ಕೆಎಸ್ಸಾರ್ಟಿಸಿ ಬಸ್‍ನಲ್ಲಿ ಗರ್ಭಿಣಿಗೆ ಹೆರಿಗೆ; ನಿರ್ವಾಹಕಿಯ ಕಾರ್ಯಕ್ಕೆ ಶ್ಲಾಘನೆ
Update: 2023-05-15 21:58 IST
ಬೆಂಗಳೂರು, ಮೇ 15: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗಮಧ್ಯದಲ್ಲಿಯೇ ಬಸ್ಸಿನ ಮಹಿಳಾ ನಿರ್ವಾಹಕಿಯು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಮಗು ಮತ್ತು ಮಹಿಳೆ ಆರೋಗ್ಯವಾಗಿರುತ್ತಾರೆ.
ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ವಾಹನ ಸಂಖ್ಯೆ ಕೆಎ 18 ಎಫ್ 0865ರಲ್ಲಿ ಬೆಂಗಳೂರು-ಚಿಕ್ಕಮಗಳೂರು ಮಾರ್ಗ ಕಾರ್ಯಾಚರಣೆಯ ವೇಳೆ ಉದಯಪುರ ಸಮೀಪವಿರುವ ಕೃಷಿ ಕಾಲೇಜು ಹತ್ತಿರ ನಿಗಮದ ವಾಹನದಲ್ಲಿ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನಂತರ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಸಕಾಲದಲ್ಲಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ತಿಳಿಸಿದ್ದಾರೆ.