ಐಪಿಎಸ್ ಅಧಿಕಾರಿ ಭೀಮಾಶಂಕರ್ ಗುಳೇದ್ ವಿರುದ್ಧ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣ ಹೈಕೋರ್ಟ್ ನಿಂದ ರದ್ದು
ಬೆಂಗಳೂರು, ಮೇ 16: ಹಿರಿಯ ಐಪಿಎಸ್ ಅಧಿಕಾರಿ ಭೀಮಾಶಂಕರ್ ಎಸ್. ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಅಕ್ರಮ ಹಣ ವರ್ಗಾವಣೆ, ಬೇನಾಮಿ ಹಾಗೂ ಭ್ರಷ್ಟಾಚಾರ ಆರೋಪದ ಅಡಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಎರಡು ಖಾಸಗಿ ದೂರುಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಪ್ರಕರಣ ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಸಿಐಡಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಗುಳೇದ್ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಪ್ರಕರಣದಲ್ಲಿ ದೂರುದಾರರ ಪತ್ನಿಯೇ ಅಕ್ರಮ ಸಂಬಂಧದ ಚಿತ್ರ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಿರುವಾಗ ಆರೋಪಿ ಗುಳೇದ್ ಅವರು ಅವುಗಳನ್ನು ನಾಶ ಮಾಡಿದ್ದಾರೆ ಎಂಬುದಾಗಿ ಪರಿಗಣಿಸಲಾಗದು. ಮೊಬೈಲ್‍ನಲ್ಲಿ ಕೆಲವು ಅಹಿತಕರ ಚಿತ್ರಗಳಿಗೆ ಪತಿ-ಪತ್ನಿಯರ ನಡುವೆ ಕಲಹವಾಗಿದ್ದು, ಅದಕ್ಕೆ ಗುಳೇದ್ ಅವರು ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ಒಪ್ಪಲಾಗದು.
ಸೂಕ್ತ ದಾಖಲೆಗಳ ಕೊರತೆಯ ನಡುವೆ ವಿಚಾರಣಾಧೀನ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಿದೆ. ದೂರುದಾರರ ಪತ್ನಿ ಮತ್ತು ಆರೋಪಿ ಗುಳೇದ್ ಅವರು ದೈಹಿಕ ಸಂಬಂಧ ಹೊಂದಿರುವ ಚಿತ್ರಗಳು ಪತ್ನಿಯ ಮೊಬೈಲ್‍ನಲ್ಲಿ ಪತ್ತೆಯಾಗಿದ್ದು, ಅವುಗಳನ್ನು ತನ್ನ ಮೊಬೈಲ್‍ಗೆ ವರ್ಗಾವಣೆ ಮಾಡಿಕೊಂಡಿದ್ದಾಗಿ ದೂರುದಾರ ಪತಿಯೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಮಹಿಳೆ ಮೇಲಿನ ಮಾನಭಂಗಕ್ಕೆ ಪ್ರಯತ್ನ ಮಾಡುವ ಆರೋಪ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಪಿಎಂಎಲ್ ಕಾಯಿದೆ ಸೆಕ್ಷನ್ 45ರ ಅಡಿ ಪ್ರತಿವಾದಿಯಾಗಿರುವ ದೂರುದಾರ ಸಲ್ಲಿಸಿರುವ ದೂರು ಊರ್ಜಿತವಲ್ಲ ಎಂದು ಪೀಠ ಹೇಳಿದೆ.