×
Ad

ಮತದಾನ ಪೂರ್ಣ ಬೆನ್ನಲ್ಲೇ ವಿದ್ಯುತ್ ದರ ಏರಿಕೆ ಬರೆ; ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ

Update: 2023-05-12 18:19 IST

ಬೆಂಗಳೂರು, ಮೇ 12: ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್ ನೀಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‍ಸಿ), ಪ್ರತಿ ಯೂನಿಟ್‍ಗೆ 70 ಪೈಸೆ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ನೂತನ ದರ ಎಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ವಿದ್ಯುತ್ ವಿತರಣಾ ಕಂಪೆನಿಗಳು ಪ್ರತಿ ಯೂನಿಟ್‍ಗೆ 1.46 ರೂ. ದರ ಏರಿಕೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದವು. ಆದರೆ, ಕೆಇಆರ್‍ಸಿ ಪ್ರತಿ ಯೂನಿಟ್‍ಗೆ 70 ಪೈಸೆ ಹೆಚ್ಚಳ ಮಾಡಲು ಅನುಮೋದನೆ ನೀಡಿದೆ. ಹೊಸ ದರ ಜಾರಿ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಪ್ರತಿ ತಿಂಗಳ ವಿದ್ಯುತ್ ಬಿಲ್‍ನಲ್ಲಿ ಶೇ.8.31ರಷ್ಟು ಹೆಚ್ಚಳವಾಗಲಿದೆ.

ಕೈಗಾರಿಕೆಗಳಿಗೆ ಇಳಿಕೆ: ಕೈಗಾರಿಕೆಗಳು ಹೆಚ್ಚು ವಿದ್ಯುತ್ ಬಳಕೆಯನ್ನು ಉತ್ತೇಜಿಸಲು ರಿಯಾಯಿತಿಯಲ್ಲಿ ಪ್ರತಿ ಯೂನಿಟ್‍ಗೆ ಇದ್ದ ವಿದ್ಯುತ್ ಬಳಕೆ ಶುಲ್ಕವನ್ನು 6 ರೂ.ನಿಂದ 5ರೂ.ಗೆ ಇಳಿಸಲು ಅನುಮೋದಿಸಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸಲು ಇವಿ ಚಾರ್ಜಿಂಗ್ ಸ್ಟೇಷನ್‍ಗಳಿಗೆ ಪ್ರತಿ ಯೂನಿಟ್‍ಗೆ 5 ರೂ. ಇದ್ದ ವಿದ್ಯುತ್ ಬಳಕೆ ಶುಲ್ಕವನ್ನು 4.50 ರೂ.ಗಳಿಗೆ ಇಳಿಸಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿಯೂನಿಟ್‍ಗೆ 50 ಪೈಸೆ ರಿಯಾಯಿತಿಯನ್ನು ಇನ್ನೂ 1 ವರ್ಷ ಮುಂದುವರಿಸಿದೆ.

ಕಾಂಗ್ರೆಸ್ ಪಕ್ಷವು 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಈ ಮಧ್ಯೆಯೇ ಕೆಇಆರ್‍ಸಿ ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ‘ವಿದ್ಯುತ್ ಬಿಲ್ ಪಾವತಿ ಮಾಡಬೇಕೇ?, ಬೇಡವೇ?’ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

Similar News