ನನ್ನನ್ನು ಟಾರ್ಗೆಟ್ ಮಾಡಿದವರೇ ರಾಜ್ಯದಲ್ಲಿ ಬಿಜೆಪಿ‌ಯನ್ನು ಸೋಲಿಸಿದರು: ಜಗದೀಶ್ ಶೆಟ್ಟರ್

''ನನಗೆ ಸೋತಿದ್ದೇನೆಂಬ ದುಃಖ ಇಲ್ಲ...''

Update: 2023-05-13 14:18 GMT

ಬೆಂಗಳೂರು, ಮೇ 13: ‘ನನ್ನನ್ನು ಸೋಲಿಸಬೇಕೆಂದು ಹಠಕ್ಕೆ ಬಿದ್ದವರು ತಮ್ಮ ಹಠ ಸಾಧಿಸಿದ್ದಾರೆ. ನನ್ನನ್ನು ಸೋಲಿಸುವ ಭರದಲ್ಲಿದ್ದ ವ್ಯಕ್ತಿಗಳು ಬಿಜೆಪಿಯನ್ನು ಸೋಲಿಸಿದ್ದು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದವರ ವಿರುದ್ಧ ನಾನು ಗೆದ್ದಿದ್ದೇನೆ. ನನಗೆ ಸೋತಿರುವ ದುಃಖವಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಶನಿವಾರ ಫಲಿತಾಂಶದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಬರುತ್ತದೆ ಎಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ಪಕ್ಷಕ್ಕೆ ಬೆಂಬಲ ನೀಡಿದ ಕರ್ನಾಟಕ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಲಿಂಗಾಯತ ಸಮುದಾಯ ಕಡೆಗಣಿಸಿದ್ದರ ಪರಿಣಾಮ ಈಗ ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಎದ್ದು ಕಾಣಿಸುತ್ತಿದೆ. ಒಬ್ಬರಿಗೆ ಪೆಟ್ಟು ಕೊಡಲು ಹೋಗಿ ಇಡೀ ಬಿಜೆಪಿಗೆ ಪೆಟ್ಟು ಕೊಟ್ಟಿದ್ದಾರೆ’ ಎಂದು ಟೀಕಿಸಿದರು.

‘70 ವರ್ಷವಾದ ಮೇಲೆ ನಾನು ಚುನಾವಣಾ ರಾಜಕೀಯದಲ್ಲಿ ಇರುವುದಿಲ್ಲ. ಅಲ್ಲಿಯ ವರೆಗೆ ನಾನು ರಾಜಕೀಯದಲ್ಲಿ ಕ್ರಿಯಾಶೀಲವಾಗಿದ್ದು, ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತೇನೆ’ ಎಂದ ಅವರು, ‘ಬಿಜೆಪಿ ದಕ್ಷಿಣ ಭಾರತದಲ್ಲಿ ಹೇಗೆ ಅವಸಾನವಾಗುತ್ತಿದೆ ಎಂದು ಗೊತ್ತಾಗುತ್ತಿದೆ. ನಾನೇ ಬೆಳೆಸಿದ್ದ ಬಿಜೆಪಿ ಮೈಂಡ್‍ಸೆಟ್ ಬದಲಾಯಿಸಲು ಆಗಿಲ್ಲ. ಕ್ಷೇತ್ರದಲ್ಲಿ ನಮ್ಮ ಒಳಹೊಡೆತ ಕೆಲಸವಾಗಿಲ್ಲ, ಸೋಲಿನ ಕುರಿತು ಏನಾಯಿತೆಂದು ಬೂತ್‍ಮಟ್ಟದ ಪರಿಶೀಲನೆ ಮಾಡುತ್ತೇನೆ. ಕೆಲವೇ ವ್ಯಕ್ತಿಗಳ ಕುತಂತ್ರದಿಂದ ಇದೆಲ್ಲಾ ಆಗುತ್ತಿದ್ದು, ಮುಂದೆ ಲೋಕಸಭಾ ಚುನಾವಣೆ ಬರುತ್ತಿದೆ, ಇದರ ಪರಿಣಾಮ ದೇಶಾದ್ಯಂತ ಆಗುತ್ತದೆ ಎಂದು ಹೇಳಿದರು.

ಮೋದಿ ನಾಯಕತ್ವ ಮತ್ತು ಆಡಳಿತಾರೂಢ ಬಿಜೆಪಿ ಸರಕಾರವಿದ್ದಾಗಲೂ 65 ಸ್ಥಾನಕ್ಕೆ ಬಂದು ನಿಂತಿದ್ದಾರೆ. ನಾನು ಎಂದಿಗೂ ಸೇಡಿನ ರಾಜಕೀಯ ಮಾಡಿಲ್ಲ ಬಿಜೆಪಿಯ ಅಹಂಕಾರ, ಹಣದ ಮದಕ್ಕೆ ಉತ್ತರ ಕೊಟ್ಟಿದ್ದೇನೆ. ಲೋಕಸಭಾ ಚುನಾವಣೆಯ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಕುಳಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಶೆಟ್ಟರ್ ತಿಳಿಸಿದರು.

Similar News