×
Ad

ಕರುನಾಡ ಜನಾದೇಶ 2023 | ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಇಂದು ನಿರ್ಧಾರ

Update: 2023-05-13 07:16 IST

ಬೆಂಗಳೂರು, ಮೇ 13: ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳಿಗೆ  ಮೇ 10ರಂದು ನಡೆದಿದ್ದ ಚುನಾವಣೆಯ ಮತಗಳ ಎಣಿಕೆಯು ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಘಟಾನುಘಟಿ ಅಭ್ಯರ್ಥಿಗಳ ಮನಸ್ಸಿನಲ್ಲಿ ತಳಮಳ ಪ್ರಾರಂಭವಾಗಿದ್ದು, ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಸರಣಿ ಸಭೆಗಳ ಮೂಲಕ ಫಲಿತಾಂಶವನ್ನು ಆಧರಿಸಿ ಮುಂದೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತು ಸಮಾಲೋಚನೆಯಲ್ಲಿ ತೊಡಗಿದ್ದಾರೆ.

ರಾಜಧಾನಿ ಬೆಂಗಳೂರಿನ ನಾಲ್ಕು ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 34 ಜಿಲ್ಲೆಗಳ 36 ಕೇಂದ್ರಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 306 ಕೊಠಡಿಗಳು, 4,256 ಟೇಬಲ್‍ಗಳನ್ನು ಮತಗಳ ಎಣಿಕೆಗಾಗಿ ಸಿದ್ಧಗೊಳಿಸಲಾಗಿದೆ. 34 ಜಿಲ್ಲೆಗಳಲ್ಲಿ 224 ಚುನಾವಣಾಧಿಕಾರಿಗಳು, 317 ಸಹಾಯಕ ಚುನವಣಾಧಿಕಾರಿಗಳು, 4,256 ಎಣಿಕೆ ಮೇಲ್ವಿಚಾರಕರು, 4,256 ಸಹಾಯಕ ಎಣಿಕೆದಾರರು, 4,256 ಸೂಕ್ಷ್ಮ ವೀಕ್ಷಕರನ್ನು ಮತಗಳ ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಇದನ್ನೂ ಓದಿ: ವಿಧಾನಸಭಾ ಚುನಾವಣೆ 2023 | ರಾಜ್ಯದ ಗಮನ ಸೆಳೆದ ಪ್ರಮುಖ ಕ್ಷೇತ್ರಗಳಿವು

ಎಲೆಕ್ಟ್ರಾನಿಕ್ ಮತ ಯಂತ್ರ(ಇವಿಎಂ) ಹಾಗೂ ಅಂಚೆ ಮತಗಳ ಎಣಿಕೆ ಕಾರ್ಯವು ಹಲವು ಸುತ್ತುಗಳಲ್ಲಿ ನಡೆಯಲಿದೆ. ಮತಗಳ ಎಣಿಕೆ ಕಾರ್ಯವನ್ನು ಸಾರ್ವಜನಿಕರು ರಾಜ್ಯ ಮುಖ್ಯ ಚುನಾವಣಾಧಿಕಾರಿಯ ವೆಬ್‍ಸೈಟ್ https://ceokarnataka.gov.in ಹಾಗೂ ಮೊಬೈಲ್‍ನಲ್ಲಿ ವೋಟರ್ ಹೆಲ್ಪ್‍ಲೈನ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ನೋಡಬಹುದಾಗಿದೆ. ಅಲ್ಲದೆ, https://results.eci.gov.in ವೆಬ್‍ಸೈಟ್‍ನಲ್ಲಿಯೂ ಚುನಾವಣಾ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಸಂಚಾರ ನಿರ್ಬಂಧ: ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮತ ಎಣಿಕೆ ಕೇಂದ್ರಗಳ ಸುತ್ತಲೂ ಬೆಳಗ್ಗೆ 6 ರಿಂದ ಮತ ಎಣಿಕೆ ಕಾರ್ಯ ಮುಗಿಯುವವರೆಗೂ ಸಂಚಾರ ನಿರ್ಬಂಧ ಮಾಡಲಾಗಿದೆ. ವಿಠಲ್ ಮಲ್ಯ ರಸ್ತೆ ಬಳಿ ಇರುವ ಸೇಂಟ್ ಜೋಸೆಫ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು ಸುತ್ತಮುತ್ತ ಸಂಚಾರ ನಿಷೇಧಿಸಲಾಗಿದೆ. 

ಜಯನಗರದ ಎಸ್.ಎಸ್.ಎಂ.ಆರ್.ವಿ.ಕಾಲೇಜು, ಬಸವನಗುಡಿಯಲ್ಲಿರುವ ಬಿ.ಎಂ.ಎಸ್. ಕಾಲೇಜಿನಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಇದಲ್ಲದೆ, ರಾಜ್ಯದ ಇತರ ಜಿಲ್ಲೆಗಳಲ್ಲಿನ ಮತ ಎಣಿಕೆ ಕೇಂದ್ರಗಳ ಬಳಿಯೂ ಸಂಚಾರ ನಿಷೇಧ ಮಾಡಲಾಗಿದೆ. ಇದರಿಂದಾಗಿ, ವಾಹನ ಸವಾರರಿಗೆ ನಾಳೆ ಮತ ಎಣಿಕೆ ಕೇಂದ್ರಗಳ ಬಳಿ ಹಾದು ಹೋಗುವ ಮಾರ್ಗಗಳ ಬದಲಾಗಿ ಬೇರೆ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಮದ್ಯ ಮಾರಾಟ ನಿಷೇಧ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯ ವರೆಗೆ ಮದ್ಯ ಮಾರಾಟ ನಿಷೇಧಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. 

ಬಿಗಿ ಪೊಲೀಸ್ ಬಂದೋಬಸ್ತ್: ಮತ ಯಂತ್ರಗಳನ್ನು ಇರಿಸಲಾಗಿರುವ ಸ್ಟ್ರಾಂಗ್ ರೂಮ್‍ಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಮತ ಎಣಿಕೆ ಕೇಂದ್ರಗಳ ಬಳಿ ಭದ್ರತೆಗಾಗಿ ಪೊಲೀಸರು, ಅರೆ ಸೇನಾ ಪಡೆ, ಕೇಂದ್ರ ಮೀಸಲು ಪಡೆ, ಕೆಎಸ್‍ಆರ್‍ಪಿ ತುಕಡಿಗಳನ್ನು ಅಗತ್ಯಕ್ಕೆ ತಕ್ಕಂತೆ ನಿಯೋಜನೆ ಮಾಡಲಾಗಿದೆ.

Similar News