×
Ad

ರೈತ ಸಂಘಟನೆಯನ್ನು ರಾಜ್ಯಾದ್ಯಂತ ಬಲಿಷ್ಠಗೊಳಿಸಲು ಶ್ರಮಿಸುತ್ತೇನೆ: ಮೇಲುಕೋಟೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ

''ಪ್ರಭಾವಿ ಅಭ್ಯರ್ಥಿ ಎದುರು ಗೆಲ್ಲಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ''

Update: 2023-05-15 19:58 IST

ಮಂಡ್ಯ, ಮೇ 15: ತನ್ನ ಮೇಲೆ ನಂಬಿಕೆ ಇಟ್ಟು ಗೆಲುವು ತಂದುಕೊಟ್ಟ ಕ್ಷೇತ್ರದ ಜನತೆಯ ನಂಬಿಕೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಮೇಲುಕೋಟೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದ್ದಾರೆ.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತಸಂಘ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಯುವಜನರು ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ಅನುಭವಿ, ಪ್ರಭಾವಿ ಅಭ್ಯರ್ಥಿ ಎದುರು ನನ್ನನ್ನು ಗೆಲ್ಲಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮಾಜಿ ಶಾಸಕರಾದ ಪುಟ್ಟರಾಜು ಸೇರಿದಂತೆ ಎಲ್ಲರ ಸಲಹೆ, ಅಭಿಪ್ರಾಯ ತೆಗೆದುಕೊಳ್ಳುತ್ತೇನೆ. ಸರಕಾರಿ ಶಾಲೆಗಳ ಅಭಿವೃದ್ಧಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ, ರೈತರು ಮತ್ತು ಜನಸಾಮಾನ್ಯರ ಸಮಸ್ಯೆ, ಕುಡಿಯವ ನೀರಿನ ಸಮಸ್ಯೆ ನಿವಾರಣಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೈಕುಳಿಯಿಂದ ಮಾಡುವ ಗಣಿಗಾರಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ದೊಡ್ಡಮಟ್ಟದ ಸ್ಫೋಟಕಗಳನ್ನು ಉಪಯೋಗಿಸಿ ಮಾಡುವ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ. ಕಬ್ಬು ಸೇರಿದಂತೆ  ರೈತರ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗಾಗಿ ಹೋರಾಡುತ್ತೇನೆ. ಒಂದು ಬಾರಿ ಸಾಲಮನ್ನಾ ಪ್ರಯೋಜನ ಪಡೆದ ರೈತರು ಮತ್ತೆ ಸಾಲದ ಸುಳಿಗೆ ಸಿಲುಕದಿರಲು ಏನು ಕ್ರಮಗಳಾಗಬೇಕು ಎಂಬುದರ ಬಗ್ಗೆ ಗಮನಹರಿಸಲಾಗುವುದು. ರೈತಸಂಘಟನೆಯನ್ನು ರಾಜ್ಯಾದ್ಯಂತ ಬಲಿಷ್ಠಗೊಳಿಸಲು ಶ್ರಮಿಸಲಾಗುವುದು ಎಂದು ಅವರು ತಿಳಿಸಿದರು.

ಸರಕಾರಿ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು. ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದ ಅವರು, ಕ್ಷೇತ್ರದಲ್ಲಿ ಯಾವುದೇ ಗಲಾಟೆ, ಗಲಭೆಗಳಿಗೆ ಅವಕಾಶವಾಗದಂತೆ ಜನರು ಶಾಂತಿಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಅವರು ಮನವಿ ಮಾಡಿದರು.

ಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪಗೌಡ, ಮುಖಂಡರಾದ ಲಿಂಗಪ್ಪಾಜಿ, ಬಾಲಚಂದ್ರ, ಪ್ರಸನ್ನ ಎನ್.ಗೌಡ, ಕೆನ್ನಾಳು ನಾಗರಾಜು, ಹರವು ಪ್ರಕಾಶ್, ಶಿವಳ್ಳಿ ಚಂದ್ರು ಉಪಸ್ಥಿತರಿದ್ದರು.

Similar News