ಚುನಾವಣಾ ಕಣದಿಂದ ಹಿಂದೆ ಸರಿದ ಸೈಯದ್ ಝಾಕೀರ್ ಜೆಡಿಎಸ್ ನಿಂದ ಉಚ್ಚಾಟನೆ

Update: 2023-05-12 04:25 GMT

ಸಾಗರ, ಮೇ 11: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಸೈಯದ್ ಝಾಕೀರ್ ಅವರನ್ನು ಶಿವಮೊಗ್ಗ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಅವರ ಸೂಚನೆ ಮೇರೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕನ್ನಪ್ಪಬೆಳಲಮಕ್ಕಿ ತಿಳಿಸಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದಿಂದ ಸೈಯದ್ ಝಾಕೀರ್ ಅವರಿಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಬಿ ಫಾರಂ ನೀಡಲಾಗಿತ್ತು. ಸುಮಾರು ಒಂದು ವಾರಗಳ ಕಾಲ ಕ್ಷೇತ್ರದಾದ್ಯಂತ ಸೈಯದ್ ಝಾಕೀರ್ ಪರವಾಗಿ ಬಿರುಸಿನ ಪ್ರಚಾರ ಕೂಡ ನಡೆಸಲಾಗಿತ್ತು.

ಮೇ 8ರಂದು ಅನಾರೋಗ್ಯ ಮತ್ತು ವೈಯಕ್ತಿಕ ಕಾರಣ ನೀಡಿ ಸೈಯದ್ ಝಾಕೀರ್ ಚುನಾಣಾ ಕಣದಿಂದ ಹಿಂದೆ ಸರಿದು ನಿವೃತ್ತಿ ಘೋಷಣೆ ಮಾಡಿದ್ದಾರೆ. ಸ್ವಯಂ ನಿವೃತ್ತಿ ಬಳಿಕ ವೈಯಕ್ತಿಕವಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅನಾರೋಗ್ಯದ ನೆಪಹೇಳಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಪರವಾಗಿ ಪ್ರಚಾರ ಮಾಡಿರುವುದು ಜೆಡಿಎಸ್ ಗೆ ಬಗೆದ ದ್ರೋಹವಾಗಿ ಎಂದು ತಿಳಿಸಿದ್ದಾರೆ.

ಸೈಯದ್ ಝಾಕೀರ್ ಮಾಡಿರುವ ಪಕ್ಷದ್ರೋಹ ಕುರಿತು ತಾಲೂಕು ಘಟಕ ಪಕ್ಷದ ವರಿಷ್ಠರು ಮತ್ತು ಜಿಲ್ಲಾಧ್ಯಕ್ಷರಿಗೆ ಪತ್ರ ಮುಖೇನ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಸೈಯದ್ ಝಾಕೀರ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿರುವ ಕನ್ನಪ್ಪಬೆಳಲಮಕ್ಕಿ, ಕಾಂಗ್ರೆಸ್ ಸೇರ್ಪಡೆಗೊಂಡಿರುವ ಪಕ್ಷದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಜನಿ ದೇವರಾಜ್, ಮಹಿಳಾ ಘಟಕದ ನಗರಾಧ್ಯಕ್ಷೆ ಶಬಾನ ಬಾನು, ಕಾರ್ಗಲ್ ಭಾಗದ ಮಹಿಳಾ ಪ್ರಮುಖರಾದ ರುಕ್ಸಾನ ಅವರನ್ನೂ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News