಾಜ ಹಾಗೂ ಕಾರ್ಯನೀತಿ ರೂಪಿಸುವವರು ಒಟ್ಟಾಗಿ ಡಿಎಫ್‌ಗಳ ಸೃಷ್ಟಿ ಮತ್ತು ವಿತರಣೆ ತಡೆಗೆ ಶಾಸನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಬಹುತೇಕ ಸಾಮಾಜಿಕ ಮಾಧ್ಯಮ ವೇದಿಕೆಗಳು ಡಿಎಫ್‌ಗಳ ಬಗ್ಗೆ ಕಾರ್ಯನೀತಿ ಇಲ್ಲವೇ ಅವುಗಳ ಬಳಕೆ ಬಗ್ಗೆ ನಿಯಮಗಳನ್ನು ರೂಪಿಸಿಕೊಂಡಿವೆ. ಅಧಿಕೃತ ಸುದ್ದಿಮೂಲಗಳನ್ನು ಮತ್ತು ಅಧಿಕೃತ ಮಾಹಿತಿಯನ್ನು ಹೆಚ್ಚು ಹೆಚ್ಚು ಹಂಚಬೇಕಿದೆ. ಅಂತರ್ಜಾಲವನ್ನು ವಿವೇಚನೆಯಿಂದ ಬಳಸಬೇಕು. ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಬಂದಿದ್ದನ್ನೆಲ್ಲ ಮುಂದೆ ತಳ್ಳುತ್ತ ಕೂರಬಾರದು.

ಡಿಎಫ್ ತಂತ್ರಜ್ಞಾನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತೊಂದು ಗಂಡಾಂತರ ತಂದಿದೆ. ಅದನ್ನು ಬಳಸಿಕೊಂಡು ಮತದಾರರ ಮನವೊಲಿಕೆ ಎಗ್ಗಿಲ್ಲದೆ ನಡೆಯಲಿದೆ. ಅಸಲಿ-ನಕಲಿ ನಡುವಿನ ವ್ಯತ್ಯಾಸ ಕಂಡುಹಿಡಿಯುವುದು ಬಹು ದೊಡ್ಡ ಸವಾಲಾಗಲಿದೆ. ಈ ತಂತ್ರಜ್ಞಾನ ಉತ್ತಮಗೊಂಡಂತೆ, ದುರುಪಯೋಗದ ಸಾಧ್ಯತೆಯೂ ಹೆಚ್ಚುತ್ತದೆ. 2024ರ ಲೋಕಸಭೆ ಚುನಾವಣೆಯಲ್ಲಿ ಡಿಎಫ್ ಸುನಾಮಿಯನ್ನೇ ನಿರೀಕ್ಷಿಸಬಹುದು. ಒಕ್ಕೂಟ ಸರಕಾರ ನಿಯಂತ್ರಣಕ್ಕೆ ಯಾವುದೇ ಪ್ರಯತ್ನ ಮಾಡಲಾರದು ಅಥವಾ ಮಾಡಿದರೂ ಅದು ಅರೆಮನಸ್ಸಿನ ಕ್ರಿಯೆ ಆಗಿರಲಿದೆ. ಏಕೆಂದರೆ, ರಾಜಕೀಯ ಪಕ್ಷಗಳ ಮಾಹಿತಿ ತಂತ್ರಜ್ಞಾನ(ಐಟಿ) ಕೋಶಗಳೇ ಸುಳ್ಳು ಸುದ್ದಿಗಳ ಉಗಮಸ್ಥಾನವಾಗಿರುವ ದೇಶ ನಮ್ಮದು. ಬಹುತೇಕ ಮುದ್ರಣ/ದೃಶ್ಯ ಮಾಧ್ಯಮಗಳು ಪ್ರತಿಪಕ್ಷಗಳಂತೆ ಕಾರ್ಯನಿರ್ವಹಿಸುವ ಬದಲು ಆಡಳಿತ ಪಕ್ಷದ ಕೈಗೊಂಬೆಯಾಗಿವೆ. ಖರೀದಿಸಿದ ಟ್ವೀಟ್‌ಗಳು/ವಾಟ್ಸ್ ಆ್ಯಪ್ ಸಂದೇಶಗಳು, ನಕಲಿ ವೀಡಿಯೊ/ಫೋಟೊ, ಮಾರ್ಕೆಟಿಂಗ್ ಅಭಿಯಾನ/ಪ್ರಚಾರಾಂದೋಲನ ಇವೆಲ್ಲವೂ ಬಳಕೆಯಾಗುತ್ತವೆ. ಮುಖ್ಯವಾಹಿನಿ ಮಾಧ್ಯಮವನ್ನು ಖರೀದಿಸಿರುವುದಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳುಗಳನ್ನು ನಿರಂತರವಾಗಿ ಸುರಿಯಲಾಗುತ್ತಿದೆ. ಮೊಬೈಲ್‌ಗೆ ಬಂದಿದ್ದೆಲ್ಲವನ್ನೂ ನಂಬುವ/ಮುಂದೆ ತಳ್ಳುವ ಅಗ್ಗದ ಡೇಟಾ ಯುಗದ ಡಿಜಿಟಲ್ ಅಲೆಮಾರಿಗಳಿಗೆ ಅರಿವು ಮೂಡಿಸುವ ಕಠಿಣ ಸವಾಲು ಇದೆ. ಪ್ರಜಾಪ್ರಭುತ್ವದಲ್ಲಿ ಪ್ರಚಂಡ ಬಹುಮತವಿರುವ ಸರಕಾರ, ನಿರಂಕುಶತೆ ಕಡೆಗೆ ಸಾಗಬಹುದು. ಅದು ಎದುರಾಗುವ ಪ್ರತಿರೋಧವನ್ನು ಬಲ ಮತ್ತು ಸುಳ್ಳುಗಳ ಮೂಲಕ ಹತ್ತಿಕ್ಕುತ್ತದೆ. ‘ನಿರಂಕುಶ ಅಧಿಕಾರ ನಿರಂಕುಶವಾಗಿಯೇ ಭ್ರಷ್ಟಗೊಳಿಸುತ್ತದೆ’ ಎಂಬುದು ಬರಿದೇ ಮಾತಲ್ಲ; ವಾಸ್ತವ. ತಂತ್ರಜ್ಞಾನ ಅಧಿಕಾರಕ್ಕೆ ಹೆಗೆಲೆಣೆಯಾಗಿ ನಿಂತರೆ ವಿಪತ್ತು ಕಟ್ಟಿಟ್ಟದ್ದು. ಹಿಟ್ಲರನ ಆತ್ಮರತಿ, ನಾಗರಿಕ ಸಮಾಜದ ಮೌನ, ಯೆಹೂದಿಗಳ ಹತ್ಯಾಕಾಂಡ ಮತ್ತು ಪ್ರತಿರೋಧಿಸಿದವರ ಹತ್ತಿಕ್ಕುವಿಕೆಗಳು ನಮಗೆ ಪಾಠ ಕಲಿಸಬೇಕಿದೆ.