2 ದಶಕಗಳ ಚುನಾವಣಾ ಇತಿಹಾಸದಲ್ಲೇ ಜೆಡಿಎಸ್ ಅತ್ಯಂತ ಕಳಪೆ ಸಾಧನೆ

Update: 2023-05-13 17:10 GMT

ಬೆಂಗಳೂರು, ಮೇ 13: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಂತೆ ಜೆಡಿಎಸ್ ನಿರೀಕ್ಷಿತ ಜಯ ಸಾಧಿಸುವಲ್ಲಿ ವಿಫಲವಾಗಿದ್ದು, 224 ಕ್ಷೇತ್ರಗಳ ಪೈಕಿ ಒಟ್ಟು 217 ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ, ಬರೀ 19 ಅಭ್ಯರ್ಥಿಗಳು ಗೆಲುವಿನ ದಡ ಸೇರಿದ್ದಾರೆ.

ಈ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿ ತಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಜೆಡಿಎಸ್‍ಗೆ ಭ್ರಮನಿರಸವಾಗಿದೆ. ಅಲ್ಲದೆ, ಪಂಚರತ್ನ ಸೇರಿದಂತೆ ಇನ್ನಿತರೆ ಜನಪರ ಯೋಜನೆಗಳನ್ನು ಘೋಷಿಸಿದರೂ, ಗೆಲುವಿನ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗಿದೆ.

ಇನ್ನೂ, ಈ ಬಾರಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 217 ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪುತ್ರ ದರ್ಶನ ಧ್ರುವನಾರಾಯಣ ಅವರಿಗೆ ಪಕ್ಷ ಬೆಂಬಲ ಪ್ರಕಟಿಸಿತ್ತು. ಜತೆಗೆ, 6 ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಆರ್‍ಪಿಐ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ಘೋಷಿಸಿತ್ತು. 

ಆದರೆ, ತಾನು ಸ್ಪರ್ಧಿಸಿದ್ದ 217 ಕ್ಷೇತ್ರಗಳಲ್ಲಿ 19 ಕಡೆ ಮಾತ್ರ ಗೆಲುವು ಸಾಧಿಸಿದೆ.ಆದರೆ, 18 ಕ್ಷೇತ್ರಗಳನ್ನು ಕಳೆದುಕೊಂಡು  ಹೀನಾಯ ಸ್ಥಿತಿಗೆ ಜೆಡಿಎಸ್ ಬಂದಿದೆ. 2004ರ ಚುನಾವಣೆಯಲ್ಲಿ ಜೆಡಿಎಸ್ 58 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. 2008ರಲ್ಲಿ 28, 2013ರಲ್ಲಿ 40 ಹಾಗೂ 2018ರಲ್ಲಿ 37 ಸ್ಥಾನಗಳನ್ನು ಪಡೆದಿತ್ತು. 

ಅದರಲ್ಲೂ ಜೆಡಿಎಸ್‍ನ ಭದ್ರಕೋಟೆ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಪಕ್ಷಕ್ಕೆ ಹೀನಾಯ ಸೋಲಾಗಿದೆ. 2018ರ ಚುನಾವಣೆಯಲ್ಲಿ ಮಂಡ್ಯದಲ್ಲಿ 7ಕ್ಕೆ ಏಳು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್, ಈ ಬಾರಿ ಮಂಡ್ಯದಲ್ಲಿ ಕೇವಲ 1 ಕ್ಷೇತ್ರಕ್ಕೆ ಸೀಮಿತಗೊಂಡಿದೆ. ರಾಮನಗರ ಜಿಲ್ಲೆಯಲ್ಲಿ ರಾಮನಗರ ಮತ್ತು ಮಾಗಡಿಯಲ್ಲಿ ಪಕ್ಷ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಇಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಕ್ಷೇತ್ರಕ್ಕೆ ಪ್ರತಿಷ್ಠೆಯ ಕಣವಾಗಿದ್ದ ಅರಸೀಕೆರೆಯಲ್ಲಿ ಪಕ್ಷ ಸೋತಿದೆ. ಬೇಲೂರು, ಸಕಲೇಶಪುರವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದ ಪಾಲಿಗೆ ಮಹತ್ತರದ್ದಾಗಿದ್ದ ಹಾಸನ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ಅವರನ್ನು ಪರಾಭವಗೊಳಿಸಿ, ದೇವೇಗೌಡರನ್ನು ಟೀಕಿಸಿದ್ದ ಪ್ರೀತಂಗೌಡಕ್ಕೆ ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದೆ.

Similar News