×
Ad

ಮತದಾರರಿಗೆ ಬೆದರಿಕೆ ಹಾಕಿದ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ವ್ಯಾಪಕ ಆಕ್ರೋಶ

ಒಂದು ವರ್ಗದ ವಿರುದ್ಧ ದ್ವೇಷ ಕಾರುವ ಹೇಳಿಕೆ ಸರಿಯಲ್ಲ: ಶಾಸಕ ಸ್ವರೂಪ್

Update: 2023-05-16 20:50 IST

ಹಾಸನ: 'ಶಾಂತಿಯನ್ನು ಕದಡುವುದು ಸುಲಭದ ಕೆಲಸ, ಆದರೆ ಶಾಂತಿಯನ್ನು ಸ್ಥಾಪಿಸುವುದು ಸುಲಭದ ಕೆಲಸವಲ್ಲ. ನಾವು ಶಾಂತಿಗಾಗಿ ನೆಮ್ಮದಿಗಾಗಿ ಶ್ರಮಿಸಬೇಕು, ಸೋಲು ಗೆಲುವನ್ನು ಸಮಾನಂತರವಾಗಿ ಸ್ವೀಕರಿಸಬೇಕು' ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಹೇಳಿದ್ದಾರೆ. 

ಮಾಜಿ ಶಾಸಕ, ಬಿಜೆಪಿ ಪರಾಜಿತ ಅಭ್ಯರ್ಥಿ ಪ್ರೀತಂ ಗೌಡ ಅವರು ಮತದಾರರಿಗೆ ಬೆದರಿಕೆ ಹಾಕುವ ಮಾತುಗಳನ್ನಾಡಿರುವ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ 'ವಾರ್ತಾ ಭಾರತಿ'ಗೆ ಪ್ರತಿಕ್ರಿಯಿಸಿದ ಸ್ವರೂಪ್, ಒಂದು ವರ್ಗದ ವಿರುದ್ಧ ದ್ವೇಷ ಕಾರುವ ಹೇಳಿಕೆ ನೀಡುತ್ತಿರುವ ಮಾಜಿ ಶಾಸಕ ಪ್ರೀತಂ ಜೆ ಗೌಡ ಹೇಳಿಕೆಯನ್ನು ರಾಜಕೀಯವಾಗಿ ಸರಿಯಾದ ನಡೆಯಲ್ಲ ಎಂದು ವಿಶ್ಲೇಷಿಸಿದರು.

ಸೋಲು ಗೆಲುವನ್ನು ಸಮಾನಂತರವಾಗಿ ಸ್ವೀಕರಿಸಿದರೆ ಮಾತ್ರ, ನಾವು ರಾಜಕಾರಣದಲ್ಲಿ ಉಳಿದುಕೊಳ್ಳಲು ಸಾಧ್ಯ.  ಸೋತಾಗ ನಮ್ಮ ಕುಟುಂಬ ದ್ವೇಷ ಮಾಡಲಿಲ್ಲ ಜನರೊಂದಿಗೆ ಮತ್ತಷ್ಟು ಪ್ರೀತಿಯಿಂದ ನಡೆದುಕೊಂಡೆವು,   ಸೌಹಾರ್ದತೆಯಿಂದ ನಡೆದುಕೊಂಡಿದ್ದೇವೆ ಹಾಗಾಗಿ ಇಂದಿಗೂ ಸಹ ನಾವು ಜನರೊಂದಿಗೆ ಇದ್ದೇವೆ ಜನರು ನಮ್ಮ ಕೈ ಬಿಟ್ಟಿಲ್ಲ ಎಂದು ಹೇಳಿದರು. 

ಒಂದು ವರ್ಗ ಮತ ನೀಡಲಿಲ್ಲ ಎಂದು ದ್ವೇಷ ಕಾರುವುದು ಸರಿಯಲ್ಲ, ಚುನಾವಣೆಯಲ್ಲಿ ಅತಿರಥ ಮಹಾರಥರು ಸೋತಿದ್ದಾರೆ.  ಜನತಾ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.

ಮತ ನೀಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಇರುವ ಸ್ವಾತಂತ್ರ್ಯ ಅವರು ಯಾರಿಗೂ ಬೇಕಾದರೂ ಮತ ಹಾಕುತ್ತಾರೆ ಅದನ್ನು ಪ್ರಶ್ನಿಸುವುದು ಪರೋಕ್ಷವಾಗಿ ಬೆದರಿಕೆ ಹಾಕುವಂತಹ ಪ್ರಯತ್ನಕ್ಕೆ ಮುಂದಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದದ್ದು ಎಂದರು.

ನನಗೆ ಕೆಲವು ಬಿಜೆಪಿಯ ಗೆಳೆಯರು ಮತ ಹಾಕಿದ್ದಾರೆ ಇದು ನನ್ನ ಮೇಲಿನ ಅಭಿಮಾನದಿಂದ ಇದು ಅವರ ಹಕ್ಕು ಇದನ್ನ ಅರ್ಥಮಾಡಿಕೊಳ್ಳಬೇಕು ಎಂದರು.

ನಮಗೆ ಮತ ನೀಡಿದರೆ ಅದು ಭಿಕ್ಷೆ, ಅವರಿಗೆ ಮತ ನೀಡಿದರೆ ಮತ ಎಂದು ಪರಿಗಣಿಸಿ ಸಾರ್ವಜನಿಕವಾಗಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಇದನ್ನೆಲ್ಲ ಬಿಟ್ಟು ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮೊಂದಿಗೆ ಕೈಜೋಡಿಸಲಿ ಎಂದು ಹೇಳಿದರು.

ಇನ್ನು ಕಾಂಗ್ರೆಸ್ ಮುಖಂಡ ಎಚ್.ಕೆ ಮಹೇಶ್ ಪ್ರತಿಕ್ರಿಯಿಸಿ, ''ಯಾವ ವರ್ಗವೆಂದು ನಿರ್ದಿಷ್ಟವಾಗಿ ಪ್ರೀತಂಜೆ ಗೌಡ ಹೇಳಿಲ್ಲ. ಪಿತಂ ಗೌಡರವರ ಭ್ರಷ್ಟಾಚಾರ ಕಂಡು ಆರೆಸ್ಸೆಸ್ಸಿನ ಒಂದು ವರ್ಗ ಇವರಿಗೆ ಮತ ನೀಡದಿರಬಹುದು. ಇವರ ಜೊತೆಯಲ್ಲೇ ಇದ್ದು ಇವರ ಜೊತೆ ತಿಂದು ಉಂಡು ಇವರಿಗೆ ಬೆನ್ನಿಗೆ ಚೂರಿ ಹಾಕಿರಬಹುದು, ಈ ಕುರಿತು ಸಹ ಅವರು ಹೇಳಿರಬಹುದು'' ಎಂದು ತಿಳಿಸಿದರು. 

''ಪ್ರೀತಮ್ ಜೆ  ಗೌಡ ಮುಸ್ಲಿಂ ಜನಾಂಗವನ್ನು ಕುರಿತು  ಹೇಳಿದಂತೆ ಕಂಡುಬರುತ್ತದೆ. ಮುಸ್ಲಿಮರನ್ನು ಯಾವ ಪಕ್ಷವು ಗುತ್ತಿಗೆ ಪಡೆದಿಲ್ಲ. ಸೋತ ನಂತರ ಒಂದು ಜನಾಂಗವನ್ನು ಬೆಟ್ಟು ಮಾಡುವ ಚಾಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೂ ಇದೆ .ಬಿಜೆಪಿ ವಿರುದ್ಧ ರಾಜ್ಯದ ಎಲ್ಲಾ ವರ್ಗದ ಮತದಾರರು ತಿರಸ್ಕಾರ ಮಾಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಮತ ನೀಡಿಲ್ಲ ಇದಕ್ಕೆ ಇವರ ಅಡಳಿತವೇ ಕಾರಣವಾಗಿದೆ. ಪ್ರೀತಂ ಗೌಡರಿಗೆ ಮುಸ್ಲಿಮರ ಮತಗಳ ಅಗತ್ಯವಿದ್ದರೆ ಇವರು ಭ್ರಷ್ಟಾಚಾರಿ ಹಾಗೂ ಕೋಮುವಾದಿ ಪಕ್ಷ ಬಿಜೆಪಿ ಬಿಟ್ಟು ಪಕ್ಷೇತರರಾಗಿ ಸ್ಪರ್ಧಿಸಬೇಕಾಗಿತ್ತು. ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿ ಪಕ್ಷ ಕಿತ್ತುಕೊಂಡಿತು, ಹಿಜಾಬ್ ಹಲಾಲ್ ಕಟ್ ಸೇರಿದಂತೆ ಅನೇಕ ವಿಚಾರಗಳನ್ನು ತಂದು ಜನವಿರೋಧಿಯಾಗಿ ವರ್ತಿಸಿತು, ಇದರ ಪರಿಣಾಮ ಯಾವ ವರ್ಗವು ಸಹ ಇವರಿಗೆ ಮತ ನೀಡಿಲ್ಲ''

ಧರ್ಮೇಶ್, ಮುಖಂಡರು ಸಿಪಿಐಎಂ- ಹಾಸನ 


ಪ್ರೀತಂ ಗೌಡ ಹೇಳಿದ್ದೇನು?

''ಒಂದು ವರ್ಗದ ಜನ ಏನು ನಮಗೆ ತೋರಿಸಿದ್ದಾರೆ, ಆ ವರ್ಗದ ಜನರಿಗೆ ಮುಂದಿನ ದಿನಗಳಲ್ಲಿ ನಾವೇನೆಂದು ಹಾಸನದಲ್ಲಿ ತೋರಿಸುತ್ತೇನೆ. ಇದು ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ''

''ವಿಶ್ವಾಸ, ಪ್ರೀತಿಯಿಂದ ಇಡೀ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ- ವನ್ನು ಮಾಡಿದ್ದೇನೆ. ಆ ಪ್ರಯತ್ನದ ನಡುವೆಯೂ ನನ್ನನ್ನು ದ್ವೇಷಿಸುವ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ದೇವರು ಅವರನ್ನು ಕಾಪಾಡಿಕೊಳ್ಳಲಿ. ಪ್ರೀತಂ ಗೌಡನ ಶಕ್ತಿ ಏನೆಂಬುದನ್ನು ತೋರಿಸುತ್ತೇನೆ'' ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

Similar News