ಲಿಂಗಾಯತ ಸಿಎಂಗಾಗಿ ಬೇಡಿಕೆ ಇಡುತ್ತೇವೆ: ಶಾಮನೂರು ಶಿವಶಂಕರಪ್ಪ

Update: 2023-05-14 07:17 GMT

ದಾವಣಗೆರೆ: ಸಿಎಂ ಸ್ಥಾನದ ತೀವ್ರ ಪೈಪೋಟಿ ನಡೆಯುತ್ತಿರುವುದರ ನಡುವೆಯೇ ಲಿಂಗಾಯತ ಸಿಎಂ ಕೂಗು ಕಾಂಗ್ರೆಸ್‌ ಪಕ್ಷದಲ್ಲಿ ಕೇಳಿ ಬಂದಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗೆದ್ದಿರುವ ಹಿರಿಯ ಕಾಂಗ್ರೆಸ್‌ ನಾಯಕ ಡಾ.ಶಾಮನೂರು ಶಿವಶಂಕರಪ್ಪ ಅವರು, ಲಿಂಗಾಯತ ಮುಖ್ಯಮಂತ್ರಿಗಾಗಿ ಪಕ್ಷದ ವರಿಷ್ಟರ ಮುಂದೆ ಬೇಡಿಕೆ ಇಡುವುದಾಗಿ ತಿಳಿಸಿದ್ದಾರೆ. 

ಗೆಲುವಿನ ಘೋಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಫಲಿತಾಂಶದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬರಬೇಕೆಂಬುದು ಜನರ ಆಸೆಯಾಗಿದ್ದು, ಅದರಂತೆ ಮತದಾರರು ತೀರ್ಪು ನೀಡಿದ್ದಾರೆ ಎಂದಿದ್ದಾರೆ.

ದಾವಣಗೆರೆಯ 6 ಕ್ಷೇತ್ರ ಸೇರಿ ರಾಜ್ಯದಲ್ಲಿ ದಾಖಲೆಯ ಜಯ ಕಂಡ ಕಾಂಗ್ರೆಸ್ಸಿನ ಸಾಧನೆ ಖುಷಿ ತಂದಿದೆ. ಪಕ್ಷದ ಶಾಸಕರೆಲ್ಲಾ ಸೇರಿ, ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿ, ಅದನ್ನು ಪಕ್ಷದ ವರಿಷ್ಠರಿಗೆ ರವಾನಿಸುತ್ತೇವೆ. ಲಿಂಗಾಯತ ಮುಖ್ಯಮಂತ್ರಿ ಕುರಿತಂತೆ ಪಕ್ಷದ ವರಿಷ್ಠರ ಮುಂದೆ ಬೇಡಿಕೆ ಇಡಲಿದ್ದೇವೆ. ಹೈಕಮಾಂಡ್‌ ಒಪ್ಪಿದ ನಂತರವೇ ಮುಖ್ಯಮಂತ್ರಿ ಯಾರು ಎಂದು ಅಂತಿಮವಾಗಲಿದೆ ಎಂದು ಹೇಳಿದ್ದಾರೆ.

ಫಲಿತಾಂಶಕ್ಕೂ ಮುನ್ನವೇ ಶಾಮನೂರು ಅವರು ಲಿಂಗಾಯತ ಸಿಎಂಗಾಗಿ ಬೇಡಿಕೆ ಇಟ್ಟಿದ್ದರು. ಸಮೀಕ್ಷೆಗಳು ನಿಜವಾಗಿ, ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರದ ಪಡೆದರೆ ಈ ಬಾರಿ ವೀರಶೈವ ಲಿಂಗಾಯತ ಅಭ್ಯರ್ಥಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಶಿವಶಂಕರಪ್ಪ ಒತ್ತಾಯಿಸಿದ್ದರು.

ಬಿ.ಎಸ್.ಯಡಿಯೂರಪ್ಪರನ್ನು ಬಿಜೆಪಿ ನಿರ್ಲಕ್ಷಿಸಿರುವುದರಿಂದ ಈ ಬಾರಿ ಲಿಂಗಾಯತ ಮತಗಳು ರಾಜ್ಯದಲ್ಲಿ ಕಾಂಗ್ರೆಸ್​ನತ್ತ ವಾಲಿವೆ. ಇದು ಕಾಂಗ್ರೆಸ್ ಸರಳ ಬಹುಮತ ಪಡೆಯಲು ಸಹಕಾರಿಯಾಗಿದೆ. ಹೀಗಾಗಿ ವೀರಶೈವರಿಗೆ ಸಿಎಂ ಹುದ್ದೆ ನೀಡುವಂತೆ ಹಿಂದೆಯೂ ಬೇಡಿಕೆ ಇಡುವುದಾಗಿ ಶಾಮನೂರು ಶಿವಶಂಕರಪ್ಪ ಹೇಳಿದ್ದರು.

Similar News