×
Ad

ಆ ಒಂದು ಜನಾಂಗವನ್ನು ಅವರ ದೇವರೇ ಕಾಪಾಡಿಕೊಳ್ಳಲಿ, ನಮ್ಮ ಶಕ್ತಿ ತೋರಿಸುತ್ತೇವೆ ಎಂದ ಪ್ರೀತಂ ಗೌಡ

ಮತದಾರರ ವಿರುದ್ಧವೇ ಆಕ್ರೋಶ ಹೊರ ಹಾಕಿದ ಬಿಜೆಪಿಯ ಮಾಜಿ ಶಾಸಕ

Update: 2023-05-15 13:29 IST

ಹಾಸನ: ''ಒಂದು ವರ್ಗದ ಜನ ಏನು ನಮಗೆ ತೋರಿಸಿದ್ದಾರೆ, ಆ ವರ್ಗದ ಜನರಿಗೆ ಮುಂದಿನ ದಿನಗಳಲ್ಲಿ ನಾವೇನೆಂದು ಹಾಸನದಲ್ಲಿ ತೋರಿಸುತ್ತೇನೆ. ಇದು ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ'' ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಪ್ರೀತಂ ಗೌಡ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

'ಸೋಲಿಗೆ ಒಂದು ಸಮುದಾಯವೇ ಕಾರಣ' ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

'ವಿಶ್ವಾಸ, ಪ್ರೀತಿಯಿಂದ ಇಡೀ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ- ವನ್ನು ಮಾಡಿದ್ದೇನೆ. ಆ ಪ್ರಯತ್ನದ ನಡುವೆಯೂ ನನ್ನನ್ನು ದ್ವೇಷಿಸುವ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ದೇವರು ಅವರನ್ನು ಕಾಪಾಡಿಕೊಳ್ಳಲಿ. ಪ್ರೀತಂ ಗೌಡನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ' ಎಂದು ಹೇಳಿದ್ದಾರೆ.

'ಐದು ವರ್ಷ ಕೆಲಸ ಮಾಡಿದ್ದೇವೆ. ಕೋವಿಡ್ ಸೇರಿದಂತೆ ಕಷ್ಟದ ಸಂದರ್ಭದಲ್ಲಿ ಕೆಲವರು ಮನೆಯಲ್ಲಿ ಮಲಗಿದ್ದರು. ಆದರೆ, ಕೆಲಸ ಮಾಡಿರುವ ನಾವು ಇಲ್ಲಿದ್ದೇವೆ. ಜನ ಇದನ್ನೆಲ್ಲ ಮರೆತಿರುವುದಿಲ್ಲ' ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

''ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಮತ ಹಾಕಿ ಇಲ್ಲದಿದ್ದರೇ ನಿಮ್ಮ ಕೆಲಸ ಏನೂ ಮಾಡಿಕೊಡಲ್ಲ'' ಎಂದು ಪ್ರೀತಂ ಗೌಡ ಈ ಹಿಂದೆ ಹಾಸನದಲ್ಲಿ ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದರು. ಹಾಗಾಗಿ ಪ್ರೀತಂ ಗೌಡ ಅವರು ಈ ಭಾಷಣದಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿ ಮಾತನಾಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

'ಇವನು ಸೋತಿದ್ದು ಒಳ್ಳೆಯದೇ ಆಯಿತು. ಭಾಷಣ ತಾರತಮ್ಯ ಮಾಡುವುದಲ್ಲದೇ ಬೆದರಿಕೆ ಬೇರೆ ಹಾಕುತ್ತಾನೆ' ಎಂದು ನೆಟ್ಟಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Similar News