×
Ad

ಪಕ್ಷವಿರೋಧಿ ಚಟುವಟಿಕೆಯೇ ನನ್ನ ಸೋಲಿಗೆ ಕಾರಣ: ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ್

Update: 2023-05-16 16:23 IST

ಶಿವಮೊಗ್ಗ, ಮೇ.16: ಜೆಡಿಎಸ್-ಕಾಂಗ್ರೆಸ್ ನಡುವಿನ ಒಳ ಒಪ್ಪಂದ ಹಾಗೂ ಪಕ್ಷದೊಳಗಿರುವ ಮೀರ್ ಸಾಧಿಕ್‌ಗಳಿಂದ ನನಗೆ ಸೋಲಾಯಿತು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಬಿ. ಅಶೋಕ ನಾಯ್ಕ್ ಹೇಳಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಒಳ  ಒಪ್ಪಂದದಿಂದ ನಾನು ಸೋಲಬೇಕಾಯಿತು, ಜೊತೆಗೆ ನಮ್ಮ ಪಕ್ಷದವರೇ ಕೆಲವರು ಮೀರ್ ಸಾಧಿಕ್ ರೀತಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಾರೆ. ಅಂತವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಜಿಲ್ಲಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಅವರು ಶಿಸ್ತಿನ ಕ್ರಮ  ತೆಗೆದುಕೊಳ್ಳುತ್ತಾರೆ ಎಂದರು.

ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಸೋತಾಗ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಸೋಲಲು ಅನೇಕ ಕಾರಣಗಳಿವೆ. ವಿರೋಧ ಪಕ್ಷಗಳು ಮೀಸಲಾತಿ ವಿಷಯದಲ್ಲಿ ಸಲ್ಲದ ಆರೋಪಗಳನ್ನು ಮಾಡಿದರು. ಸುಳ್ಳು ಮಾಹಿತಿ ನೀಡಿದರು. ಮುಗ್ಧ ಸಮಾಜದ ಮತದಾರರು ಇದನ್ನು ನಿಜವೆಂದು ನಂಬಿಕೊಂಡರು. ಹಾಗಾಗಿ ಸೋಲಬೇಕಾಯಿತು. ಆದರೂ ಕೂಡ ಕಳೆದ ವರ್ಷಕ್ಕಿಂತ ಹೆಚ್ಚು ಮತವನ್ನು ಪಡೆದಿದ್ದೇನೆ ಎಂದರು.

ಕಾರ್ಯಕರ್ತರು ನನಗಾಗಿ ಹಗಲು ರಾತ್ರಿ ಶ್ರಮ ಪಟ್ಟಿದ್ದಾರೆ. ದುಡಿದಿದ್ದಾರೆ. ಇದು ನನ್ನ ಸೋಲೇ ಹೊರತು ಕಾರ್ಯಕರ್ತರ ಸೋಲಲ್ಲ. ಅವರೆಲ್ಲರಿಗೂ ಅಭಿನಂದನೆಗಳು. ನನಗೆ ಮತ ನೀಡಿದ ಮತದಾರರಿಗೆ ಕೃತಜ್ಞತೆ ಎಂದರು.

ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದವರು ನನ್ನ ಮೇಲೆ ಸಲ್ಲದ ಆರೋಪ ಮಾಡಿದರು. ಆ ವಿಚಾರದಲ್ಲಿ ನಾನು ಈಗಲೂ ಬದ್ಧನಾಗಿದ್ದೇನೆ. ನನ್ನ ವಿರೋಧಿಸಿದವರು ಈಗ ಮೀಸಲಾತಿಯನ್ನು ಸರಿಪಡಿಸಿಕೊಳ್ಳಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವರಾಜ್, ರತ್ನಾಕರ ಶೆಣೈ, ಜಗದೀಶ್, ಮಂಜುನಾಥ್, ಗೋಪಿ ಇದ್ದರು.

Similar News