ಜಮೀನು ವ್ಯಾಜ್ಯಕ್ಕೆ ಬಿಜೆಪಿ ಕಾರ್ಯಕರ್ತನ ಕೊಲೆ: ಸಾಕ್ಷ್ಯ ಬಿಡುಗಡೆ ಮಾಡಿದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ
''ಕೊಲೆಯಾದ ಕೃಷ್ಣಪ್ಪ ಮತ್ತು ಆರೋಪಿ ಇಬ್ಬರೂ ಬಿಜೆಪಿ ಕಾರ್ಯಕರ್ತರು''
ಬೆಂಗಳೂರು, ಮೇ 16: ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಬಿಡುಗಡೆ ಮಾಡಿದ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ, ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮಂದಿರ ನಡುವೆ ನಡೆದ ಜಗಳದಲ್ಲಿ ಈ ಕೊಲೆಯಾಗಿದೆ. ಆದರೆ, ಇದನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣ, ತಮ್ಮಂದಿರ ನಡುವೆ ನಡೆದ ಜಗಳದಿಂದ ಆಗಿರುವ ಕೊಲೆಯ ಪ್ರಕರಣವನ್ನು ನಮ್ಮ ಮೇಲೆ ಹಾಕಲು ಪ್ರಯತ್ನ ಪಡುತ್ತಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ನಮ್ಮ ಹೆಸರು ಕೆಡಿಸುವ ಕೆಲಸವನ್ನು ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.
ದೂರುದಾರರು ನೀಡಿರುವ ದೂರಿನಲ್ಲಿ ಎಲ್ಲಿಯೂ ಕಾಂಗ್ರೆಸ್‍ನವರ ಬಗ್ಗೆ ಉಲ್ಲೇಖ ಮಾಡಿಲ್ಲ. ಹತ್ಯೆಯಾಗಿರುವ ಕೃಷ್ಣಪ್ಪ ಹಾಗೂ ಅವರ ಸಹೋದರ ಗಣೇಶಪ್ಪ ಎರಡು ತಿಂಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದರು. ನಂತರ, ಸಚಿವರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಶರತ್ ಬಚ್ಚೇಗೌಡ ಹೇಳಿದರು.
ಅಣ್ಣ, ತಮ್ಮಂದಿರ ನಡುವೆ ಜಮೀನು ವ್ಯಾಜ್ಯ ನಡೆಯುತ್ತಿತ್ತು. ಜಮೀನು ವ್ಯಾಜ್ಯ ವಿಚಾರಕ್ಕೆ ಗಲಾಟೆಯಾಗಿ ಕೃಷ್ಣಪ್ಪ ಕೊಲೆಯಾಗಿದೆ. ಬಿಜೆಪಿಯವರೆ ಕಿತ್ತಾಡಿಕೊಂಡು ಕಾಂಗ್ರೆಸ್‍ನವರ ಮೇಲೆ ಹಾಕುತ್ತಿದ್ದಾರೆ. ಮಾಜಿ ಸಚಿವರು ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅವರು ಇಂತಹ ಕುತಂತ್ರ ರಾಜಕಾರಣವನ್ನ ಬಿಡಬೇಕು. ಕುತಂತ್ರ ರಾಜಕಾರಣ ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡೋಣ ಎಂದು ಅವರು ಹೇಳಿದರು.
ಹೊಸಕೋಟೆ ತಾಲೂಕಿನ ಗ್ರಾಮಗಳಲ್ಲಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಂ.ಟಿ.ಬಿ.ನಾಗರಾಜ್ ಕಡೆಯವರು ಹಲ್ಲೆ ಮಾಡಿದ್ದಾರೆ. ಚುನಾವಣೆಯಲ್ಲಿ ಎಂ.ಟಿ.ಬಿ.ನಾಗರಾಜ್ ಸೋತಿರುವ ಹತಾಶೆಯಲ್ಲಿ ಕೆಲವು ಕಡೆ ಮಹಿಳೆಯರು, ವೃದ್ಧರ ಮೇಲೆ ಹಲ್ಲೆಗಳು ಆಗಿವೆ. ಆ ಮೂಲಕ ಅವರು ತಾಲೂಕಿನಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದಕ್ಕೆಲ್ಲ ಅವಕಾಶ ನೀಡದಂತೆ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಶರತ್ ಬಚ್ಚೇಗೌಡ ತಿಳಿಸಿದರು.