ಮುಸ್ಲಿಮ್ ಮೀಸಲಾತಿ ರದ್ದು, ಅಡುಗೆ ಅನಿಲ ಬೆಲೆ ಏರಿಕೆಯಿಂದ ಸೋಲು: ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್
ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣ ಏನೆಂಬುದನ್ನು ಮಾಜಿ ಸಚಿವ, ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿಗೆ ಭೇಟಿ ನೀಡದ್ದ ವೇಳೆ ಪತ್ರಕರ್ತರೊಂದಿಗೆ ರವಿವಾರ ಮಾತನಾಡಿದ ಅವರು, 'ಮುಸ್ಲಿಮರ ಶೇ.4 ಮೀಸಲಾತಿ ತೆಗೆದಿರೋದು ತಪ್ಪಾಗಿರಬಹುದು. ನನ್ನ ಕ್ಷೇತ್ರದಲ್ಲಿ ನನ್ನ ಪರವಾಗಿ ಸಾಕಷ್ಟು ಮುಸ್ಲಿಮರು ಇದ್ದರು. ನಾನು ಕ್ಷೇತ್ರಕ್ಕೆ ಹೋದಾಗ ಹಲಾಲ್ ಕಟ್ ವಿರೋಧಿ ಅಭಿಯಾನದ ಬಗ್ಗೆ ಎಲ್ಲರೂ ಹೇಳುತ್ತಿದ್ದರು. ಆಗ ನನಗೆ ಇದು ಎಲ್ಲವೂ ಗಮನಕ್ಕೆ ಬಂದಿತ್ತು. ಬಿಜೆಪಿ ಸೋಲಿಗೆ ಇದೆಲ್ಲವೂ ಕಾರಣವಾಗಿರಬಹುದು' ಎಂದು ತಿಳಿಸಿದರು.
''ಅಡುಗೆ ಅನಿಲ ಬೆಲೆ ಏರಿಕೆ ಕಾರಣ''
'ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ, ‘ಅನ್ನಭಾಗ್ಯ’ ಯೋಜನೆಯಲ್ಲಿ ನೀಡುವ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದರಿಂದಲೇ ಬಿಜೆಪಿ ಸೋತಿರಬಹುದು' ಎಂದು ತಿಳಿಸಿದರು.
'ಲೋಕಸಭಾ ಚುನಾವಣೆಯೇ ಬೇರೆ, ಎಂಎಲ್‌ಎ ಚುನಾವಣೆಯೇ ಬೇರೆ. ಕೇಂದ್ರಕ್ಕೂ ರಾಜ್ಯಕ್ಕೂ ಹೋಲಿಕೆ ಮಾಡುವುದಕ್ಕೆ ಆಗಲ್ಲ' ಎಂದು ಹೇಳಿದರು.
ಎಸ್.ಟಿ. ಸೋಮಶೇಖರ್ ಅವರು ಯಶವಂತಪುರ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿಯಾದ ಜವರಾಯಿ ಗೌಡ (ಜೆಡಿಎಸ್) ಅವರನ್ನು ಸುಮಾರು 12 ಸಾವಿರ ಮತಗಳ ಅಂತರದಲ್ಲಿ ಸೋಲಿಸಿ ಗೆಲುವು ಸಾಧಿಸಿದ್ದಾರೆ