ಕರ್ನಾಟಕದಲ್ಲಿ ಫಲ ಕೊಡದ 'ದಿ ಕೇರಳ ಸ್ಟೋರಿ': ರಾಜ್ಯ ಚುನಾವಣಾ ಫಲಿತಾಂಶಕ್ಕೆ ಮಲಯಾಳಿಗಳ ವ್ಯಂಗ್ಯ

Update: 2023-05-14 14:45 GMT

ಬೆಂಗಳೂರು: ʼಕೇರಳವನ್ನು ನೋಡಲು ಕರ್ನಾಟಕದ ಮತದಾರರಿಗೆ ಹೇಳಿದರು, ಅವರು ನೋಡಿದರು, ಅಲ್ಲಿಗೆ ಕತೆ ಮುಗಿಯಿತುʼ ಇದು ಬಿಜೆಪಿ ಸೋಲಿನ ಬಳಿಕ ಕೇರಳದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಒಂದು ಸಂದೇಶ.

ತಮ್ಮ ನೆರೆಯ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದನ್ನು ಕೇರಳದ ಜನತೆ ಸ್ವೀಕರಿಸಿದ್ದು ಹೇಗೆ? ಎನ್ನುವುದರ ಬಗ್ಗೆ ಕೆಕೆ ಶಾಹಿನಾ ಅವರು ಔಟ್‌ಲುಕ್‌ಗಾಗಿ ಮಾಡಿರುವ ವರದಿ ಇಲ್ಲಿದೆ.

ʼದಿ ಕೇರಳ ಸ್ಟೋರಿʼ ಚಿತ್ರವನ್ನು ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವ್ಯಾಪಕ ಪ್ರಚಾರ ನೀಡಿತು. ಈ ಚಿತ್ರವು ಕೇರಳದಲ್ಲಿ ನಡೆಯುತ್ತಿರುವ ʼಲವ್‌ ಜಿಹಾದ್‌ʼ ಕುರಿತ ಕಥೆಗಳನ್ನು ಹೊಂದಿದೆ ಎಂದು ಚಿತ್ರತಂಡವು ಹೇಳಿದ್ದು, ಇದೊಂದು ಕೇರಳದ ವಿರುದ್ಧ ಪಿತೂರಿಯ ಹಾಗೂ ಧ್ವೇಷ ಕಾರುವ ಸಿನೆಮಾ ಎಂದು ವಿಮರ್ಷಕರು ಹೇಳಿದ್ದಾರೆ.

ಬಿಜೆಪಿ ಅಭಿಯಾನಗಳಲ್ಲಿ ಈ ಚಿತ್ರದ ಬಗ್ಗೆ ಉಲ್ಲೇಖಿಸುವ ಹಿನ್ನೆಲೆಯೆಲ್ಲಿ ಬಿಜೆಪಿಯ ಸೋಲನ್ನು ಕೇರಳದಲ್ಲಿ ಸಾಮಾಜಿಕ ಜಾಲತಾಣ ಜನರು ಸಂಭ್ರಮಿಸುತ್ತಿದ್ದಾರೆ. 
“ಮೋದಿ ಮತ್ತು ಅಮಿತ್ ಶಾ ಕರ್ನಾಟಕಕ್ಕೆ ಬಂದು, ಕೇರಳದತ್ತ ನೋಡುವಂತೆ ಜನರನ್ನು ಕೇಳಿದರು. ಅವರು ನೋಡಿದರು, ಈಗ ಬಿಜೆಪಿಯೇ ಅಲ್ಲಿ ಇಲ್ಲ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ʼಕೇರಳ ನಿಮ್ಮ ನೆರೆ ರಾಜ್ಯ ಎಂದು ಅಮಿತ್‌ ಶಾ ಎಚ್ಚರಿಕೆ ನೀಡಿದರು, ನೀವು ಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕ ಕೇರಳದಂತೆ ಆಗುತ್ತದೆʼ ಎಂದು ಹೇಳಿದ್ದಾರೆ.

 ಕರ್ನಾಟಕ ಚುನಾವಣಾ ಪ್ರಚಾರದ ಅಂತಿಮ ಕ್ಷಣಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಉಲ್ಲೇಖಿಸಿ, ಕೇರಳವನ್ನು ನೋಡಿ” ಎಂದು ಕರ್ನಾಟಕದ ಜನರಿಗೆ 'ಎಚ್ಚರಿಕೆ' ನೀಡಿದ್ದರು. ಹೀಗಾಗಿ, ಈ ಚುನಾವಣೆಯು ನೆರೆಯ ಕೇರಳಕ್ಕೆ ಸಂಬಂಧಿಸಿಲ್ಲವಾದರೂ, ಫಲಿತಾಂಶಗಳು ಕೇರಳದಲ್ಲಿಯೂ ವಿಜಯದ ಕ್ಷಣವೆಂದು ಪರಿಗಣಿಸಲಾಗುತ್ತಿದೆ.

‘ದಿ ಕೇರಳ ಸ್ಟೋರಿ’ ಚಿತ್ರವು ಕೇರಳದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಸಂಚುಗಳನ್ನು ಹೊರತಂದಿದೆ ಎಂದು ಮೋದಿ ಹೇಳಿದ್ದಾರೆ ಎಂದು ಎಎನ್‌ಐ ಬುಧವಾರ ವರದಿ ಮಾಡಿದೆ. ಈ ಭಯೋತ್ಪಾದಕ ಪ್ರವೃತ್ತಿಯೊಂದಿಗೆ ಕಾಂಗ್ರೆಸ್ ನಿಂತಿರುವುದನ್ನು ಕಾಣಬಹುದು ಮತ್ತು ಕರ್ನಾಟಕದ ಜನರು ಕಾಂಗ್ರೆಸ್ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಹೇಳಿದ್ದಾರೆ.

ANI ಪ್ರಕಾರ, 'ದಿ ಕೇರಳ ಸ್ಟೋರಿ' ಕರ್ನಾಟಕದ ಪ್ರಮುಖ ಪ್ರಚಾರ ವಿಷಯಗಳಲ್ಲಿ ಒಂದಾಗಿದೆ. ಬಿಜೆಪಿ ನಾಯಕರು ಭಯೋತ್ಪಾದನೆಯ ಬಗ್ಗೆ ಮಾತನಾಡಲು ಪ್ರಚಾರದಲ್ಲಿ 'ದಿ ಕಾಶ್ಮೀರ ಫೈಲ್ಸ್' ಅನ್ನು ಉಲ್ಲೇಖಿಸಿದ್ದಾರೆ. ಆದರೆ, ಜನರು ಅಜೆಂಡಾದ ಕಲ್ಪಿತ ಕಥೆಗಳನ್ನು ತಿರಸ್ಕರಿಸಿದ್ದು, ಕೆಲವು ನೈಜ ಕಥೆಗಳನ್ನು ಹುಡುಕಿದರು ಎಂಬುದನ್ನು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ತೋರಿಸುತ್ತದೆ.

ಕೇರಳದ ಜನರ ಮಟ್ಟಿಗೆ ಹೇಳುವುದಾದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ನ ಭರ್ಜರಿ ಗೆಲುವು ಕೇರಳದ ವಿರುದ್ಧದ ಅಭಿಯಾನಕ್ಕೆ ತಕ್ಕ ಉತ್ತರವಾಗಿದೆ. ಕರ್ನಾಟಕದ ಮತದಾರರಿಗೆ ಕೇರಳದತ್ತ ಕಣ್ಣು ಹಾಯಿಸಿ ಎಂದು ಬಿಜೆಪಿ ನಾಯಕರು ನೀಡಿರುವ ಕರೆಯನ್ನು ಉಲ್ಲೇಖಿಸಿ ಮಲಯಾಳಂ ಸಾಮಾಜಿಕ ಮಾಧ್ಯಮಗಳು ಟ್ರೋಲ್‌ಗಳಿಂದ ತುಂಬಿವೆ.  ನೆಟ್ಟಿಗರು ಕೇರಳದ ಬಗೆಗಿನ ಸಕರಾತ್ಮಕ ಅಂಶಗಳನ್ನು ಹಂಚಿ, ಕೇರಳ ಸ್ಟೋರಿಗೆ ತಿರುಗೇಟನ್ನು ನೀಡಿದೆ. 

ಇದಕ್ಕೆ ಹಿರಿಯ ರಾಜಕೀಯ ನಾಯಕರು ಕೂಡ ಕೈಜೋಡಿಸಿದ್ದಾರೆ. ಸಿಪಿಐ-ಎಂ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಡಾ ಥಾಮಸ್ ಐಸಾಕ್ ಕರ್ನಾಟಕ ಫಲಿತಾಂಶಗಳು ಚುನಾವಣೆಯಲ್ಲಿ ಗೆಲ್ಲಲು ವಿಷವನ್ನು ಉಗುಳಿರುವ ಬಿಜೆಪಿಯ ಮುಖಕ್ಕೆ ಬಿಗಿಯಾದ ಕಪಾಳಮೋಕ್ಷವಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. 

“ಕೊನೆಯ ಕ್ಷಣದಲ್ಲಿ, ಅವರು ಮೂರನೇ ದರ್ಜೆಯ ಅಜೆಂಡಾ ಚಿತ್ರ 'ದಿ ಕೇರಳ ಸ್ಟೋರಿ' ಮೂಲಕ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು. ಗೃಹ ಸಚಿವ ಅಮಿತ್ ಶಾ ಅವರು ಕೇರಳದ ವಿರುದ್ಧ ದ್ವೇಷ ಅಭಿಯಾನದ ನೇತೃತ್ವ ವಹಿಸಿದ್ದರು. ಆದರೆ, ಅದ್ಯಾವುದೂ ಅವರ ಪರವಾಗಿ ಏನೂ ಕೆಲಸ ಮಾಡಲಿಲ್ಲ ಎಂದು ಅವರು ಬರೆದಿದ್ದಾರೆ. "ದಕ್ಷಿಣ ಭಾರತಕ್ಕೆ ಅತ್ಯಂತ ನಿರ್ಣಾಯಕ ದಿನ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಲ್ಲಂನಲ್ಲಿ ಹೇಳಿದ್ದಾರೆ.

ಇಡೀ ದಕ್ಷಿಣ ಬಿಜೆಪಿಯಿಂದ ವಿಮೋಚನೆಗೊಂಡಿದೆ. ಇದು ದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಸೂಚನೆ ನೀಡುತ್ತದೆ. ಪ್ರಧಾನಿಯವರು ಪ್ರಚಾರಕ್ಕಾಗಿ ಸುಮಾರು 10 ದಿನಗಳ ಕಾಲ ಕ್ಯಾಂಪ್ ಮಾಡಿದರು, ಆದರೆ ಕರ್ನಾಟಕದ ಜನರು ದ್ವೇಷದ ಪ್ರಚಾರವನ್ನು ತಿರಸ್ಕರಿಸಿದರು ಮತ್ತು ತಕ್ಕ ಉತ್ತರವನ್ನು ನೀಡಿದರು ಎಂದು ವಿಜಯನ್‌ ಹೇಳಿದ್ದಾರೆ. 

ಕರ್ನಾಟಕ ಫಲಿತಾಂಶದ ದಿನದಂದು ಸಾಮಾನ್ಯ ಕಾಂಗ್ರೆಸ್-ಸಿಪಿಎಂ ಜಗಳಗಳು ಹೆಚ್ಚು ಗಮನಕ್ಕೆ ಬಂದಿಲ್ಲ, ಬದಲಾಗಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿಜಯದ ಬಗ್ಗೆ ಬಹಿರಂಗವಾಗಿ ಉತ್ಸಾಹ ಮತ್ತು ಸಂತೋಷವನ್ನು ವ್ಯಕ್ತಪಡಿಸಿವೆ.

ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಚಿತ್ರಗಳಿರುವ ‘ಸೌತ್ ಇಂಡಿಯಾ ಸ್ಟೋರಿ’ ಎಂಬ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Similar News