×
Ad

"ಫಲಿತಾಂಶ ಏನೇ ಆದ್ರೂ..." ಅಂತ ಟ್ವೀಟ್ ಮಾಡಿದ ಚಕ್ರವರ್ತಿ ಸೂಲಿಬೆಲೆ

ಬಿಜೆಪಿ ಸೋಲೋ ಸ್ಪಷ್ಟ ಮುನ್ಸೂಚನೆ ಎಂದ ಜನರು

Update: 2023-05-12 23:22 IST

ಬೆಂಗಳೂರು: ನಾಳೆಯ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.  2024 ರ ಲೋಕಸಭಾ ಚುನಾವಣೆಗೂ ಇದು ದಿಕ್ಸೂಚಿ ಆಗಿರುವ ಸಾಧ್ಯತೆ ಇರುವುದರಿಂದ ರಾಷ್ಟ್ರ ಮಟ್ಟದಲ್ಲೇ ಫಲಿತಾಂಶದ ಬಗ್ಗೆ ಕುತೂಹಲ ಹುಟ್ಟಿದೆ.

ಈ ನಡುವೆ, ನಮೋ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ ಮಾಡಿರುವ ಟ್ವೀಟ್‌ ವ್ಯಾಪಕ ವ್ಯಂಗ್ಯ ಹಾಗೂ ಲೇವಡಿಗೆ ಗುರಿಯಾಗಿದೆ. 

“ನಾಳೆಯ ಫಲಿತಾಂಶ ಏನೇ ಆಗಲಿ ಶಾಂತಿಯುತ ಮತ್ತು ಸಮಧಾನಕರ ಚುನಾವಣೆಗಾಗಿ ಎಲ್ಲ ಪಕ್ಷಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಕರ್ನಾಟಕದ ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ” ಎಂದು ಸೂಲಿಬೆಲೆ ಟ್ವೀಟ್‌ ಮಾಡಿದ್ದಾರೆ.

ಸರಣಿ ಟ್ವೀಟ್‌ ಮಾಡಿ ಕಾಂಗ್ರೆಸ್‌ ಪ್ರಚಾರ ತಂತ್ರಗಳನ್ನು ಹೊಗಳಿದ ಸೂಲಿಬೆಲೆ, ʼ40% ಸರ್ಕಾರʼ ದಿಂದ ʼಸಿಲಿಂಡರ್ ಪೂಜೆʼವರೆಗೆ ಕಾಂಗ್ರೆಸ್ ಸೃಜನಶೀಲವಾಗಿ ಕೆಲಸ ಮಾಡಿದೆ, ಮತ್ತು 2 ಹೆಜ್ಜೆ ಮುಂದಿದೆ. ಬಜರಂಗದಳ ವಿಚಾರದಲ್ಲಿ ಅವರು ತಪ್ಪು ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಫಲಿತಾಂಶಗಳು ಹೇಳುತ್ತವೆ. ಭಾರತ್ ಜೋಡೋದಿಂದ  ಚುನಾವಣಾ ದಿನದವರೆಗೆ ಪಕ್ಷದ ಕಾರ್ಯಕರ್ತರನ್ನು ಸುಮ್ಮನಿರಲು ಬಿಡಲಿಲ್ಲ. ಅವರ ಒಗ್ಗಟ್ಟಿನ ಪ್ರಯತ್ನದಿಂದ ಅವರನ್ನು ಗೆದ್ದರು. ಅದಕ್ಕೆ ಮೆಚ್ಚುಗೆ ಇದೆ ಎಂದು ಹೇಳಿದ್ದಾರೆ. 

“ಬಿಜೆಪಿ ಯಾವಾಗಲೂ ರಕ್ಷಣಾತ್ಮಕ ಸ್ಥಿತಿಯಲ್ಲಿತ್ತು, ಅಥವಾ ಆಡಳಿತ ಪಕ್ಷಗಳ ದೌರ್ಬಲ್ಯ ಇರಬಹುದು, ಆದರೆ ಮೋದಿ ಅದನ್ನೆಲ್ಲ ಬದಲಾಯಿಸಿದರು. ಜನರು 40% ವಿವಾದವನ್ನು ಮರೆತಿದ್ದಾರೆ.” 

“ಬಿಜೆಪಿಯ ಪ್ರಮುಖರು ಕೆಳಹಂತದಿಂದ, ದಣಿವಿಲ್ಲದೆ ಕೆಲಸ ಮಾಡಿದರು, ಕಾರ್ಯಕರ್ತರು ನಿಜವಾದ ರತ್ನಗಳು, ಒಂದು ವೇಳೆ ಪಕ್ಷವು ಅಧಿಕಾರವನ್ನು ಉಳಿಸಿಕೊಂಡರೆ ಅದರ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲುತ್ತದೆ. ಅಣ್ಣಾಮಲೈ ಹಾಗೂ ಬಿಎಲ್‌ ಸಂತೋಷ್‌ ಅವರ ಕೆಲಸ ಸಾಟಿಯಿಲ್ಲದ್ದು, ನಾವು ಈಗಾಗಲೇ 2024 ರ ಚುನಾವಣೆಗಾಗಿ ತಯಾರಾಗುತ್ತಿದ್ದೇವೆ. ಮತ್ತೆ ಮತ್ತೆ ಮೋದಿ!” ಎಂದು ಸರಣಿ ಟ್ವೀಟ್‌ ಗಳನ್ನು ಮಾಡಿದ್ದಾರೆ. 

ಈ ಟ್ವೀಟ್‌ಗಳಿಗೆ ನೆಟ್ಟಿಗರು ಕಾಲೆಳೆದು ಟ್ವೀಟ್‌ ಮಾಡಿದ್ದು, ಬಿಜೆಪಿ ಸೋಲಿನ ಮುನ್ಸೂಚನೆ ಈಗಾಗಲೇ ಲಭಿಸಿದಂತಾಗಿದೆ ಎಂದಿದ್ದಾರೆ.

ಅಪೂರ್ವ ಎಂಬ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಶಾಂತಿಯುತ ಚುನಾವಣೆ ಆಗಿರುವುದಕ್ಕೆ ಇವರು ಯಾಕೆ ಅಭಿನಂದಿಸಬೇಕು? ಇವರೇನು ಕಮಿಷನರಾ? ರಾಜ್ಯಪಾಲರಾ? ಮುಖ್ಯಮಂತ್ರಿಯೋ ಅಥವಾ ಪ್ರಧಾನಮಂತ್ರಿಯೋ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ. 

“ಹಿಂದಿ ಹೇರಿಕೆ, ಉತ್ತರ ಭಾರತದ ವಲಸಿಗರನ್ನು ಬೆಂಬಲಿಸುವುದು, ಬ್ಯಾಂಕಿಂಗ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ ನಷ್ಟ, ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ನಾನು ಸೇರಿದಂತೆ ಹಲವು ಬಿಜೆಪಿ ಮತದಾರರು ಈ ಬಾರಿ ಜೆಡಿಎಸ್/ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ.” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಇನ್ನು ಕೆಲವರು ʼಕನ್ನಡದ ಬಾವುಟʼದ ಬಗ್ಗೆ ನೀವು ಏನಕ್ಕೆ ಮಾತಾಡುತ್ತಿದ್ದೀರಿ, ನಿಮಗೆ ಕನ್ನಡ ಬಾವುಟ ಆಗಲ್ಲ ತಾನೆ ಎಂದು ಪ್ರಶ್ನಿಸಿದ್ದಾರೆ. 

Similar News